ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಸೃಷ್ಟಿಸಿದ ಸಿಂಗಪುರ ಪ್ರವಾಸ

ನಗರ ಜಿಲ್ಲಾ ಪಂಚಾಯಿತಿ ಸದಸ್ಯರು
Last Updated 11 ಅಕ್ಟೋಬರ್ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ 37 ಸದಸ್ಯರು ಇದೇ 14ರಿಂದಕುಟುಂಬ ಸಮೇತ ಸಿಂಗಪುರ ಪ್ರವಾಸ ಕೈಗೊಳ್ಳುತ್ತಿದ್ದಾರೆ. ರಾಜ್ಯವು ಪ್ರವಾಹದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ವಿದೇಶಿ ಪ್ರವಾಸಕ್ಕೆ ತೆರಳುತ್ತಿರುವುದು ವಿವಾದ ಸೃಷ್ಟಿಸಿದೆ.

ಜಿಲ್ಲಾ ಪಂಚಾಯಿತಿಯ ಒಟ್ಟು 50 ಸದಸ್ಯರಲ್ಲಿ ಬಿಜೆಪಿಯ 18, ಕಾಂಗ್ರೆಸ್‌ನ 14 ಹಾಗೂ ಜೆಡಿಎಸ್‌ನ ಐವರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪಾಸ್‌ಪೋರ್ಟ್‌ ಹೊಂದಿರದ ಕೆಲವು ಸದಸ್ಯರು ಪ್ರವಾಸದಿಂದ ದೂರ ಉಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು ನೇತೃತ್ವದಲ್ಲೇ ಈ ಪ್ರವಾಸ ಏರ್ಪಡಿಸಲಾಗಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಗೆ ಬಹುಮತವಿಲ್ಲ. ಜೆಡಿಎಸ್‌ನ ಐವರು ಸದಸ್ಯರ ಬೆಂಬಲದಿಂದ ಮುನಿರಾಜು ಅವರು ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿ ಇನ್ನೂ ಒಂದೂವರೆ ವರ್ಷ ಇದೆ. ಈ ಅವಧಿಯಲ್ಲೂ ವಿರೋಧ ಪಕ್ಷದ ಸದಸ್ಯರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಸಲುವಾಗಿ ಅವರು ಮುತುವರ್ಜಿ ವಹಿಸಿ ಪ್ರವಾಸ ಏರ್ಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

‘ನಾವು ಸಿಂಗಪುರ ಪ್ರವಾಸ ಕೈಗೊಳ್ಳುತ್ತಿರುವುದು ನಿಜ. ದಸರಾ ಮುಗಿದ ಬಳಿಕ ಕುಟುಂಬದ ಸದಸ್ಯರ ಜೊತೆ ಪ್ರವಾಸ ಹೋಗುವ ಬಗ್ಗೆ ಎಲ್ಲ ಪಕ್ಷಗಳ ಸದಸ್ಯರು ಸೇರಿ ನಿರ್ಧಾರ ಕೈಗೊಂಡಿದ್ದೆವು. ಅದರಂತೆ ಸೋಮವಾರದಿಂದ ಐದು ದಿನಗಳ ವಿದೇಶಿ ಪ್ರವಾಸ ಹೋಗುತ್ತಿದ್ದೇವೆ. ಇದಕ್ಕೆ ನಾವು ಸರ್ಕಾರದ ಹಣವನ್ನು ಬಳಸುತ್ತಿಲ್ಲ’ ಎಂದು ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನೊಬ್ಬನೇ ಈ ಪ್ರವಾಸದ ವೆಚ್ಚ ಭರಿಸುತ್ತಿಲ್ಲ. ಎಲ್ಲರೂ ಹಂಚಿಕೊಳ್ಳುತ್ತಿದ್ದೇವೆ. ನಾನು ಅಧಿಕಾರದಲ್ಲಿ ಮುಂದುವರಿಯಬೇಕೆಂಬ ಕಾರಣಕ್ಕೆ ಸದಸ್ಯರಿಗೆ ಹಣದ ಆಮಿಷ ಒಡ್ಡಿದ್ದೇನೆ ಎಂಬ ಆರೋಪ ಕಪೋಲಕಲ್ಪಿತ. ಅದರ ಅಗತ್ಯ ನನಗಿಲ್ಲ. ಹುದ್ದೆಯಿಂದ ಕೆಳಗಿಳಿಯುವಂತೆಪಕ್ಷ ಹೇಳಿದರೆ ಅದಕ್ಕೂ ಸಿದ್ಧ. ಅಷ್ಟಕ್ಕೂ ನನ್ನ ವಿರುದ್ಧ ಯಾರೂ ಅವಿಶ್ವಾಸ ವ್ಯಕ್ತಪಡಿಸಿಲ್ಲ’ ಎಂದರು.

ರಾಜ್ಯದ ಜನತೆ ಪ್ರವಾಹದಿಂತ ತತ್ತರಿಸಿರುವ ಸಂದರ್ಭದಲ್ಲಿ ಇಂತಹ ಪ್ರವಾಸದ ಅಗತ್ಯವಿತ್ತೇ ಎಂಬ ಪ್ರಶ್ನೆಗೆ, ‘ಪ್ರವಾಹ ಸಂತ್ರಸ್ತರ ಬಗ್ಗೆ ನಮಗೂ ಕಾಳಜಿ ಇದೆ. ನಮ್ಮ ಜಿಲ್ಲಾ ಪಂಚಾಯಿತಿ ಸದಸ್ಯರು ಮೂರು ತಿಂಗಳ ಗೌರವಧನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ₹ 50 ಲಕ್ಷದಷ್ಟು ಮೊತ್ತದ ಸಾಮಗ್ರಿಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ಕಳುಹಿಸಿಕೊಟ್ಟಿದ್ದೇವೆ’ ಎಂದರು.

‘ಜಿಲ್ಲಾ ಪಂಚಾಯಿತಿಗೆ ಸರ್ಕಾರ ವರ್ಷಕ್ಕೆ ಕೇವಲ ₹ 4 ಕೋಟಿ ಅನುದಾನ ನೀಡುತ್ತದೆ. ಅದನ್ನು 50 ಸದಸ್ಯರಿಗೆ ಹಂಚಿಕೆ ಮಾಡಲಾಗುತ್ತದೆ. ನಮಗೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಾಲುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ದೂರುತ್ತಾರೆ. ಈ ರೀತಿ ವಿದೇಶಿ ಪ್ರವಾಸ ಕೈಗೊಂಡಾಗ ಸಹಜವಾಗಿಯೇ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಾನು ಪ್ರವಾಸದಿಂದ ದೂರ ಉಳಿದಿದ್ದೇನೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾ ಪಂಚಾಯಿತಿ ಸದಸ್ಯರೆಲ್ಲರೂ ಒಂದು ಕುಟುಂಬದ ಸದಸ್ಯರಿದ್ದಂತೆ. ನಾವೆಲ್ಲ ಕುಟುಂಬದವರ ಜೊತೆ ಸೇರಿ ಒಟ್ಟಿಗೆ ಪ್ರವಾಸ ಹೋಗುವುದರಲ್ಲಿ ನನಗೇನೂ ತಪ್ಪು ಕಾಣಿಸುತ್ತಿಲ್ಲ. ನಾನು ಪ್ರವಾಸ ಹೋಗುತ್ತಿದ್ದೇನೆ. ಜಿಲ್ಲಾ ಪಂಚಾಯಿತಿ ಸದಸ್ಯರ ಕುಟುಂಬಕ್ಕೆ ಸೇರದ ಕೆಲವು ಸಾರ್ವಜನಿಕರು ನಮ್ಮೊಂದಿಗೆ ಬರುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಜಿ.ನರಸಿಂಹಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT