ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ಪೀಳಿಗೆಗೆ ಜನಪರ ಚಿಂತನೆ ಬೇಕಿದೆ’

ರೈತ ಹೋರಾಟಗಾರ ಹೇಮಂತ್‌ ಪಾಂಚಾಳಗೆ ನುಡಿ ನಮನ: ಹೋರಾಟ ಸ್ಮರಿಸಿದ ನಾಯಕರು
Last Updated 22 ಜೂನ್ 2017, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಬಹುರಾಷ್ಟ್ರೀಯ ಕಂಪೆನಿಗಳ ಅಬ್ಬರ ಮತ್ತು ವೇಗವಾಗಿ ನಡೆದಿರುವ ನಗರೀಕರಣ ಪ್ರಕ್ರಿಯೆಗಳಿಗೆ ಸಿಲುಕಿ ಕೃಷಿಕರ ಬದುಕು ಅಸಹನೀಯವಾಗಿದೆ. ಇಂತಹ ಸಂದಿಗ್ಧದಲ್ಲಿ ಹೊಸ ಪೀಳಿಗೆಗೆ ಜನಪರ ಚಿಂತನೆಯ ಸಿಂಚನವಾಗಬೇಕಾದ ಅಗತ್ಯವಿದೆ’ ಎಂದು ಅಖಿಲ ಭಾರತ ಕಿಸಾನ್‌ ಕೋಆರ್ಡಿನೇಷನ್‌ ಸಮಿತಿಯ ಅಧ್ಯಕ್ಷ ಭೂಪಿಂದರ್‌ ಸಿಂಗ್‌ ಮಾನ್‌ ಹೇಳಿದರು.

ಈಚೆಗೆ ನಿಧನರಾದ ರೈತ ಹೋರಾಟಗಾರ ಹೇಮಂತ್‌ ಕುಮಾರ್‌ ಪಾಂಚಾಳ ಅವರ ಗೌರವಾರ್ಥ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಾವು ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದಾಗ ಹೇಮಂತ್‌ ಅವರು ರೈತರ ಒಳಿತಿಗಾಗಿ ನೀಡಿದ್ದ ಹತ್ತು ಹಲವು ಸಲಹೆಗಳನ್ನು ತಾವು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದನ್ನು ನೆನಪಿಸಿಕೊಂಡರು.

‘ದೇಶಾದ್ಯಂತ ಸಂಚರಿಸಿ ರೈತರ ಬದುಕು ಬವಣೆಗಳನ್ನು ಅರಿತ್ತಿದ್ದ ಹೇಮಂತ್‌ ಅವರಂತಹ ಚಿಂತಕರ ಮಾರ್ಗದರ್ಶನ ಇವತ್ತು ನಮ್ಮ ಯುವ ಜನತೆಗೆ ಬೇಕಿತ್ತು. ಹೇಮಂತ್‌ ಅವರ ನಿಧನ ಈ ನೆಲದ ಯುವಜನರ ಪಾಲಿಗಂತೂ ದೊಡ್ಡ ನಷ್ಟ’ ಎಂದರು.

ಶಿರೋಮಣಿ ಅಕಾಲಿದಳದ ಸದಸ್ಯರೂ ಆಗಿರುವ ಸಂಸದ ಹರಿಂದರ್‌ ಸಿಂಗ್‌ ಖಾಲ್ಸಾ ಮಾತನಾಡಿ ‘ಹೇಮಂತ್‌ ಉತ್ತರ ಭಾರತದವರಿಗೆ ಉತ್ತರ ಭಾರತದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲೆತ್ನಿಸಿದವರು. ಪಂಜಾಬ್‌, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಓಡಾಡಿ ಪ್ರಜ್ಞಾವಂತ ಯುವಕರ ಬಲು ದೊಡ್ಡ ಪಡೆಯನ್ನೇ ಕಟ್ಟಿದವರು. ನನಗೆ ಗುರು ಸಮಾನರು‘ ಎನ್ನುತ್ತಾ ಗದ್ಗದಿತರಾದರು.

ಸಿಪಿಐ ಪಕ್ಷದ ಮುಖಂಡ ಸಿದ್ದನಗೌಡ ಪಾಟೀಲರು ಮಾತನಾಡಿ ‘ಎಂಬತ್ತರ ದಶಕದ ಆರಂಭದಲ್ಲಿ ಕರ್ನಾಟಕದಲ್ಲಿ ರೈತ ಚಳವಳಿಯನ್ನು ಹುಟ್ಟು ಹಾಕುವಲ್ಲಿ ಹೇಮಂತ್‌ ಕೊಡುಗೆ ಬಲು ದೊಡ್ಡದು. ಆ ಕಾಲದಿಂದಲೂ ನಾನು ಅವರನ್ನು, ಅವರ ಹೋರಾಟವನ್ನು ಹತ್ತಿರದಿಂದ ಬಲ್ಲೆ’ ಎಂದರು.

ಅಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಥ್ವಿ ರೆಡ್ಡಿಯವರು ಮಾತನಾಡುತ್ತಾ ‘ಹೇಮಂತ್‌ ನಡೆದಾಡುವ ವಿಶ್ವಕೋಶದಂತಿದ್ದರು. ಉತ್ತರ ಕರ್ನಾಟಕದ ಹಳ್ಳಿಹಳ್ಳಿಗಳ ಸುಖದುಃಖಗಳು ಅವರಿಗೆ ಗೊತ್ತಿದ್ದವು’ ಎಂದರು.

ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್‌.ಶ್ರೀನಿವಾಸ್‌ ಮಾತನಾಡಿ ‘ಅತ್ಯಂತ ಬುದ್ದಿವಂತ, ಜನಪರ ಚಿಂತಕ ಮತ್ತು ಹೋರಾಟಗಾರರಾಗಿದ್ದ ಹೇಮಂತ್‌ ಅವರಂತವರನ್ನು ಕಳೆದುಕೊಂಡ ಈ ನಾಡು ನಿಜಕ್ಕೂ ಬಡವಾಗಿದೆ. ಹೇಮಂತ್‌ ಎಂದೂ ಪ್ರಚಾರದ ಬೆನ್ನು ಹತ್ತಿದವರಲ್ಲ, ತಮ್ಮಷ್ಟಕ್ಕೆ ತಾವು ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಬಂದವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT