ಬುಧವಾರ, ಜನವರಿ 27, 2021
21 °C
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಕ್ಕೊರಲ ಆಗ್ರಹ

₹4.64 ಕೋಟಿ ಕ್ರಿಯಾಯೋಜನೆ ರದ್ದತಿ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಇಲ್ಲಿನ ನಗರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಮೊದಲಿನ 15ನೇ ಹಣಕಾಸು ಯೋಜನೆಯ ₹4.64 ಕೋಟಿಯ ಕ್ರಿಯಾಯೋಜನೆ ರದ್ದತಿಗೆ ನಿರ್ಣಯಿಸಲಾಯಿತು.

ಅಧಿಕಾರಿಗಳು ಕ್ರಿಯಾಯೋಜನೆ ಬಗ್ಗೆ ಸಭೆಗೆ ಮಾಹಿತಿ ನೀಡಿದಾಗ ‘ಕ್ರಿಯಾಯೋಜನೆ ಅಸಮರ್ಪಕವಾಗಿದೆ ಹಾಗೂ ಅಗತ್ಯ ಕೆಲಸಗಳಿಗೆ ಅನುದಾನ ನಿಗದಿಪಡಿಸದ ಕಾರಣ ಇನ್ನೊಮ್ಮೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು’ ಎಂದು ಸದಸ್ಯ ರವೀಂದ್ರ ಗಾಯಕವಾಡ ಆಗ್ರಹಿಸಿದರು. ಗಫೂರ್ ಪೇಶಮಾಮ್, ರವೀಂದ್ರ ಬೋರೋಳೆ, ಮಾರುತಿ ಲಾಡೆ, ಅನ್ವರ ಹಾಗೂ ಇತರೆ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಆದ್ದರಿಂದ ಕ್ರಿಯಾಯೋಜನೆ ರದ್ದುಗೊಳಿಸುವುದಾಗಿ ಪೌರಾಯುಕ್ತ ಗೌತಮಬುದ್ಧ ಕಾಂಬಳೆ ತಿಳಿಸಿದರು.

ಇಲ್ಲಿನ ಅನೇಕ ಲೇಔಟ್‌ಗಳಲ್ಲಿ ಒಂದೇ ನಿವೇಶನವನ್ನು ಹಲವಾರು ಜನರ ಹೆಸರಿಗೆ ಮಾಡಲಾಗುತ್ತಿದೆ. ಜಮೀನು ಒಬ್ಬರದಿದ್ದರೆ ಮಾಲೀಕರು ಮೂವರಿರುತ್ತಿದ್ದಾರೆ. ಆದ್ದರಿಂದ ಬಡವರು ಸಂಕಟ ಅನುಭವಿಸುತ್ತಿದ್ದು ಈ ಬಗ್ಗೆ ಪರಿಶೀಲನೆ ಕೈಗೊಂಡು ಅಂಥವರ ಪಟ್ಟಿ ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ಹಾಜರುಪಡಿಸಬೇಕು. ಆಗ ಕಾನೂನು ಕ್ರಮ ಕೈಗೊಳ್ಳಲು ಅನುಕೂಲ ಆಗುತ್ತದೆ ಎಂದೂ ಕೆಲವರು ಒತ್ತಾಯಿಸಿದರು.

ನಗರಸಭೆ ಸಿಬ್ಬಂದಿಯ ಬಾಕಿ ವೇತನವನ್ನು ಶೀಘ್ರ ಬಿಡುಗಡೆ ಮಾಡ ಬೇಕು. ನಾರಾಯಣಪುರ ಕ್ರಾಸ್‌ ನಲ್ಲಿನ ನಗರಸಭೆಯ ಹೊಸ ಕಟ್ಟಡದ ಕಾಮಗಾರಿ ಶೀಘ್ರ ಪೂರ್ಣಗೊಳಿಸ ಬೇಕು. ತ್ರಿಪುರಾಂತದ ಮಧ್ಯಭಾಗದಲ್ಲಿನ ಓಣಿಗಳಲ್ಲಿ ಇಕ್ಕಟ್ಟಾದ ರಸ್ತೆಗಳಿದ್ದು ಅಂಬ್ಯುಲೆನ್ಸ್ ಹೋಗುವುದಕ್ಕೂ ಸ್ಥಳ ಇಲ್ಲದಂತಾಗಿದ್ದು ಅಲ್ಲಿನ ಅತಿಕ್ರಮಣ ತೆರವುಗೊಳಿಸಲು ಓಣಿ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆ ಭಾಗದ ಸದಸ್ಯರು ವಿನಂತಿಸಿದರು.

ಕೈಕಾಡಿಗಲ್ಲಿ ಉದ್ಯಾನ, ಗಾಯತ್ರಿ ಹೋಟೆಲ್ ಹಿಂದಿನ ಉದ್ಯಾನ, ಶಿವಾಜಿನಗರ ಉದ್ಯಾನ, ಸಫಾ ಕಾಲೊನಿ ಉದ್ಯಾನ, ಎಂ.ಬಿ.ಪಾಟೀಲ ಲೇಔಟ್ ಉದ್ಯಾನಗಳ ಅಭಿವೃದ್ಧಿಗೆ ತಲಾ ₹10 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದಾಗ ಖಾಸಗಿ ಲೇಔಟ್‌ಗಳಲ್ಲಿನ ಉದ್ಯಾನಗಳ ಅಭಿವೃದ್ಧಿಗೆ ಅನುದಾನ ಒದಗಿಸಿರುವುದು ಸರಿಯಲ್ಲ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಅಧ್ಯಕ್ಷೆ ನಾಹಿದಾ ಸುಲ್ತಾನಾ, ಉಪಾಧ್ಯಕ್ಷೆ ಮೀನಾ ಗೋಡಬೋಲೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಿತಾ ಹಜಾರಿ ಪಾಲ್ಗೊಂಡಿದ್ದರು. ಸದಸ್ಯರಾದ ರಾಮ ಜಾಧವ, ಲಲಿತಾ ಡಾಂಗೆ, ನಿರ್ಮಲಾ ಶಿವಣಕರ, ರೇಖಾ ಮೈತ್ರಸಕರ್, ಶಹಾಜಹಾನಾ ಬೇಗಂ, ಕರೀಮೊದ್ದಿನ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಭೆ ನಂತರ ಕಸ ವಿಲೇವಾರಿಗಾಗಿ ಖರೀದಿಸಿದ ₹35 ಲಕ್ಷದ ವಾಹನಕ್ಕೆ ಪೂಜೆ ಸಲ್ಲಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು