ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪಠ್ಯದಲ್ಲಿ ಸಿದ್ಧಾಂತ ತುರುಕಲಾಗುತ್ತಿದೆ: ಕೋಟಿಗಾನಹಳ್ಳಿ ರಾಮಯ್ಯ ಬೇಸರ

ಬಹುರೂಪಿಯಿಂದ ಹತ್ತು ಪುಸ್ತಕಗಳು ಬಿಡುಗಡೆ
Published 9 ಸೆಪ್ಟೆಂಬರ್ 2023, 13:54 IST
Last Updated 9 ಸೆಪ್ಟೆಂಬರ್ 2023, 13:54 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಲಾ ಪಠ್ಯಗಳಿಗೆ ಚೌಕಟ್ಟು ಹಾಕಿ, ಸಿದ್ಧಾಂತಗಳನ್ನು ತುರುಕುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಬೇಸರ ವ್ಯಕ್ತಪಡಿಸಿದರು. 

ಬಹುರೂಪಿ ಪ್ರಕಾಶನ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಂಬಂಧಿಸಿದ 10 ಅನುವಾದಿತ ಕೃತಿಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು.

‘ಮಕ್ಕಳಿಗೆ ಅವರ ಲೋಕವನ್ನು ಉಳಿಸಿ ಹೋಗಲು ಸಾಧ್ಯವೆ? ಎಲ್ಲ ಮಕ್ಕಳನ್ನು ಮಕ್ಕಳೆಂದು ಸ್ವೀಕರಿಸುವ ವಾತಾವರಣ ಇದೆಯೆ? ಮಕ್ಕಳ ಬೇಕು ಬೇಡಗಳನ್ನು ನಿರ್ಧರಿಸುವವರು ಯಾರು? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟ. ಮಕ್ಕಳಿಗೆ ಉತ್ತಮ ಪಠ್ಯವನ್ನು ಒದಗಿಸಬೇಕು. ಆದರೆ, ಈ ಕೆಲಸ ಮಾಡಬೇಕಾದವರು ಪಠ್ಯದಲ್ಲಿ ವಿಷಬೀಜವನ್ನು ಬಿತ್ತುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಲಿಕೆಗೆ ಚೌಕಟ್ಟುಗಳನ್ನು ಹಾಕುತ್ತಿರುವುದರಿಂದ ಮಕ್ಕಳು ಸಂಕುಚಿತರಾಗುತ್ತಿದ್ದಾರೆ. ಪಠ್ಯಪುಸ್ತಕ ಪ್ರಕಟಣೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜ್ಞಾನ ಬರಹಗಾರ ನಾಗೇಶ್ ಹೆಗಡೆ, ‘ಗ್ರಾಮೀಣ ಭಾರತದಲ್ಲಿ ಉಳಿಯಬೇಕಾದದ್ದು ಉಳಿಯುತ್ತಿಲ್ಲ, ಕಳೆಯಬೇಕಾದದ್ದು ಕಳೆಯುತ್ತಿಲ್ಲ. ಕಲಾ ವೈವಿಧ್ಯತೆ, ಜೀವ ವೈವಿಧ್ಯತೆಗಳು ಗ್ರಾಮೀಣ ಭಾಗದಿಂದ ಮರೆಯಾಗುತ್ತಿವೆ. ಆದರೆ, ಮೂಢನಂಬಿಕೆಯಂತಹ ಆಚರಣೆಗಳು ಇನ್ನೂ ಜೀವಂತವಾಗಿಯೇ ಉಳಿದಿವೆ. ಹೀಗಾಗಿ, ವಿಶಿಷ್ಟ ಕಾಲಘಟ್ಟದಲ್ಲಿ ನಾವಿದ್ದೇವೆ. ಪುಸ್ತಕಗಳನ್ನು ಓದುಗರಿಗೆ ತಲುಪಿಸಲು ಸಹ ಹಲವಾರು ಅಡೆತಡೆಗಳಿವೆ. ಕನ್ನಡದ ಪುಸ್ತಕಗಳನ್ನು ಶಾಲೆಗಳಿಗೆ ನೀಡಬೇಕೆಂದರೆ ಕನ್ನಡ ಮಾಧ್ಯಮ ಶಾಲೆಗಳೇ ಕಣ್ಮರೆಯಾಗುತ್ತಿವೆ. ಕನ್ನಡ ಓದುವ ಮಕ್ಕಳೂ ಸಿಗುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳು ಪುಸ್ತಕಗಳನ್ನು ತಲುಪಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು. 

ಗಾಯಕಿ ಎಂ.ಡಿ. ಪಲ್ಲವಿ, ‘ಮಕ್ಕಳ ಕಥೆಗಳು ಹಾಗೂ ಪದ್ಯಗಳು ಅಷ್ಟಾಗಿ ನಮ್ಮ ಭಾಷೆಯಲ್ಲಿ ಇಲ್ಲ. ಹಾಗಾಗಿ, ಅವುಗಳನ್ನು ಸೃಷ್ಟಿಸುವ ಕೆಲಸ ಆಗಬೇಕು’ ಎಂದು ತಿಳಿಸಿದರು. 

ಬಿಡುಗಡೆಯಾದ ಪುಸ್ತಕಗಳು

‘ಸ್ನೇಹಗ್ರಾಮದ ಸಂಸತ್ತು’ ‘ನಂದಿನಿ ಎಂಬ ಜಾಣೆ’ ‘ಮರಳಿ ಮನೆಗೆ’ ‘ಟಿಕೆಟ್ ಇಲ್ಲ ಪ್ರಯಾಣ ನಿಲ್ಲಲ್ಲ’ ‘ಗೆದ್ದೇ ಬಿಟ್ಟೆ..!’ ‘ಲೇಡಿ ಟಾರ್ಜಾನ್!’ ‘ಸೀರೆ ಉಡುವ ರಾಕ್‌ಸ್ಟಾರ್’ ‘ಈ ಪಿಕ್ ಯಾರ ಕ್ಲಿಕ್?’ ‘ಸುಂದರಬಾಗ್ ಬೀದಿಯಲ್ಲಿ ಸಡಿಯಿತೊಂದು ವಿಸ್ಮಯ’ ಹಾಗೂ ‘ಮರ ಏರಲಾಗದ ಗುಮ್ಮ’ ಕೃತಿ ಬಿಡುಗಡೆಯಾಯಿತು. ಪ್ರೀತಿ ಡೇವಿಡ್‌ ಅಪರ್ಣಾ ಕಾರ್ತಿಕೇಯನ್‌ ಸಬೂಹಿ ಜಿವಾನಿ ವಿಶಾಖ ಜಾರ್ಜ್‌ ನಿವೇಧಾ ಗಣೇಶ್‌ ಪರ್ಲ್‌ ಡಿಸಿಲ್ವ ನಂದಿತಾ ದಾ ಕುನ್ಹಾ ತಾನ್ಯಾ ಮಜುಂದಾರ್‌ ಲಾವಣ್ಯ ಕಾರ್ತೀಕ್‌ ಅವರು ಮೂಲ ಲೇಖಕರಾಗಿದ್ದು ಕನ್ನಡಕ್ಕೆ ರಾಜಾರಾಂ ತಲ್ಲೂರು ವಿ.ಗಾಯತ್ರಿ ಅಬ್ಬೂರು ಪ್ರಕಾಶ್‌ ಪ್ರಸಾದ್‌ ನಾಯ್ಕ್‌ ಸಂತೋಷ ತಾಮ್ರಪರ್ಣಿ ಎಂ.ಡಿ. ಪಲ್ಲವಿ ರಶ್ಮಿ ಎಸ್‌. ದೀಪದಮಲ್ಲಿ ಹಾಗೂ ಶ್ರೀಜಾ ವಿ.ಎನ್‌. ಅನುವಾದ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT