ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮ; ನಗರದಲ್ಲಿ ಎಂದಿನಂತೆ ಜನಜೀವನ
Last Updated 8 ಜನವರಿ 2019, 12:39 IST
ಅಕ್ಷರ ಗಾತ್ರ

ರಾಮನಗರ: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು (ಜೆಸಿಟಿ ಯು) ಮಂಗಳವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಪ್ರತಿಭಟನೆ ಕಾವು ಹೆಚ್ಚಿತ್ತು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಯೂ ಬಂದ್ ವಾತಾವರಣ ಇತ್ತು. ಬಹುತೇಕ ಕೈಗಾರಿಕೆಗಳ ಬಾಗಿಲು ತೆರೆದಿದ್ದರೂ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಬದಲಾಗಿ ಬೀದಿಗೆ ಇಳಿದು ಬೈಕ್ ರ್‍ಯಾಲಿ ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿದರು.

ಆದರೆ ಜಿಲ್ಲಾ ಕೇಂದ್ರ ರಾಮನಗರವೂ ಸೇರಿದಂತೆ ಉಳಿದೆಡೆ ಬಂದ್ ಪರಿಣಾಮ ಬೀರಲಿಲ್ಲ. ಜನಜೀವನ ಎಂದಿನಂತೆ ಇತ್ತು. ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚಾರ ಆರಂಭಿಸಿದವು. ಎಂಟು ಗಂಟೆ ಹೊತ್ತಿಗೆಲ್ಲ ಬಸ್ ನಿಲ್ದಾಣದ ಬಳಿ ಕೂಲಿ ಕಾರ್ಮಿಕರು ಸಾಲಾಗಿ ನಿಂತಿದ್ದು, ಕೆಲಸದ ನಿರೀಕ್ಷೆಯಲ್ಲಿ ಇದ್ದರು. ಬಸ್ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು. ಹೀಗಾಗಿ ಬಸ್‌ಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಯಿತು.

ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಬೆಳಗ್ಗೆಯಿಂದಲೇ ತೆರೆದಿದ್ದವು. ಆಟೊಗಳ ಸಂಚಾರವೂ ಎಂದಿನಂತೆಯೇ ಇತ್ತು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಬೆಳಗ್ಗೆ ವಾಹನಗಳ ಸಂಚಾರ ಕೊಂಚ ಕಡಿಮೆ ಇದ್ದು, ಬಿಸಿಲು ಹೆಚ್ಚಿದಂತೆಲ್ಲ ವಾಹನಗಳ ಓಡಾಟವು ಸಹಜ ಸ್ಥಿತಿಗೆ ಬಂದಿತು.

ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಕೆಲವು ಬ್ಯಾಂಕುಗಳು ಮುಚ್ಚಿದ್ದವು. ಆಸ್ಪತ್ರೆ, ಔಷಧ ಅಂಗಡಿಗಳು, ಮಾರುಕಟ್ಟೆ, ಚಿತ್ರಮಂದಿರಗಳು ಎಲ್ಲವೂ ಎಂದಿನಂತೆಯೇ ಕಾರ್ಯ ನಿರ್ವಹಿಸಿದವು. ಸರ್ಕಾರಿ ಕಚೇರಿಗಳು ತೆರೆದಿದ್ದವು.

ರೈತ ಸಂಘ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ ಬೆಂಬಲಿಸಿದ್ದವು, ಆದರೆ ಅನ್ಯ ಸಂಘಟನೆಗಳಿಂದ ಯಾವುದೇ ಪ್ರತಿಭಟನೆಗಳು ನಡೆಯಲಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದ ಎಲ್‌ಎಲ್‌ಬಿ ಪರೀಕ್ಷೆ, ದ್ವಿತೀಯ ಪಿ.ಯು, ಪೂರಕ ಪರೀಕ್ಷೆಗಳು ಮುಂದೂಡಲ್ಪಟ್ಟವು.

ಜಿಲ್ಲಾಧಿಕಾರಿಗೆ ಮನವಿ: ಸಿಐಟಿಯು ಹಾಗೂ ಎಐಟಿಯುಸಿ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಮಧ್ಯಾಹ್ನ ರಾಮನಗರದಲ್ಲಿ ಬೈಕ್ ರ್‍ಯಾಲಿ ನಡೆಸಿದವು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

‘ಸಾರಿಗೆ ವಲಯವನ್ನು ಖಾಸಗೀಕರಣ ಮಾಡಲು ಹೊರಟಿರುವ ಮೋಟಾರು ವಾಹನ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಬಾರದು. ಕೇಂದ್ರ ವೇತನ ಆಯೋಗದ ಶಿಫಾರಸಿನಂತೆ ಪ್ರತಿ ಕಾರ್ಮಿಕನಿಗೆ ₨18 ಸಾವಿರ ಕನಿಷ್ಠ ವೇತನ ಜಾರಿಯಾಗಬೇಕು. ಗುತ್ತಿಗೆ ಪದ್ಧತಿ ರದ್ದುಗೊಳ್ಳಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಷೇರು ಮಾರಾಟ ಮಾಡಬಾರದು. ಬ್ಯಾಂಕಿಂಗ್ ವಿಮೆ, ರಕ್ಷಣಾ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯನ್ನು ರದ್ದುಗೊಳಿಸಬೇಕು. ಪಿಎಫ್‌/ಎನ್‌ಪಿಎಸ್ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್ ಮನವಿ ಸ್ವೀಕರಿಸಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ವಿವಿಧ ಕಾರ್ಮಿಕ ಒಕ್ಕೂಟಗಳ ಪ್ರತಿನಿಧಿಗಳಾದ ಪ್ರಸನ್ನಕುಮಾರ್, ಪುಟ್ಟರಾಜು, ಯೋಗೇಶ್‌, ಪ್ರಸನ್ನ, ಬೋರಯ್ಯ, ಮಂಜುನಾಥ್, ಸತೀಶ್‌ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT