ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

24ರಂದು ವಿದ್ಯುತ್ ಸ್ಥಾವರ ಲೋಕಾರ್ಪಣೆ: ಕೆ.ಜೆ.ಜಾರ್ಜ್‌

Published : 21 ಸೆಪ್ಟೆಂಬರ್ 2024, 16:15 IST
Last Updated : 21 ಸೆಪ್ಟೆಂಬರ್ 2024, 16:15 IST
ಫಾಲೋ ಮಾಡಿ
Comments

ಬೆಂಗಳೂರು: ‘ಯಲಹಂಕದಲ್ಲಿ ಸ್ಥಾಪಿಸಿರುವ 370 ಮೆಗಾವಾಟ್ ಸಾಮರ್ಥ್ಯದ ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರವನ್ನು (ವೈಸಿಸಿಪಿಪಿ) ಸೆ.24ರಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಪಿಸಿಎಲ್ ಅಂಗಸಂಸ್ಥೆ ಕೆಪಿಸಿ ಗ್ಯಾಸ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಮೂಲಕ ಯಲಹಂಕದ ಕೆಪಿಸಿಎಲ್ ಯೋಜನಾ ಪ್ರದೇಶದಲ್ಲಿ ಈ ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿದೆ. ಒಟ್ಟು 370 ಮೆ.ವಾ. ಸಾಮರ್ಥ್ಯದ ಈ ಸ್ಥಾವರವನ್ನು ಸುಮಾರು ₹2,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅನಿಲ್ (ಗ್ಯಾಸ್) ಮತ್ತು ಹಬೆ(ಸ್ಟೀಮ್) ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಗ್ಯಾಸ್ ಟರ್ಬೈನ್ ಮೂಲಕ 237 ಮೆ.ವಾ. ಮತ್ತು ಸ್ಟೀಮ್ ಟರ್ಬೈನ್ ಮೂಲಕ 133 ಮೆ.ವಾ. ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ, 2014ರ ಜು.28ರಂದು ಈ ವಿದ್ಯುತ್ ಸ್ಥಾವರ ಅನುಷ್ಠಾನಕ್ಕೆ ಅನುಮೋದನೆ ಸಿಕ್ಕಿತ್ತು. 2016ರಲ್ಲಿ ಸ್ಥಾವರಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಕಳೆದ ಆಗಸ್ಟ್‌ 8ರಿಂದ ಪೂರ್ಣ ಪ್ರಮಾಣದಲ್ಲಿ (20 ಗಂಟೆಗಳು) ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಯಶಸ್ವಿಯಾಗಿದೆ. ಘಟಕದ ಕಾರ್ಯಾಚರಣೆಗೆ ಇದ್ದ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಈಗ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುತ್ತಿದೆ’ ಎಂದರು.

’ಬಿಡದಿಯಲ್ಲಿ ಸ್ಥಾಪಿಸಲಾಗಿರುವ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ (ಡಬ್ಲ್ಯುಟಿಇ– ವೇಸ್ಟ್ ಟು ಎನರ್ಜಿ) ಸ್ಥಾವರ ಉದ್ಘಾಟನೆಗೆ ಸಿದ್ಧವಾಗಿದೆ. ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಶೀಘ್ರದಲ್ಲೇ ಉದ್ಘಾಟಿಸಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಮಾತನಾಡಿ, ‘ಬಿಡದಿ ಡಬ್ಲ್ಯುಟಿಇ ಘಟಕದಲ್ಲಿ 6 ಸಾವಿರ ಟನ್‌ನಷ್ಟು ಒಣ ತ್ಯಾಜ್ಯ ಬಳಕೆ ಮಾಡಿ ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಸ್ಥಾವರವನ್ನು ಲೋಕಾರ್ಪಣೆ ಮಾಡಲಾಗುತ್ತದೆ’ ಎಂದರು. 

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಕೆಪಿಸಿಎಲ್ ಮಾನವ ಸಂಪನ್ಮೂಲ ನಿರ್ದೇಶಕ ಸಿ‌.ನಾಗರಾಜು, ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ‌ ನಿರ್ದೇಶಕ ಎಸ್.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

’ಉಚಿತ ವಿದ್ಯುತ್‌ ನಿಲ್ಲುವುದಿಲ್ಲ’ 

‘ಸರ್ಕಾರದ ಸಬ್ಸಿಡಿ ಸೌಲಭ್ಯಗಳು ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ತಿಳಿಯಲು ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್‌ ಸಂಖ್ಯೆಗೆ ರೈತರ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ’ ಎಂದು ಇಂಧನ ಸಚಿವ ಜಾರ್ಜ್‌ ಸ್ಪಷ್ಟಪಡಿಸಿದರು. ‘10 ಎಚ್‌.ಪಿವರೆಗೆ ಉಚಿತ ವಿದ್ಯುತ್‌ ನೀಡುವ ಸೌಲಭ್ಯ ಮುಂದುವರಿಯುತ್ತದೆ. ಊಹಾಪೋಹಗಳಿಗೆ ಕಿವಿಗೊಡಬೇಡಿ. ರಾಜ್ಯದಲ್ಲಿ ಶೇ 95ರಷ್ಟು ಕೃಷಿ ಪಂಪ್‌ಸೆಟ್‌ಗಳ ಆರ್‌.ಆರ್‌.‌ಸಂಖ್ಯೆಗೆ ಆಧಾರ್‌ ನಂಬರ್‌ ಜೋಡಣೆಯಾಗಿದೆ. ಉಳಿದವುಗಳನ್ನು ಲಿಂಕ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT