ಭಾನುವಾರ, ಡಿಸೆಂಬರ್ 15, 2019
25 °C
ನವದೆಹಲಿ ಲಿಂಗಾಯತ ಸಮಾವೇಶ: ದಕ್ಷಿಣ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುವರಿ ಬೋಗಿಗಳು

ಬೀದರ್‌ನಿಂದ 10 ಸಾವಿರ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೀದರ್‌: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಒತ್ತಾಯಿಸಿ ನವದೆಹಲಿಯಲ್ಲಿ ಡಿ. 10 ರಿಂದ 12 ರ ವರೆಗೆ ನಡೆಯಲಿರುವ ಲಿಂಗಾಯತ ಬೃಹತ್ ಸಮಾವೇಶದಲ್ಲಿ ಬೀದರ್ ಜಿಲ್ಲೆಯಿಂದ 10 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.

ಬಾಡಿಗೆ ವಾಹನ, ಬಸ್, ರೈಲು, ವಿಮಾನದ ಮೂಲಕ ಲಿಂಗಾಯತರು ನವದೆಹಲಿಯನ್ನು ತಲುಪಲಿದ್ದಾರೆ. ಲಿಂಗಾಯತ ಸಮನ್ವಯ ಸಮಿತಿಯ ಮನವಿಯ ಮೇರೆಗೆ ಡಿ. 8 ರಿಂದ ಸಿಕಂದರಾಬಾದ್‌ನಿಂದ ನವದೆಹಲಿಗೆ ತೆರಳುವ ದಕ್ಷಿಣ ಎಕ್ಸ್‌ಪ್ರೆಸ್‌ ರೈಲಿಗೆ ಎರಡು ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿವಿಧ ಜಿಲ್ಲೆಗಳ ಅಸಂಖ್ಯಾತ ಲಿಂಗಾಯತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಲಿದೆ ಎಂದು ತಿಳಿಸಿದ್ದಾರೆ.

ನವದೆಹಲಿಯ ತಾಲಕಟೋರ್ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ಜಿಲ್ಲೆಯ ಜನರಿಗೆ ರಾಮಕೃಷ್ಣ ಆಶ್ರಮ ಮಾರ್ಗದಲ್ಲಿರುವ ಅಂಬೇಡ್ಕರ್ ಭವನ, ಮಂದಿರ ಮಾರ್ಗದಲ್ಲಿರುವ ಹಿಂದೂ ಮಹಾಸಭಾದ ಧರ್ಮ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಮಾವೇಶಕ್ಕೆ ಬರಲಿರುವವರು ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿ (ಮೊ: 6363847003)ಗೆ ಮಾಹಿತಿ ಒದಗಿಸಿದರೆ ಅವರಿಗೆ ಊಟ ಹಾಗೂ ವಸತಿಯ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ನಾಡಿನ ಮಠಾಧೀಶರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದ ಯಶಸ್ವಿಗಾಗಿ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಮಾಡಲಾಗಿದೆ. ಜಿಲ್ಲೆಯ ಎಂಟೂ ತಾಲ್ಲೂಕುಗಳಲ್ಲಿ ವಾಹನಗಳ ರ್‌್ಯಾಲಿ, ಸಭೆಗಳನ್ನು ನಡೆಸಲಾಗಿದೆ. ಕರಪತ್ರ ಹಂಚಲಾಗಿದೆ. ಕಟೌಟ್, ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಸಾಮಾಜಿಕ ಜಾಲ ತಾಣಗಳ ಮೂಲಕವೂ ಸಮಾವೇಶ ಹಾಗೂ ಲಿಂಗಾಯತ ಹೋರಾಟದ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 10 ರಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಅಂದು ಮಧ್ಯಾಹ್ನ ನಡೆಯಲಿರುವ ಧರ್ಮ ಚಿಂತನ ಗೋಷ್ಠಿಯಲ್ಲಿ ನಾಡಿನ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಡಿ. 11 ರಂದು ಸರ್ವ ಧರ್ಮ ಸಮನ್ವಯ ಗೋಷ್ಠಿ ಜರುಗಲಿದ್ದು, ಎಲ್ಲ ಧರ್ಮಗಳ ಧರ್ಮಗುರುಗಳು, ಮುಖಂಡರು ಭಾಗವಹಿಸಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಸಮಾವೇಶದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.

ಡಿ. 12 ರಂದು ತಾಲಕಟೋರ್ ಒಳಾಂಗಣ ಕ್ರೀಡಾಂಗಣದಿಂದ ಜಂತರ್‌ಮಂತರ್‌ವರೆಗೆ ಬೃಹತ್ ರ್‌್ಯಾಲಿ ನಡೆಯಲಿದೆ. ಜಂತರ್‌ಮಂತರ್‌ನಲ್ಲಿ ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆ ವರೆಗೆ ಧರಣಿ ನಡೆಯಲಿದೆ ಎಂದು ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ರಾಜೇಂದ್ರಕುಮಾರ ಗಂದಗೆ, ರಾಜೇಂದ್ರ ಜೊನ್ನಿಕೇರಿ, ರಾಜಕುಮಾರ ಪಾಟೀಲ ಬಗದಲ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು