ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹತೆ ಇಲ್ಲದ ಪ್ರಾಂಶುಪಾಲರ ಬದಲಾವಣೆಗೆ ಕ್ರಮ

ಬೆಂಗಳೂರು ವಿ.ವಿ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ನಿರ್ಣಯ
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಖಾಸಗಿ ಕಾಲೇಜುಗಳಲ್ಲಿ ಅಗತ್ಯ ಶೈಕ್ಷಣಿಕ ಅರ್ಹತೆ ಇಲ್ಲದ ಪ್ರಾಂಶುಪಾಲರನ್ನು ಬದಲಿಸಲು ಕ್ರಮ ಕೈಗೊಳ್ಳುವಂತೆ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ನೋಟಿಸ್ ನೀಡಲು ಶನಿವಾರ ನಡೆದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ವಿ.ವಿ ವ್ಯಾಪ್ತಿಯ ಒಟ್ಟು 542 ಕಾಲೇಜುಗಳ ಪರಿಶೀಲನೆ ನಡೆಸಿರುವ 21 ಸ್ಥಳೀಯ ಪರಿಶೀಲನಾ ಸಮಿತಿಗಳು (ಎಲ್‌ಐಸಿ) ಸಭೆಯಲ್ಲಿ ತಮ್ಮ ವರದಿಗಳನ್ನು ಸಲ್ಲಿಸಿದವು. ಬಹುತೇಕ ಕಾಲೇಜುಗಳ ಪ್ರಾಂಶುಪಾಲರು ಆ ಹುದ್ದೆಗೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಹೊಂದಿಲ್ಲ ಎಂಬುದು ಸಮಿತಿಗಳ ವರದಿಗಳಿಂದ ಬಹಿರಂಗಗೊಂಡಿದೆ.

ಕೆಲವು ಕಾಲೇಜುಗಳಲ್ಲಿ ಸ್ನಾತಕೋತ್ತರ ವಿಷಯಗಳ ಬೋಧನೆಗೆ ಕಾಯಂ ಉಪನ್ಯಾಸಕರೇ ಇಲ್ಲ ಎಂಬುದು ವರದಿಗಳಿಂದ ಬೆಳಕಿಗೆ ಬಂದಿದೆ. ಈ ಕಾಲೇಜುಗಳಲ್ಲಿ ಸದ್ಯ ಅತಿಥಿ ಉಪನ್ಯಾಸಕರೇ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ.

2013-14ನೇ ಶೈಕ್ಷಣಿಕ ವರ್ಷದ ಸಂಯೋಜನೆಗಳ ನವೀಕರಣಕ್ಕೆ 493 ಕಾಲೇಜುಗಳು ಮನವಿ ಸಲ್ಲಿಸಿದ್ದು, 476 ಕಾಲೇಜುಗಳ ಸಂಯೋಜನೆ ನವೀಕರಣಕ್ಕೆ ಸಮಿತಿಗಳು ಶಿಫಾರಸು ಮಾಡಿವೆ. ಹೊಸದಾಗಿ 49 ಕಾಲೇಜುಗಳು ಮಾನ್ಯತೆಗಾಗಿ ಮನವಿ ಸಲ್ಲಿಸಿದ್ದು, ಈ ಪೈಕಿ 32 ಕಾಲೇಜುಗಳ ಮನವಿಯನ್ನು ಪರಿಗಣಿಸುವಂತೆ ಸಮಿತಿಗಳು ಶಿಫಾರಸು ಮಾಡಿವೆ.

ಅಲ್ಲದೇ 26 ಕಾಲೇಜುಗಳ ಪೈಕಿ 19 ಕಾಲೇಜುಗಳ ಮಾನ್ಯತೆಯನ್ನು ಕಾಯಂಗೊಳಿಸುವಂತೆ ಹಾಗೂ 47 ಕಾಲೇಜುಗಳ ಪೈಕಿ 25 ಕಾಲೇಜುಗಳಿಗೆ ಹೊಸ ಕೋರ್ಸ್‌ಗಳಿಗೆ ಅನುಮತಿ ನೀಡುವಂತೆ ಸಮಿತಿಗಳ ಮುಖ್ಯಸ್ಥರು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

`ಅಗತ್ಯ ಶೈಕ್ಷಣಿಕ ಅರ್ಹತೆ ಇಲ್ಲದ ಪ್ರಾಂಶುಪಾಲರ ಬದಲಾವಣೆಗೆ ಹಾಗೂ ಕಾಯಂ ಉಪನ್ಯಾಸಕರು ಇಲ್ಲದ ಕಾಲೇಜುಗಳಲ್ಲಿ ಶೀಘ್ರವೇ ಕಾಯಂ ಉಪನ್ಯಾಸಕರ ನೇಮಕಕ್ಕೆ ಆಯಾ ಕಾಲೇಜುಗಳಿಗೆ ನೋಟಿಸ್ ನೀಡಲಾಗುವುದು. ಇನ್ನು ಒಂದು ತಿಂಗಳೊಳಗೆ ಪ್ರಾಂಶುಪಾಲರ ಬದಲಾವಣೆ ಹಾಗೂ ಮೂರು ತಿಂಗಳೊಳಗೆ ಕಾಯಂ ಉಪನ್ಯಾಸಕರ ನೇಮಕಕ್ಕೆ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು.

ಈ ಬಗ್ಗೆ ಪರಿಶೀಲನೆ ನಡೆಸಿ ಪ್ರಗತಿಯ ಮಾಹಿತಿ ನೀಡಲು ಉಪ ಸಮಿತಿಯನ್ನೂ ನೇಮಿಸಲಾಗುವುದು' ಎಂದು ಕುಲಪತಿ ಪ್ರೊ.ಬಿ.ತಿಮ್ಮೇಗೌಡ ತಿಳಿಸಿದರು.

ಸಿಂಡಿಕೇಟ್ ಸದಸ್ಯರಾಗಿರುವ ಕೆಲವು ಎಲ್‌ಐಸಿ ಅಧ್ಯಕ್ಷರು ಸಭೆಗೆ ಬಾರದೇ ಇರುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ತಿಮ್ಮೇಗೌಡ, `ಸಿಂಡಿಕೇಟ್ ಸದಸ್ಯರು ತಮ್ಮ ವರದಿಗಳನ್ನು ನೀಡಿದ್ದಾರೆ. ಸಭೆಗೆ ಉತ್ತರಿಸುವ ಸಲುವಾಗಿ ಅವರು ಸಭೆಗೆ ಹಾಜರಾಗಬೇಕಾಗುತ್ತದೆ. ಆದರೆ, ಅವರು ಕಡ್ಡಾಯವಾಗಿ ಸಭೆಗೆ ಬರಲೇಬೇಕು ಎಂಬ ನಿಯಮವಿಲ್ಲ' ಎಂದರು.

ರಾಜೀನಾಮೆ ನೀಡಿದ ಸದಸ್ಯ
ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಹಾಗೂ ಬಿ.ಇಡಿ ಕಾರ್ಯಪಡೆಯ ಅಧ್ಯಕ್ಷ ಎಚ್.ಕರಣ್ ಕುಮಾರ್ ಅವರು ಶನಿವಾರ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಿ.ಇಡಿ ಕಾಲೇಜುಗಳ ವಿಷಯವಾಗಿ ನೀಡಿದ ವರದಿಯ ಬಗ್ಗೆ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಸರಿಯಾದ ಕ್ರಮ ಕೈಗೊಳ್ಳದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಸಭೆಯಲ್ಲಿ ಅವರು ತಿಳಿಸಿದರು.

`ಎರಡು ವರ್ಷ ಐದು ತಿಂಗಳ ಕಾಲ ಸದಸ್ಯನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಬಿ.ಇಡಿ ಕಾಲೇಜುಗಳ ಮೂಲಸೌಕರ್ಯ ಕೊರತೆಯನ್ನು ಎತ್ತಿತೋರಿದ್ದೇನೆ. ಆದರೆ, ವರದಿ ಹಾಗೂ ಶಿಫಾರಸುಗಳ ಬಗ್ಗೆ ಸರ್ಕಾರ ಮತ್ತು ವಿಶ್ವವಿದ್ಯಾಲಯ ಸೂಕ್ತವಾಗಿ ಸ್ಪಂದಿಸಿಲ್ಲ. ಮೂಲ ಸೌಕರ್ಯಗಳಿಲ್ಲದ ಅನೇಕ ಬಿ.ಇಡಿ ಕಾಲೇಜುಗಳ ಮಾನ್ಯತೆಯನ್ನು ಮುಂದುವರಿಸಲಾಗಿದೆ. ಹಲವು ಬಿ.ಇಡಿ ಕಾಲೇಜುಗಳ ಮಾನ್ಯತೆ ರದ್ದುಗೊಳಿಸುವಂತೆ ಎಲ್‌ಐಸಿ ವರದಿ ನೀಡಿದ್ದರೂ, ಅದನ್ನು ಸಹ ಗಾಳಿಗೆ ತೂರಿ, ಕಾಲೇಜುಗಳಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ' ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕುಲಪತಿ ತಿಮ್ಮೇಗೌಡ, `ಎಲ್‌ಐಸಿ ವರದಿ ಹಾಗೂ ಶಿಫಾರಸುಗಳ ಆಧಾರದ ಮೇಲೆ ಕಾಲೇಜುಗಳನ್ನು ಮುಚ್ಚುತ್ತಾ ಹೋದರೆ, ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳನ್ನೂ ಮುಚ್ಚಬೇಕಾಗುತ್ತದೆ. ಮುಂದುವರಿದ ದೇಶಗಳ ಮಾದರಿಯ ಕಾರ್ಪೊರೇಟ್ ವ್ಯವಸ್ಥೆಯಲ್ಲಿ ನಮ್ಮ ಕಾಲೇಜುಗಳನ್ನು ನಡೆಸಲು ಸಾಧ್ಯವಿಲ್ಲ' ಎಂದರು. 

`ಬಡ, ಮಧ್ಯಮ ವರ್ಗಗಳ ವಿದ್ಯಾರ್ಥಿಗಳು ಓದುವ ಕಾಲೇಜುಗಳ ಬಗ್ಗೆ ಏಕಾಏಕಿ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಿ.ವಿಯಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಅವನ್ನು ಆಂತರಿಕವಾಗಿ ಪರಿಹರಿಸಿಕೊಳ್ಳಬೇಕು. ಅಕಾಡೆಮಿಕ್ ಕೌನ್ಸಿಲ್‌ನ ಎಲ್ಲ ಸದಸ್ಯರು ತಮ್ಮ ಘನತೆಯ ಬಗ್ಗೆ ಮಾತ್ರ ಯೋಚಿಸದೇ ವಿಶ್ವವಿದ್ಯಾಲಯದ ಘನತೆ ಎತ್ತಿ ಹಿಡಿಯುವ ಬಗ್ಗೆಯೂ ಗಮನ ನೀಡಬೇಕು' ಎಂದು ಅವರು ಕಿವಿಮಾತು ಹೇಳಿದರು.

`ಕ್ಯಾಮೆರಾ ಅಳವಡಿಕೆ'
`ಜ್ಞಾನಭಾರತಿ ಆವರಣದ ಮಹಿಳಾ ವಿದ್ಯಾರ್ಥಿ ನಿಲಯದ ಸುತ್ತ ತಡೆಗೋಡೆ ನಿರ್ಮಿಸಿದ ನಂತರ ನಾಲ್ಕು ಕಡೆಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ತಡೆಗೋಡೆ ನಿರ್ಮಾಣಕ್ಕೆ ನಾಲ್ಕು ಬಾರಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಸಲ್ಲಿಸಲು ಯಾರೂ ಮುಂದೆ ಬಂದಿಲ್ಲ. ಟೆಂಡರ್ ಪ್ರಕ್ರಿಯೆ ಮುಗಿದು, ತಡೆಗೋಡೆ ನಿರ್ಮಾಣವಾದ ನಂತರ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು'
-ಪ್ರೊ.ಬಿ.ತಿಮ್ಮೇಗೌಡ, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT