ಮಂಗಳವಾರ, ಅಕ್ಟೋಬರ್ 19, 2021
23 °C

ಹೊಸ ಶಿಕ್ಷಣ ನೀತಿ ಅಂಗನವಾಡಿಗಳ ಪಾಲಿನ ನೇಣುಗಂಬ: ಸಾಹಿತಿ ವಡ್ಡಗೆರೆ ನಾಗರಾಜಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹೊಸ ಶಿಕ್ಷಣ ನೀತಿ ಅಂಗನವಾಡಿ ಕೇಂದ್ರಗಳ ಪಾಲಿನ ನೇಣುಗಂಬವಾಗಿದ್ದು, ಯಾವುದೇ ಕಾರಣಕ್ಕೂ ಅಂಗನವಾಡಿ ಶಿಕ್ಷಕಿಯರು ಇದಕ್ಕೆ ಬಲಿಪಶುಗಳಾಗಬಾರದು. ಈ ನೇಣುಗಂಬವನ್ನು ನಾಶಮಾಡಲು ಸಜ್ಜಾಗಬೇಕು’ ಎಂದು ಸಾಹಿತಿ ವಡ್ಡಗೆರೆ ನಾಗರಾಜಯ್ಯ ಹೇಳಿದರು.

ಭಾನುವಾರ, ರಾಜ್ಯ ಅಂಗನವಾಡಿ ನೌಕರರ ಸಂಘ ಆಯೋಜಿಸಿದ್ದ, ‘ಹೊಸ ಶಿಕ್ಷಣ ನೀತಿ- ಅಂಗನವಾಡಿ ಕೇಂದ್ರಗಳ ಮೇಲಾಗುವ ಪರಿಣಾಮ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಹೊಸ ಶಿಕ್ಷಣ ನೀತಿಯ ಅನುಸಾರ ಅಂಗನವಾಡಿ ಕೇಂದ್ರಗಳನ್ನು ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸಿದರೆ ಅಂಗನವಾಡಿ ಶಿಕ್ಷಕಿಯರು ಮತ್ತು ನೌಕರರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಶಿಕ್ಷಣ ನೀತಿಯ ವಿರುದ್ಧದ ಹೋರಾಟ ಅನಿವಾರ್ಯವಾಗಿದೆ’ ಎಂದರು.

‘ಸನಾತನವಾದಿ ಶಿಕ್ಷಣ ವ್ಯವಸ್ಥೆಗೆ ನಾಂದಿ ಹಾಡುವುದನ್ನು ತಡೆಯಬೇಕಿದೆ. ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಾವಿತ್ರಿ ಬಾಯಿ ಫುಲೆ ಅವರ ಕನಸಿನ ಶಿಕ್ಷಣ ನಮಗೆ ಬೇಕಿದೆ’ ಎಂದು ಪ್ರತಿಪಾದಿಸಿದರು.

ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಅಧ್ಯಕ್ಷೆ ಎಸ್.ವರಲಕ್ಷ್ಮಿ, ‘ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹೇರುತ್ತಿರುವ ಉದ್ದೇಶಿತ ನೀತಿಯಲ್ಲಿನ ಬಾಲವಾಟಿಕಾದಲ್ಲಿ ಅಂಗನವಾಡಿ ಪಠ್ಯಕ್ರಮ ಏಕಿಲ್ಲ’ ಎಂದು ಪ್ರಶ್ನಿಸಿ, ‘ಇದು ವಿಶ್ವ ಹಿಂದೂ ಪರಿಷತ್ ಪ್ರತಿಪಾದಿಸುವ ಮನುವಾದಿ ಶಿಕ್ಷಣ ನೀತಿಯಾಗಿದೆ’ ಎಂದು ಕಿಡಿ ಕಾರಿದರು.

ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ‘ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ವಾಪಸು ಪಡೆಯಬೇಕು. ಐಸಿಡಿಎಸ್ ಯೋಜನೆಯನ್ನು ಕಾಯಂಗೊಳಿಸಿ 3ರಿಂದ 6 ವರ್ಷದ ಮಕ್ಕಳಿಗೆ ಉಚಿತ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು’ ಎಂದು ಒತ್ತಾಯಿಸಿದರು.

ಇದನ್ನೂ ಓದಿ... ರಾಜ್ಯದಲ್ಲಿ 1ನೇ ತರಗತಿಯಿಂದಲೇ ಶಾಲೆ ಆರಂಭಿಸಬೇಕಿತ್ತು: ಸಚಿವ ಡಾ.ಕೆ.ಸುಧಾಕರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು