ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಜಲ ದಿನ, ಪ್ರಜಾವಾಣಿ@75 ಸಂಭ್ರಮ: ನೀರಿಗಾಗಿ ‘ಪ್ರಜಾವಾಣಿ’ ನಡಿಗೆ

ಚಿಣ್ಣರಿಂದ ಹಿರಿಯರವರೆಗೆ ವಾಕಥಾನ್‌ನಲ್ಲಿ ಬತ್ತದ ಉತ್ಸಾಹ
Last Updated 1 ಏಪ್ರಿಲ್ 2023, 20:03 IST
ಅಕ್ಷರ ಗಾತ್ರ

ಬೆಂಗಳೂರು: ಮೂಡಣದಿಂದ ಸೂರ್ಯನ ಕಿರಣಗಳು ರಸ್ತೆ ಮೇಲೆ ಚೆಲ್ಲುವಷ್ಟರೊಳಗೆ ಶ್ವೇತ ಟೀಶರ್ಟ್‌ಧಾರಿಗಳ ಸಾಲೊಂದು ಎಂ.ಜಿ. ರಸ್ತೆಯಲ್ಲಿ ಹೊರಟಿತು.

ವಿಶ್ವಜಲ ದಿನ ಮತ್ತು ಪ್ರಜಾವಾಣಿ@75 ಅಂಗವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಶನಿವಾರ ಆಯೋಜಿಸಿದ್ದ ‘ನೀರಿಗಾಗಿ ನಡಿಗೆ’ ಕಾರ್ಯಕ್ರಮದ ಝಲಕ್ ಇದು.

ಈ ವಾಕಥಾನ್‌ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಸ್ಕಾಂ, ಪಿಇಎಸ್‌ ವಿಶ್ವವಿದ್ಯಾಲಯ, ಮಣಿಪಾಲ್ ಆಸ್ಪತ್ರೆ ಮತ್ತು ಹಟ್ಟಿ ಕಾಫಿ ಸಹಯೋಗ ನೀಡಿದ್ದವು.

ನೋಂದಣಿ ಮಾಡಿಕೊಂಡಿದ್ದ 300ಕ್ಕೂ ಹೆಚ್ಚು ಜನ ಲಗುಬಗೆಯಿಂದ ಬೆಳಿಗ್ಗೆ 6ರ ಹೊತ್ತಿಗೆ ಜಮಾಯಿಸಿದ್ದರು. ಬಿಳಿ ಬಣ್ಣದ ಟೀಶರ್ಟ್, ನೀಲಿ ಬಣ್ಣದ ಟೋಪಿ ಧರಿಸಿ ನೀರಿಗಾಗಿ ನಡೆಯಲು ಸಂಭ್ರಮದಿಂದ ಸಜ್ಜಾದರು. ನೋಂದಣಿ ಮಾಡಿಸಿಕೊಳ್ಳದವರೂ ನಡಿಗೆಯ ಸುದ್ದಿ ತಿಳಿದು ‘ಪ್ರಜಾವಾಣಿ’ಯ ಸದುದ್ದೇಶಕ್ಕೆ ಹೆಜ್ಜೆ ಹಾಕಿ ಬೆಂಬಲ ನೀಡಿದರು.

ಟ್ರಿನಿಟಿ ವೃತ್ತದಿಂದ ನಡಿಗೆ ಆರಂಭವಾಯಿತು. ನಗರ ಪೊಲೀಸ್ ಕಮಿಷನರ್ ಪ್ರತಾಪ ರೆಡ್ಡಿ, ಸಂಚಾರ ವಿಭಾಗದ ವಿಶೇಷ ಕಮಿಷನರ್ ಎಂ.ಎ.ಸಲೀಂ ಹಾಗೂ ಚಲನಚಿತ್ರ ನಟ ರಿಷಿ ಅವರು ನಡಿಗೆಗೆ ಚಾಲನೆ ನೀಡಿದರು. ಯುವಕ–ಯುವತಿಯರಷ್ಟೇ ಅಲ್ಲದೆ ಹಿರಿಯರು, ಮಕ್ಕಳೂ ನಡಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ಮಕ್ಕಳೊಂದಿಗೆ ಅತಿಥಿಗಳೂ ಸಂಭ್ರಮದಿಂದ ನಡೆದದ್ದು ಗಮನಾರ್ಹ.

‘ನೆಮ್ಮದಿಯ ನಾಳೆಗೆ ಇರಲಿ ಉಳಿತಾಯದ ಸಂಕಲ್ಪ’, ‘ಉಳಿದರೆ ನೀರು, ನೆಮ್ಮದಿಯ ತೇರು’, ‘ನೀರು ಮಿತವಾಗಿ ಬಳಸಿ, ಮುಂದಿನ ಪೀಳಿಗೆಗೆ ಉಳಿಸಿ’ ಎಂಬಿತ್ಯಾದಿ ಬರಹಗಳನ್ನು ಒಳಗೊಂಡ ಹಳದಿ ಬಣ್ಣದ ಫಲಕಗಳನ್ನು ಹಿಡಿದು ಹೊರಟ ನಡಿಗೆ ಎಂ.ಜಿ.ರಸ್ತೆಯ ‘‍ಪ್ರಜಾವಾಣಿ’ ಕಚೇರಿ ಬಳಿಗೆ ಬಂದಿತು.

ನಡಿಗೆಯಲ್ಲಿ ಪಾಲ್ಗೊಂಡಿದ್ದವರು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಕಚೇರಿಯ ಮುಂದೆ ನೀರಿನ ಮಹತ್ವದ ಕುರಿತು ಘೋಷಣೆ ಕೂಗಿದರು. 75ನೇ ವರ್ಷದಲ್ಲಿರುವ ‘ಪ್ರಜಾವಾಣಿ’ಯು ಸಮಾಜ ಮತ್ತು ಜೀವಜಲದ ಕುರಿತು ಹೊಂದಿರುವ ಕಳಕಳಿಯನ್ನು ಕೊಂಡಾಡಿದರು. ‘ಪ್ರಜಾವಾಣಿ’ಯ ‍ಪಾರಂಪರಿಕ ಕಟ್ಟಡದ ಎದುರು ನಿಂತು ಸೆಲ್ಫಿ ತೆಗೆದುಕೊಂಡರು.

ಅಲ್ಲಿಂದ ಮತ್ತೆ ಹೊರಟ ನಡಿಗೆ ಅನಿಲ್‌ ಕುಂಬ್ಳೆ ವೃತ್ತ, ಗಾಂಧಿ ವೃತ್ತ, ಮಿನ್ಸ್‌ ಸ್ಕ್ವೇರ್‌ ಮಾರ್ಗವಾಗಿ ವಿಧಾನಸೌಧ ತಲುಪಿತು. ಅಲ್ಲಿಯೂ ಕೆಲಕಾಲ ನೀರಿನ ಮಹತ್ವದ ಕುರಿತು ಜನರಿಗೆ ತಿಳಿವಳಿಕೆ ನೀಡಲಾಯಿತು.

ಕಬ್ಬನ್ ಉದ್ಯಾನದಲ್ಲಿರುವ ಪ್ರೆಸ್‌ಕ್ಲಬ್ ಆವರಣದಲ್ಲಿ ನಡಿಗೆ ಸಮಾರೋಪಗೊಂಡಿತು. ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜೀವಜಲ ರಕ್ಷಿಸುವ ಮಹತ್ಕಾರ್ಯದಲ್ಲಿ ಭಾಗವಹಿಸಿದ್ದವರು ಧನ್ಯತಾ ಭಾವದೊಂದಿಗೆ ಹೊಸದೊಂದು ಸಂಕಲ್ಪ ತೊಟ್ಟು ಮರಳಿದರು.

ಪ್ರಮಾಣಪತ್ರ ವಿತರಣೆ

ನೀರಿಗಾಗಿ ನಡಿಗೆಯ ಸಮಾರೋಪ ಸಮಾರಂಭ ಕಬ್ಬನ್‌ ಉದ್ಯಾನ ಬಳಿಯ ಪ್ರೆಸ್‌ಕ್ಲಬ್‌ ಆವರಣದಲ್ಲಿ ನಡೆಯಿತು. ನಡಿಗೆಯಲ್ಲಿ ಪಾಲ್ಗೊಂಡು ಮೊದಲು ಗುರಿ ಮುಟ್ಟಿದ 15 ಮಂದಿಗೆ ನಟ ರಿಷಿ, ‘‍ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್ಟ, ಡೆಪ್ಯುಟಿ ಎಡಿಟರ್‌ ಎಂ.ನಾಗರಾಜ ಅವರು ಪ್ರಮಾಣಪತ್ರ ವಿತರಿಸಿದರು.

ವಾಕಥಾನ್‌ನಲ್ಲಿ ಹೆಜ್ಜೆ ಹಾಕಿದ ಪುಟಾಣಿಗಳಾದ ಪವನ್, ಪ್ರತೀಕ್ಷಾ, ಸಂಜನಾ, ಜ್ಯೋತಿಷಾ ಅವರು ಖುಷಿಯಿಂದ ಪ್ರಮಾಣಪತ್ರ ಸ್ವೀಕರಿಸಿದರು.

ಚಂದ್ರಶೇಖರ್‌, ವೆಂಕಟರಾಮನ್‌, ಕರುಣಾಕರ್, ಹರೀಂದ್ರ, ಶುಭಾಷ್‌ ಶೆಟ್ಟಿ, ಮದನ್‌ ಮೋಹನ್‌, ರಕ್ಷನ್‌, ಪ್ರದೀಪ್‌, ವೇದವ್ಯಾಸ್‌, ಕುಮಾರ್‌, ಮಂಗಳಮ್ಮ ಸೇರಿದಂತೆ ಹಲವರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.

‘ಪ್ರಜಾವಾಣಿ’ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್ ಲೆಸ್ಲಿ, ಡಿಜಿಎಂ ರವಿ ಬಿ.ಎ. ನಡಿಗೆಯಲ್ಲಿ ಪಾಲ್ಗೊಂಡಿದ್ದರು.

***

‘ನೀರು: ಕಾಳಜಿ ವಹಿಸಿ’

ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ಜೀವಜಗತ್ತು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ.
ಇಂತಹ ಕಠಿಣ ಸಂದರ್ಭದಲ್ಲಿ ನಾವೆಲ್ಲರೂ ನೀರಿನ ಮಹತ್ವವನ್ನು ಅರಿತುಕೊಳ್ಳಬೇಕು. ನೀರು ಉಳಿಸುವ ಬಗ್ಗೆ ಕಾಳಜಿ ವಹಿಸಬೇಕು. ಬೇರೆಯವರಲ್ಲೂ ಜಾಗೃತಿ ಮೂಡಿಸಬೇಕು.

ಪ್ರತಾಪ್‌ ರೆಡ್ಡಿ, ನಗರ ಪೊಲೀಸ್‌ ಕಮಿಷನರ್‌, ಬೆಂಗಳೂರು

**

‘ನೀರನ್ನು ಮಿತವಾಗಿ ಬಳಸಿ’

ಜನಸಂಖ್ಯೆ ಹೆಚ್ಚಳದಿಂದ ನೀರಿನ ಅವಶ್ಯಕತೆ ಇಂದು ಹೆಚ್ಚಾಗಿದೆ. ನೀರನ್ನು ಮಿತವಾಗಿ ಬಳಸಬೇಕು. ಮುಂದಿನ ಪೀಳಿಗಾಗಿ ನಾವು ಪ್ರಾಕೃತಿಕ ಸಂಪನ್ಮೂಲವನ್ನು ಉಳಿಸಬೇಕು.

ಎಂ.ಎ.ಸಲೀಂ, ವಿಶೇಷ ಕಮಿಷನರ್‌ (ಸಂಚಾರ ವಿಭಾಗ), ಬೆಂಗಳೂರು

**

ಮಳೆ ನೀರು ಸಂಗ್ರಹದಿಂದ ಅಂತರ್ಜಲ ವೃದ್ಧಿ

ಪ್ರಕೃತಿ ನಮಗೆ ಸಮೃದ್ಧವಾಗಿ ನೀರು ನೀಡಿದೆ. ಅದನ್ನು ಹಿತಮಿತವಾಗಿ ಬಳಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಸಾಧ್ಯವಾದ ಎಲ್ಲ ಸ್ಥಳಗಳಲ್ಲೂ ಮಳೆ ನೀರು ಸಂಗ್ರಹ ಯೋಜನೆ ಅಳವಡಿಸಿಕೊಂಡರೆ ಅಂತರ್ಜಲ ವೃದ್ಧಿ ಆಗಲಿದೆ. ಹೊಸ ಮನೆ ನಿರ್ಮಿಸುವವರು ಮೊದಲು ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು.

ರಿಷಿ, ಚಲನಚಿತ್ರ ನಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT