ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು: ತ್ವರಿತ ಅನುಷ್ಠಾನಕ್ಕೆ ಆಗ್ರಹ

Last Updated 7 ಜೂನ್ 2019, 19:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಉಪನಗರ ರೈಲು (ಸಬ್‌ ಅರ್ಬನ್‌) ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಅವರು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರಿಗೆ ಮನವಿ ಮಾಡಿದರು.

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಅವರು, ನನೆಗುದಿಗೆ ಬಿದ್ದಿರುವ ರಾಜ್ಯದ ಹಲವಾರು ರೈಲ್ವೆ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೆ ಸಚಿವರು, ಉಪನಗರ ರೈಲು ಯೋಜನೆಯ ತುರ್ತು ಅನುಷ್ಠಾನಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

‘ಕೇಂದ್ರ ಸರ್ಕಾರ ಈ ಯೋಜನೆಗಾಗಿ 2018–19ನೇ ಸಾಲಿನ ಬಜೆಟ್‌ನಲ್ಲಿ ₹17,050 ಕೋಟಿ ಮಂಜೂರು ಮಾಡಿದೆ. ಯೋಜನಾ ಮೊತ್ತದಲ್ಲಿ ಕೇಂದ್ರ ಸರ್ಕಾರ ಶೇ 49ರಷ್ಟು ಮೊತ್ತ ಭರಿಸಲಿದೆ. 2019-20ರ ಬಜೆಟ್‌ನಲ್ಲಿ ಯೋಜನೆಯನ್ನು ಆರಂಭಿಸಲು ₹10 ಕೋಟಿ ಆರಂಭಿಕ ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಿದೆ’ ಎಂದು ಮೋಹನ್‌ ಹೇಳಿದರು.

‘ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಪೀಯೂಷ್‌ ಗೋಯಲ್‌ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಫೆಬ್ರುವರಿ 22ರಂದು ಮನವಿ ಸಲ್ಲಿಸಿತು. ಯೋಜನೆಗೆ ಅಗತ್ಯವಿರುವ ಸಾವಿರಾರು ಕೋಟಿ ಮೊತ್ತದ ರೈಲ್ವೆ ಜಮೀನನ್ನು ಎಕರೆಗೆ ಒಂದು ರೂಪಾಯಿ ಮೊತ್ತಕ್ಕೆ ನೀಡುವುದಾಗಿ ಗೋಯಲ್‌ ಘೋಷಣೆ ಮಾಡಿದರು. ಈ ನಡುವೆ, ಪ್ರಧಾನಮಂತ್ರಿ ಕಾರ್ಯಾಲಯವು ಕೆ–ರೈಡ್ಸ್‌ಗೆ ‍ಪತ್ರ ಬರೆದು ಉಪನಗರ ಯೋಜನೆಗೆ ಸಂಬಂಧಿಸಿದಂತೆ ನಗರದ ಮಿತಿಯಲ್ಲಿ ನಿಲ್ದಾಣಗಳನ್ನು ಕಡಿತಗೊಳಿಸುವುದೂ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ವಿಸ್ತೃತಾ ಯೋಜನಾ ವರದಿಯನ್ನು (ಡಿಪಿಆರ್) ಮರುಪರಿಶೀಲಿಸುವಂತೆ ತಿಳಿಸಿದೆ. ಈ ಬೆಳವಣಿಗೆಯಿಂದಾಗಿ, ಯೋಜನೆಯ ಅನುಷ್ಠಾನ ಮತ್ತಷ್ಟು ವಿಳಂಬವಾಗಬಹುದೆಂದು ನಗರದ ನಾಗರಿಕರು ಆತಂಕಗೊಂಡಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT