ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಬದಿ ರಸ್ತೆ- ಅಯ್ಯೋ ಏನೀ ದುರವಸ್ಥೆ...?

Last Updated 21 ಜನವರಿ 2011, 20:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಮೆಟ್ರೊ ಯೋಜನೆ ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳು ಅಧ್ವಾನವಾಗಿದ್ದು, ಅವುಗಳನ್ನು ದುರಸ್ತಿಗೊಳಿಸಿ ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಪಟ್ಟಂತೆ ಬಿಎಂಆರ್‌ಸಿಎಲ್ ಹಾಗೂ ಬಿಬಿಎಂಪಿ ನಡುವೆ ಜಿಜ್ಞಾಸೆ ಆರಂಭವಾಗಿದೆ. ಬಿಎಂಆರ್‌ಸಿಎಲ್ ಯಾವುದೇ ಸ್ಪಷ್ಟ ನಿಲುವು ಕೈಗೊಳ್ಳದ ಕಾರಣ ರಸ್ತೆ ಅಭಿವೃದ್ಧಿ ನೆನೆಗುದಿಗೆ ಬಿದ್ದಿದ್ದು ಜನತೆ ಪರಿತಪಿಸುವಂತಾಗಿದೆ.

ನಗರದಲ್ಲಿ ಮೆಟ್ರೊ ರೈಲು ಕಾಮಗಾರಿ ನಡೆಯುತ್ತಿರುವ ರಸ್ತೆಗಳು ಹದಗೆಟ್ಟಿವೆ. ನಿಯಮಗಳ ಪ್ರಕಾರ ಬಿಎಂಆರ್‌ಸಿಎಲ್ ಈ ರಸ್ತೆಗಳನ್ನು ದುರಸ್ತಿಗೊಳಿಸಿ ಮೊದಲಿನ ಸ್ಥಿತಿಯಲ್ಲಿರುವಂತೆ ಅಭಿವೃದ್ಧಿಪಡಿಸಬೇಕಿತ್ತು. ಆದರೆ ಇದೀಗ ‘ರಾಗ’ ಬದಲಿಸಿರುವ ಬಿಎಂಆರ್‌ಸಿಎಲ್ ದುರಸ್ತಿಪಡಿಸುವ ಕಾರ್ಯಕ್ಕೆ ಹಿಂದೇಟು ಹಾಕುತ್ತಿದೆ.ಇತ್ತೀಚೆಗೆ ನಡೆದ ಬಿಬಿಎಂಪಿಯ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದ್ದು, ಸಾಕಷ್ಟು ಚರ್ಚೆ ನಡೆದಿತ್ತು. ಕೊನೆಗೆ ಈ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ತಗುಲುವ ವೆಚ್ಚವನ್ನು ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಸಮಾನವಾಗಿ ಭರಿಸಬೇಕೆಂಬ ಸಲಹೆ ವ್ಯಕ್ತವಾಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಮಿತಿಯ ಅಧ್ಯಕ್ಷ ಬಿ.ಆರ್. ಶ್ರೀನಿವಾಸಮೂರ್ತಿ, ‘ಮೆಟ್ರೊ ಕಾಮಗಾರಿ ನಡೆಯುತ್ತಿರುವ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಹಾಗಾಗಿ ಈ ದುರಸ್ತಿ ಕಾರ್ಯಕ್ಕೆ ತಗುಲುವ ವೆಚ್ಚವನ್ನು ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಸಮಾನವಾಗಿ ಭರಿಸಬೇಕು ಎಂಬ ಸಲಹೆ ನೀಡಲಾಗಿದೆ’ ಎಂದರು.

‘ಎತ್ತರಿಸಿದ ಮಾರ್ಗ (ವಯಾ ಡಕ್ಟ್) ನಿರ್ಮಾಣ ಕಾರ್ಯ ಪೂರ್ಣಗೊಂಡ ರಸ್ತೆಗಳ ದುರಸ್ತಿ ಕಾರ್ಯ ತಕ್ಷಣವೇ ಕೈಗೊಳ್ಳಬೇಕು. ಡಾಂಬರೀಕರಣದ ಬದಲಿಗೆ ‘ವೈಟ್ ಟ್ಯಾಪಿಂಗ್’ ವಿಧಾನದ ಮೂಲಕ ಕಾಂಕ್ರಿಟ್ ಲೇಪನ ಮಾಡಿ ರಸ್ತೆ ಅಭಿವೃದ್ಧಿಪಡಿಸಬೇಕು. ಇದಕ್ಕೆ ನಿಧಾನಗತಿಯ ಟೆಂಡರ್ ಪ್ರಕ್ರಿಯೆ ನಡೆಸುವ ಬದಲು ತ್ವರಿತಗತಿಯಲ್ಲಿ ಕೈಗೊಳ್ಳುವಂತೆಯೂ ತಿಳಿಸಲಾಗಿದೆ’ ಎಂದರು.

ಅಂದರೆ ಎತ್ತರಿಸಿದ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ರಸ್ತೆಗಳಲ್ಲಷ್ಟೇ ದುರಸ್ತಿ ಕಾರ್ಯ ಕೈಗೊಳ್ಳಬಹುದಾಗಿದೆ. ಆದರೆ ಹಲವು ಪ್ರಮುಖ ಮಾರ್ಗಗಳಲ್ಲಿ ಎತ್ತರಿಸಿದ ಮಾರ್ಗ ಪೂರ್ಣಗೊಳ್ಳಲು ಇನ್ನೂ ಕೆಲ ವರ್ಷಗಳು ಬೇಕಾಗಬಹುದು. ಅಲ್ಲಿಯವರೆಗೆ ಇದೇ ಸ್ಥಿತಿಯಲ್ಲಿದ್ದರೆ ವಾಹನ ಸಂಚಾರ ಇನ್ನಷ್ಟು ಹದಗೆಟ್ಟು ಜನತೆ ತೊಂದರೆ ಅನುಭವಿಸಬೇಕಾಗುತ್ತದೆ.

ಗಮನ ನೀಡಿಲ್ಲ: ‘ಮೆಟ್ರೊ ರೈಲು ಯೋಜನೆ ರೂಪಿಸಿದ ಸಂದರ್ಭದಲ್ಲೇ ರಸ್ತೆಗಳ ದುರಸ್ತಿ, ಅಭಿವೃದ್ಧಿಗೆ ಸಂಬಂಧಪಟ್ಟಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಒಂದಿಷ್ಟು ಹಣವನ್ನು ಕಾಯ್ದಿರಿಸಬೇಕಿತ್ತು. ಆದರೆ ಅನುದಾನ ಮೀಸಲಿಡದ ಕಾರಣ ದುರಸ್ತಿಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಆ ಹೊರೆಯನ್ನು ಪಾಲಿಕೆಗೆ ವಹಿಸಲು ಮುಂದಾಗಿದ್ದಾರೆ’ ಎಂದು ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಎಂಆರ್‌ಸಿಎಲ್ ನಿರ್ಲಕ್ಷ್ಯ: ‘ಬಿಎಂಆರ್‌ಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಮೆಟ್ರೊ ಕಾಮಗಾರಿ ನಡೆಯುತ್ತಿರುವ ರಸ್ತೆಗಳ ದುರಸ್ತಿಯನ್ನು ನಿಗಮವೇ ಕೈಗೊಳ್ಳಬೇಕಿತ್ತು. ಆದರೆ ಪಾಲಿಕೆ ವತಿಯಿಂದ ಕೈಗೊಳ್ಳುವಂತೆ ಸೂಚಿಸುವುದು ಸರಿಯಲ್ಲ’ ಎಂದು ಬಿಬಿಎಂಪಿ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ರವೀಂದ್ರ ಕಿಡಿ ಕಾರಿದರು.

‘ಮಾಗಡಿ ರಸ್ತೆ, ಮೈಸೂರು ರಸ್ತೆ, ಪಶ್ಚಿಮ ಕಾರ್ಡ್ ರಸ್ತೆಗಳು ಹದಗೆಟ್ಟಿದ್ದು, ಈ ಭಾಗದ ಜನತೆ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಪರಿಣಾಮವಾಗಿ ಜನರು ಪಾಲಿಕೆಯನ್ನು ದೂಷಿಸುವಂತಾಗಿದೆ. ಇಷ್ಟಾದರೂ ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿರುವುದು ಖಂಡನೀಯ. ಕೂಡಲೇ ಈ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಲಾಗುವುದು’ ಎಂದರು.

ಅಧಿಕಾರಿಗಳ ಸಭೆ: ‘ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳು ಹಾಳಾಗಿದ್ದು, ಜನತೆ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಒಂದೆರೆಡು ದಿನಗಳಲ್ಲಿ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಚರ್ಚಿಸಲಾಗುವುದು. ಜನತೆಗೆ ತೊಂದರೆಯಾದಂತೆ ಶೀಘ್ರವಾಗಿ ದುರಸ್ತಿ ಕಾರ್ಯ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ಎಸ್.ಕೆ.ನಟರಾಜ್ ಹೇಳಿದರು.

50: 50ರ ಅನುಪಾತ
‘ಮೆಟ್ರೊ ರೈಲು ಮಾರ್ಗ ಹಾದು ಹೋಗಿರುವ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ಉಂಟಾಗುವ ವೆಚ್ಚವನ್ನು ಬಿಎಂಆರ್‌ಸಿಎಲ್ ಹಾಗೂ ಪಾಲಿಕೆ ಸಮನಾಗಿ ಭರಿಸಬೇಕು ಎಂಬುದಾಗಿ ನಿರ್ಧಾರವಾಗಿದೆ. ಅದರಂತೆ ಶೇ 50ರಷ್ಟು ವೆಚ್ಚವನ್ನು ಭರಿಸಲು ಪಾಲಿಕೆ ಸಿದ್ಧವಿದೆ. ಆದರೆ ಕಾಮಗಾರಿ ಯಾರು ಕೈಗೊಳ್ಳಬೇಕು ಎಂಬ ಬಗ್ಗೆ ಬಿಎಂಆರ್‌ಸಿಎಲ್ ಸ್ಪಷ್ಟ ನಿರ್ಧಾರ ತಿಳಿಸಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹೇಳಿದರು.

‘ಈ ನಡುವೆ ಜನರು ತೊಂದರೆ ಅನುಭವಿಸುವುದನ್ನು ತಪ್ಪಿಸುವ ಸಲುವಾಗಿ ಕನಕಪುರ ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿರುವ ಮಾರ್ಗದಲ್ಲಿ ಇತ್ತೀಚೆಗಷ್ಟೇ ಪಾಲಿಕೆ ವತಿಯಿಂದ ದುರಸ್ತಿ ಕಾರ್ಯ ಕೈಗೊಂಡು ಡಾಂಬರು ಹಾಕಲಾಗಿದೆ. ಬಿಎಂಆರ್‌ಸಿಎಲ್ ಆದಷ್ಟು ಶೀಘ್ರವಾಗಿ ನಿರ್ಧಾರ ಪ್ರಕಟಿಸಿದರೆ ಅನುಕೂಲವಾಗಲಿದೆ. ಈ ಸಂಬಂಧ ಸದ್ಯದಲ್ಲೇ ಚರ್ಚಿಸಿ ನಿರ್ಧರಿಸಲಾಗುವುದು’ ಎಂದರು.

‘ರಸ್ತೆ ನಿರ್ವಹಣೆ ನಿಗಮದ್ದು’
ಮೆಟ್ರೊ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ರಸ್ತೆಗಳ ನಿರ್ವಹಣೆಯನ್ನು ‘ಬೆಂಗಳೂರು ಮೆಟ್ರೊ ರೈಲು ನಿಗಮ’ವೇ ನೋಡಿಕೊಳ್ಳುತ್ತಿದೆ ಎಂದು ನಿಗಮದ ವಕ್ತಾರ ಬಿ.ಎಲ್.ಯಶವಂತ್ ಚವಾಣ್ ಹೇಳಿದರು.

‘ಬ್ಯಾರಿಕೇಡ್‌ನ ಅಕ್ಕಪಕ್ಕದ ರಸ್ತೆಯ ಭಾಗ ಕಿತ್ತು ಹೋದರೆ, ಹಳ್ಳಕೊಳ್ಳಗಳಾದರೆ ಅವನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಮೇಲೆ ಆಯಾ ಭಾಗದ ರಸ್ತೆಗಳನ್ನು ನಿಗಮವೇ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಿದೆ. ಉದಾಹರಣೆಗೆ ಎಂ.ಜಿ ರಸ್ತೆಯಲ್ಲಿ ಕಾಮಗಾರಿ ಮುಗಿದ ಮೇಲೆ ಡಾಂಬರೀಕರಣ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
‘ಆದರೂ ಮೆಟ್ರೊ ಯೋಜನೆ ವ್ಯಾಪ್ತಿಯಲ್ಲಿ ರಸ್ತೆಗಳು ಬೇರೆ ಬೇರೆ ಕಾರಣಗಳಿಂದ ಪದೇ ಪದೇ ಹಾಳಾಗುತ್ತಿವೆ. ಜಲ ಮಂಡಳಿಯ ಕೊಳವೆಗಳು ಒಡೆದು ಹೋಗುವುದರಿಂದ ರಸ್ತೆಗಳ ಸ್ಥಿತಿ ಹದಗೆಡುತ್ತಿದೆ. ಸಂಬಂಧಪಟ್ಟ ಇತರ ಇಲಾಖೆಗಳು ಎಚ್ಚರ ವಹಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT