ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಬಿಸ್‌: ರಾಜ್ಯದಲ್ಲಿ 25 ಮಂದಿ ಸಾವು

ವಿಶ್ವ ರೇಬಿಸ್ ದಿನದ ಪ್ರಯುಕ್ತ ಆರೋಗ್ಯ ಇಲಾಖೆಯಿಂದ ರೋಗದ ಬಗ್ಗೆ ಜಾಗೃತಿ
Published 27 ಸೆಪ್ಟೆಂಬರ್ 2023, 16:30 IST
Last Updated 27 ಸೆಪ್ಟೆಂಬರ್ 2023, 16:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ರೇಬಿಸ್ ಕಾಯಿಲೆಗೆ ಕಳೆದ ವರ್ಷ 41 ಮಂದಿ ಮೃತಪಟ್ಟಿದ್ದರು. ಈ ವರ್ಷ ಜುಲೈ ಅಂತ್ಯಕ್ಕೆ 25 ಮಂದಿ ಮರಣ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿಶ್ವ ರೇಬಿಸ್‌ ದಿನದ ಪ್ರಯುಕ್ತ ಇಲಾಖೆಯು ಗುರುವಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ‘ಲೂಯಿ ಪಾಶ್ಚರ್ ಅವರ ಸ್ಮರಣಾರ್ಥ ರೇಬಿಸ್ ದಿನ ಆಚರಿಸಲಾಗುತ್ತಿದೆ. ಈ ರೋಗವು ನಾಯಿಗಳ ಕಡಿತದಿಂದ ಹರಡುತ್ತದೆ. ಇದು ಮಾರಣಾಂತಿಕ ಕಾಯಿಲೆಯಾಗಿದ್ದು, ಸಮಯೋಚಿತ ವೈದ್ಯಕೀಯ ಚಿಕಿತ್ಸೆಯ ಮೂಲಕ ವಾಸಿ ಮಾಡಬಹುದು. ರೋಗ ನಿರ್ಮೂಲನೆಗೆ ಲಸಿಕೆಗಳು, ಔಷಧಗಳು ಹಾಗೂ ಎಲ್ಲಾ ವಿಧದ ಚಿಕಿತ್ಸಾ ಸೇವೆಗಳನ್ನು ಉಚಿತವಾಗಿ ಸರ್ಕಾರ ಒದಗಿಸುತ್ತಿದೆ’ ಎಂದು ಇಲಾಖೆ ಹೇಳಿದೆ. 

‘ರಾಷ್ಟ್ರೀಯ ರೋಗ ನಿಯಂತ್ರಣದ ಸಂಸ್ಥೆಯ ರಾಷ್ಟ್ರೀಯ ರೇಬಿಸ್‌ ನಿರ್ಮೂಲನ ಕ್ರಿಯಾ ಯೋಜನೆಯ ವರದಿಯಂತೆ, ವಿಶ್ವದಾದ್ಯಂತ ಸಂಭವಿಸುವ ರೇಬಿಸ್ ಸಾವಿನ ಪ್ರಕರಣಗಳಲ್ಲಿ ಶೇ 36 ರಷ್ಟು ಪ್ರಕರಣಗಳು ನಮ್ಮ ದೇಶದಲ್ಲಿಯೇ ವರದಿಯಾಗುತ್ತಿವೆ. ಈ ರೋಗದಿಂದ ಪ್ರತಿ ವರ್ಷ 18 ಸಾವಿರದಿಂದ 20 ಸಾವಿರ ಜನರು ಮೃತಪಡುತ್ತಿದ್ದಾರೆ. ಇವರಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಮಕ್ಕಳಿಗೆ ನಾಯಿ ಕಚ್ಚಿದರೆ ಹೆಚ್ಚಿನ ಸಂದರ್ಭಗಳಲ್ಲಿ ಪೋಷಕರು ಅಥವಾ ಸಂಬಂಧಪಟ್ಟವರ ಗಮನಕ್ಕೆ ಬರುವುದಿಲ್ಲ. ಇದು ಕೂಡಾ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ’ ಎಂದು ತಿಳಿಸಿದೆ.

‘ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಎಲ್ಲಾ ಪ್ರಾಣಿ ಕಡಿತದ ಪ್ರಕರಣಗಳಿಗೂ (ಹಾವು ಕಡಿತ ಹೊರತುಪಡಿಸಿ) ಈ ಯೋಜನೆಯಡಿ ಸೌಲಭ್ಯ ಪಡೆಯಬಹುದಾಗಿದೆ. ರೇಬಿಸ್ ನಿರೋಧಕ ಲಸಿಕೆಯು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ. ‘ರೇಬಿಸ್‌ ಇಮ್ಯುನೋಗ್ಲಾಬ್ಯುಲಿನ್’ (RIG) ಚುಚ್ಚುಮದ್ದು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಲ್ಲಿ ದೊರೆಯುತ್ತದೆ. ಈ ಚಿಕಿತ್ಸೆಯು ಸಂಪೂರ್ಣ ಉಚಿತವಾಗಿದ್ದು‌, ಜನರು ರೇಬಿಸ್‌ ಕಾಯಿಲೆಗೆ ಭಯ ಪಡಬೇಕಾದ ಅಗತ್ಯವಿಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT