ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲ್ಲಿ ಸೂಚನಾ ಫಲಕ: ಸವಾರರಿಗೆ ದಂಡದ ಬರೆ

ಸಿದ್ಧಲಿಂಗಯ್ಯ ವೃತ್ತ
Last Updated 7 ಜುಲೈ 2021, 21:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಸ್ತೂರಬಾ ರಸ್ತೆ ಮತ್ತು ವಿಠಲ ಮಲ್ಯ ರಸ್ತೆ ಮಧ್ಯದ ಸಿದ್ದಲಿಂಗಯ್ಯ ವೃತ್ತದ ಬಳಿ ಮರೆಯಲ್ಲಿ ಅಳವಡಿಸಿರುವ ಸೂಚನಾ ಫಲಕವೊಂದರಿಂದಾಗಿ ನಿತ್ಯವೂ ಹಲವಾರು ಮಂದಿ ವಾಹನ ಸವಾರರು ದಂಡ ಪಾವತಿಸುವಂತಾಗಿದೆ. ಫಲಕ ಕಣ್ಣಿಗೆ ಕಾಣಿಸದೇ ಮುಂದಕ್ಕೆ ಸಾಗಿದ್ದಕ್ಕೆ ದಂಡ ತೆತ್ತು ಹೋಗಬೇಕಾಗಿದೆ.

ಕೇಂದ್ರ ವಾಣಿಜ್ಯ ಜಿಲ್ಲೆಯ ವ್ಯಾಪ್ರಿಗೆ ಸೇರುವ ಈ ಪ್ರದೇಶ, ದಿನವಿಡೀ ಸಂಚಾರ ದಟ್ಟಣೆ ಇರುವ ಪ್ರದೇಶ. ಇಡೀ ದಿನ ಹತ್ತಾರು ಸಾವಿರ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ವಿಶ್ವೇಶ್ವರಯ್ಯ ಮ್ಯೂಸಿಯಂ ಕಡೆಯಿಂದ ಬರುವಾಗ ಜೆ.ಡಬ್ಲ್ಯು ಮ್ಯಾರಿಯಟ್‌ ಹೋಟೆಲ್‌ ಬಳಿ ವಿಠಲ ಮಲ್ಯ ರಸ್ತೆಯ ಕಡೆಗೆ ‘ಮುಕ್ತ ಎಡ ತಿರುವು ಇಲ್ಲ’ (ನೋ ಫ್ರೀ ಲೆಫ್ಟ್‌) ಎಂಬ ಫಲಕ ಅಳವಡಿಸಲಾಗಿದೆ. ಆದರೆ, ಈ ಸೂಚನಾ ಫಲಕ ಕಣ್ಣಿಗೆ ಬೀಳುವುದೇ ಕಷ್ಟ ಎಂಬಂತೆ ಮರೆಯಲ್ಲಿದೆ.

ಆ ಮಾರ್ಗವಾಗಿ ಬರುವ ವಾಹನ ಸವಾರರು, ಮುಕ್ತ ಎಡ ತಿರುವು ಇದೆ ಎಂದು ಭಾವಿಸಿ ಮುಂದಕ್ಕೆ ಸಾಗುತ್ತಿದ್ದಾರೆ. ‘ಸಿಗ್ನಲ್‌’ನಿಂದ ಕೆಲವೇ ದೂರದಲ್ಲಿ ನಿಂತುಕೊಳ್ಳುವ ಸಂಚಾರ ವಿಭಾಗದ ಪೊಲೀಸರು, ವಾಹನ ಸವಾರರನ್ನು ತಡೆದು ‘ಸೂಚನೆ ಉಲ್ಲಂಘಿಸಿದ’ ಆರೋಪದ ಮೇಲೆ ದಂಡ ವಸೂಲಿ ಮಾಡುತ್ತಿದ್ದಾರೆ.

‘ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಈ ಸ್ಥಳದಲ್ಲಿ ‘ಮುಕ್ತ ಎಡ ತಿರುವು ಇಲ್ಲ’ ಎಂಬ ಸೂಚನೆ ಉಲ್ಲಂಘಿಸಿದ ಆರೋಪದ ಮೇಲೆ 30ರಿಂದ 40 ಮಂದಿಗೆ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಹಲವು ದಿನಗಳಿಂದ ಈ ಪರಿಸ್ಥಿತಿ ಇದೆ’ ಎಂದು ಇದೇ ಮಾರ್ಗದಲ್ಲಿ ವಹಿವಾಟು ನಡೆಸುವ ಉದ್ಯಮಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೂಚನಾ ಫಲಕವನ್ನು ರಸ್ತೆಯ ಮಧ್ಯ ಭಾಗದಲ್ಲಿ ಅಳವಡಿಸಲಾಗಿದೆ. ಎಂ.ಜಿ. ರಸ್ತೆಯ ಕಡೆಯಿಂದ ಬರುವವರಿಗೆ ಸೂಚನಾ ಫಲಕ ಕಾಣಿಸುವುದೇ ಇಲ್ಲ. ಕಂಡರೂ, ಇದು ಮುಖ್ಯ ರಸ್ತೆ ಬಳಕೆದಾರರಿಗೆ ಇರುವ ಫಲಕ ಎಂದೇ ಭಾವಿಸಿಕೊಳ್ಳುವಂತಿದೆ. ಯಾವುದೇ ಅಡತಡೆ ಇಲ್ಲದ ಮತ್ತು ವಿಸ್ತಾರವಾದ ರಸ್ತೆ ಇರುವುದರಿಂದ ಮುಕ್ತ ಎಡ ತಿರುವು ಇದೆ ಎಂದೇ ಭಾವಿಸಿಕೊಂಡು ಮುಂದಕ್ಕೆ ಸಾಗುತ್ತಾರೆ. ಸಂಚಾರ ವಿಭಾಗದ ಪೊಲೀಸರು ಅಂತಹವರನ್ನು ಹಿಡಿದು, ದಂಡ ವಿಧಿಸುತ್ತಿದ್ದಾರೆ’ ಎಂದು ಅವರು ವಿವರಿಸಿದರು.

‘ಎರಡು ವರ್ಷಗಳ ಹಿಂದೆಯೂ ಇದೇ ರೀತಿಯ ಸಮಸ್ಯೆ ಸೃಷ್ಟಿಯಾಗಿತ್ತು. ಸ್ಥಳೀಯರು ಧ್ವನಿ ಎತ್ತಿದ ಬಳಿಕ ಸೂಚನಾ ಫಲಕವನ್ನು ಸರಿಪಡಿಸಲಾಗಿತ್ತು. ಕೆಲವು ತಿಂಗಳ ಹಿಂದೆ ಹಳೆಯ ಸೂಚನಾ ಫಲಕ ತೆರವು ಮಾಡಿ, ರಸ್ತೆಯ ಮಧ್ಯದಲ್ಲಿ ಹೊಸ ಫಲಕ ಅಳವಡಿಸಲಾಗಿದೆ’ ಎಂದು ವಿಠಲ ಮಲ್ಯ ರಸ್ತೆಯ ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ದೂರುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೂರ್ವ ಸಂಚಾರ ವಿಭಾಗದ ಡಿಸಿಪಿ ಕೆ.ಎಂ. ಶಾಂತರಾಜು, ‘ಸೂಚನಾ ಫಲಕ ಅಳವಡಿಸುವ ಕೆಲಸವನ್ನು ಎಂಜಿನಿಯರ್‌ಗಳು ಮಾಡುತ್ತಾರೆ. ಅದರಲ್ಲಿ ಪೊಲೀಸರ ಪಾತ್ರ ಏನೂ ಇರುವುದಿಲ್ಲ. ಸ್ಥಳ ಪರಿಶೀಲಿಸಿ, ಸಮಸ್ಯೆ ಪರಿಹರಿಸಲಾಗುವುದು. ವಾಹನ ಸವಾರರ ಕಣ್ಣಿಗೆ ಗೋಚರಿಸುವಂತೆ ಸೂಚನಾ ಫಲಕ ಅಳವಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT