ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಗಾಯಗೊಂಡ ಕಾಡುಪಾಪ ಸಂರಕ್ಷಣೆ

Last Updated 27 ಜುಲೈ 2021, 4:39 IST
ಅಕ್ಷರ ಗಾತ್ರ

ಬೆಂಗಳೂರು: ಸದಾಶಿವನಗರದಲ್ಲಿ ಗಾಯಗೊಂಡಿದ್ದ ಕಾಡುಪಾಪವನ್ನು (ಸ್ಲೆಂಡರ್‌ ಲೋರಿಸ್‌) ಸ್ಥಳೀಯರ ನೆರವಿನಿಂದ ವನ್ಯಜೀವಿ ಕಾರ್ಯಕರ್ತರು ಸೋಮವಾರ ಸಂರಕ್ಷಣೆ ಮಾಡಿದ್ದಾರೆ.

‘ಸದಾಶಿವನಗರದ ಈಜುಕೊಳದ ಬಳಿ ಬಿದ್ದಿದ್ದ ಕಾಡುಪಾಪವನ್ನು ಸ್ಥಳೀಯರಾದ ಮುರುಗೇಶ್ ಹಾಗೂ ವಿ.ಜಿ.ಪರಶುರಾಮ ಸೇರಿ ರಕ್ಷಿಸಿದ್ದರು. ಬಳಿಕ ನಮಗೆ ಮಾಹಿತಿ ನೀಡಿದ್ದರು. ಗೌರವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್‌ ಹಾಗೂ ನಾನು ಸ್ಥಳಕ್ಕೆ ತೆರಳಿ ನೋಡಿದಾಗ ಅದು ಗಾಯಗೊಂಡಿರುವುದು ಕಂಡು ಬಂತು. ಹೆಚ್ಚಿನ ಆರೈಕೆಗಾಗಿ ಅದನ್ನು ಬನ್ನೇರುಘಟ್ಟದ ವನ್ಯಜೀವಿಗಳ ಆಸ್ಪತ್ರೆಗೆ ಒಪ್ಪಿಸಿದ್ದೇವೆ’ ಎಂದು ವನ್ಯಜೀವಿ ಸಂರಕ್ಷಕ ಮತ್ತು ಜೀವವೈವಿಧ್ಯ ಮಂಡಳಿಯ ಸಹಾಯ ಸಂಶೋಧಕ ಎಸ್‌.ಪ್ರೀತಮ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಾಡುಪಾಪದ ಬಲಗೈಗೆ ಸ್ವಲ್ಪ ಗಾಯವಾಗಿದೆ. ಹಾಗಾಗಿ ಅದಕ್ಕೆ ಮರದಲ್ಲಿ ಕೊಂಬೆಯಿಂದ ಕೊಂಬೆಗೆ ಜಿಗಿಯಲು ಸಾಧ್ಯವಾಗುತ್ತಿಲ್ಲ. ಎರಡು ದಿನಗಳಿಂದ ಸತತ ಮಳೆಯೂ ಬರುತ್ತಿದೆ. ಮಳೆಯಲ್ಲಿ ಸಿಲುಕಿದ್ದ ಈ ಪ್ರಾಣಿ ಆಹಾರ ಸಿಗದೆ ಕಂಗಾಲಾಗಿತ್ತು. ನಾವು ನೀಡಿದ ಪಪ್ಪಾಯವನ್ನು ಸೇವಿಸಿದೆ. ಕೆಲ ದಿನಗಳ ಶುಶ್ರೂಷೆ ಬಳಿಕ ಇದು ಚೇತರಿಸಿಕೊಳ್ಳಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಅಳಿವಿನಂಚಿನಲ್ಲಿರುವ ಪ್ರಭೇದವಾಗಿರುವ ಕಾಡುಪಾಪ ವಿಶೇಷ ಹಾಗೂ ಅಪರೂಪದ ಪ್ರಾಣಿ. ರಾತ್ರಿ ಸಂಚರಿಸುವ ಈ ಪ್ರಾಣಿ ಮನುಷ್ಯರಿಗೆ ಕಾಣಸಿಗುವುದು ವಿರಳ. 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಅನುಬಂಧ-1ರ ಅಡಿಯಲ್ಲಿ ಇದಕ್ಕೆ ವಿಶೇಷ ರಕ್ಷಣೆ ಒದಗಿಸಲಾಗಿದೆ. ಇಂತಹ ವನ್ಯಜೀವಿಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಸಾಂವಿಧಾನಿಕ ಕರ್ತವ್ಯ’ ಎಂದು ಎಂದರು.

‘ಕಾಡುಪಾಪದಂತಹ ಅಪರೂಪದ ವನ್ಯಜೀವಿಗಳ ಸಂತತಿ ನಶಿಸುತ್ತಿದೆ. ಇವುಗಳ ರಕ್ಷಣೆಗೆ ಬಿಬಿಎಂಪಿಯ ವನ್ಯಜೀವಿ ಸಂರಕ್ಷಣಾ ತಂಡ ಸದಾ ಸನ್ನದ್ಧವಾಗಿದೆ. ಸಾರ್ವಜನಿಕರು ಇಂತಹ ವನ್ಯಪ್ರಾಣಿಗಳು ಅಪಾಯಕ್ಕೆ ಸಿಲುಕಿದ್ದನ್ನು ಕಂಡರೆ ಈ ತಂಡಕ್ಕೆ ಮಾಹಿತಿ ನೀಡುವ ಮೂಲಕ ಅವುಗಳ ರಕ್ಷಣೆಗೆ ಸಹಕರಿಸಬೇಕು’ ಎಂದು ಪ್ರಸನ್ನ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT