ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯ ನಿಷೇಧದ ಬಗ್ಗೆ ಒತ್ತಡಕ್ಕೆ ಒಳಗಾದ ಸಿ.ಎಂ: ಮುಖ್ಯಮಂತ್ರಿಗಳ ಸಲಹೆಗಾರ ಪಾಟೀಲ 

* ಮೀನಾಕ್ಷಿ ಬಾಳಿಗೆ ‘ಯಶೋಧರಮ್ಮ ದಾಸಪ್ಪ ಪ್ರಶಸ್ತಿ’ ಪ್ರದಾನ
Published 25 ಜೂನ್ 2024, 16:00 IST
Last Updated 25 ಜೂನ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಹಾರ ರಾಜ್ಯದ ಮಾದರಿ, ರಾಜ್ಯದಲ್ಲಿಯೂ ಮದ್ಯ ನಿಷೇಧ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದೆ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಹಣ ಹೊಂದಿಸಬೇಕಾದ ಒತ್ತಡ ಇರುವುದರಿಂದ ಅವರಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ ತಿಳಿಸಿದರು. 

ಕನ್ನಡ ಜನಶಕ್ತಿ ಕೇಂದ್ರ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಅವರಿಗೆ 2024ನೇ ಸಾಲಿನ ‘ಯಶೋಧರಮ್ಮ ದಾಸಪ್ಪ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ಪ್ರಶಸ್ತಿಯು ₹ 15 ಸಾವಿರ ನಗದು ಒಳಗೊಂಡಿದೆ. 

‘ಚುನಾವಣೆ ಸಂದರ್ಭದಲ್ಲಿ ಹಳ್ಳಿಗಾಡು, ದಲಿತ ಓಣಿ, ತಾಂಡಾಗಳಿಗೆ ಹೋದಾಗ ಅಲ್ಲಿನ ಮಹಿಳೆಯರು ‘ನಮಗೆ ನಿಮ್ಮ ಅಕ್ಕಿ–ಗೋಧಿ ಬೇಡ, ಮದ್ಯ ನಿಷೇಧ ಮಾಡಿದರೆ ಸಾಕು’ ಅಂತ ಗೋಳಾಡಿದ್ದರು. ಆದ್ದರಿಂದ ಕರ್ನಾಟಕದಲ್ಲಿಯೂ ಮದ್ಯ ನಿಷೇಧ ಕಾನೂನು ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡೆ. ಆದರೆ, 36 ಸಾವಿರ ಕೋಟಿ ರೂಪಾಯಿ ಆದಾಯ ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ ಬರುತ್ತಿದೆ. ಇದರಿಂದಾಗಿ ಮದ್ಯ ನಿಷೇಧ ಮಾಡಿದಲ್ಲಿ ಇಷ್ಟು ಆದಾಯ ಹೊಂದಿಸುವುದು ಸುಲಭವಲ್ಲ. ಅದರಲ್ಲೂ ಯಾವುದೇ ಒಂದು ರಾಜ್ಯ ಮದ್ಯ ನಿಷೇಧ ಕಾನೂನು ಜಾರಿ ಮಾಡಿದಲ್ಲಿ ಅದರ ಅನುಷ್ಠಾನ ಕಷ್ಟಸಾಧ್ಯ. ಆದ್ದರಿಂದ ಕೇಂದ್ರ ಸರ್ಕಾರವೇ ದೇಶದ ಹಿತ ದೃಷ್ಟಿಯಿಂದ ಮದ್ಯ ನಿಷೇಧ ಮಾಡಬೇಕು’ ಎಂದರು. 

‘ಇತ್ತೀಚೆಗೆ ಹೋರಾಟಗಾರರು ಸಿಗುತ್ತಿಲ್ಲ. ಮೌಲ್ಯಗಳು ಮಾಯವಾಗುತ್ತಿದ್ದು, ತತ್ವ ಸಿದ್ಧಾಂತಗಳನ್ನು ಮರೆಯುತ್ತಿದ್ದೇವೆ. ಅಧಿಕಾರ ಅಂತಸ್ತಿನ ಬೆನ್ನು ಹತ್ತಿದ್ದೇವೆ. ನಾಡು ಹಾಗೂ ದೇಶಕ್ಕಾಗಿ ಹೋರಾಡಿದವರನ್ನು ಮರೆಯುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ‘ಅಬಕಾರಿಯಿಂದ ಬರುತ್ತಿರುವ ಆದಾಯವನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹ ಮಾಡಬಹುದು. ಆದರೆ, ರಾಜ್ಯದಲ್ಲಿ ಮಾತ್ರ ನಿಷೇಧ ಮಾಡಿದರೆ ಅಕ್ರಮವಾಗಿ ಮದ್ಯ ರಾಜ್ಯಕ್ಕೆ ಬರುವ ಸಾಧ್ಯತೆಯಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು’ ಎಂದು ತಿಳಿಸಿದರು. 

‘ಬಹುತೇಕ ಪ್ರಶಸ್ತಿಗಳು ರಾಜಧಾನಿ ಕೇಂದ್ರೀತವಾಗಿವೆ. ಉತ್ತರ ಕರ್ನಾಟಕ ಭಾಗದ ಸಾಧಕರನ್ನು ಕಡೆಗಣಿಸಲಾಗುತ್ತಿದೆ. ಆ ಭಾಗಕ್ಕೆ ಕೇವಲ ಅನುದಾನ ನೀಡಿದರೆ ಕರ್ನಾಟಕದ ಏಕೀಕರಣವಾಗುವುದಿಲ್ಲ. ಇಲ್ಲಿಯವರಿಗೆ ಅಲ್ಲಿಯವರು, ಅಲ್ಲಿಯವರಿಗೆ ಇಲ್ಲಿಯವರು ಅಣ್ಣ ತಮ್ಮಂದಿರು ಎಂಬ ಭಾವ ಬರಬೇಕು. ಹಾಗಾಗಲು ರಾಜ್ಯದ ಎಲ್ಲ ಭಾಗದವರನ್ನು ಗುರುತಿಸಿ ಗೌರವಿಸಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT