ಬೀದರ್: ‘ಶಿಕ್ಷಣ ಕ್ಷೇತ್ರದಲ್ಲಿ ₹100 ಕೋಟಿ ಹೂಡಿಕೆಗೆ ನಿರ್ಧರಿಸಲಾಗಿದ್ದು, ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ’ ಎಂದು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಲೆಷಾಲಿಟಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು.
ನಗರದ ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಆಸ್ಪತ್ರೆಯ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ 2022-2023ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೆಡಿಕಲ್, ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಜೊತೆಗೆ ಶಾಲಾ ಕಾಲೇಜು ಆರಂಭಿಸಲು ಯೋಜನೆ ಸಿದ್ಧಪಡಿಸಲಾಗಿದೆ. ವೈದ್ಯಕೀಯ ಕ್ಷೇತ್ರದಂತೆ ಶಿಕ್ಷಣ ಕ್ಷೇತ್ರದಲ್ಲೂ ಉತ್ತಮ ಸೇವೆ ಜನರಿಗೆ ನೀಡುವುದು ನಮ್ಮ ಗುರಿ ಎಂದರು.
ಈಗಾಗಲೇ ಬಿಸ್ಸಿ ನರ್ಸಿಂಗ್ ಕಾಲೇಜು ಆರಂಭಿಸಲು ಅನುಮತಿ ದೊರೆತಿದೆ. ಶಾಲಾ, ಕಾಲೇಜುಗಳಿಗೆ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಸಹಕಾರಿ ಕ್ಷೇತ್ರದ ಮೊದಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಗೆ ಇದೆ. ಮಾಜಿಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಆಶಯದಂತೆ ರೈತರು, ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಷೇರುದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ 10ರಿಂದ ಶೇ 20ರಷ್ಟು ರಿಯಾಯಿತಿ ಸೌಲಭ್ಯ ನೀಡಲಾಗುತ್ತಿದೆ ಎಂದು ವಿವರಿಸಿದರು.
ಸಭೆಯಲ್ಲಿ ನಿರ್ದೇಶಕರಾದ ಡಿ.ಕೆ. ಸಿದ್ರಾಮ, ಡಾ. ಚಂದ್ರಕಾಂತ್ ಗುದಗೆ, ಡಾ. ರಜನೀಶ ವಾಲಿ, ಡಾ.ವಿಜಯಕುಮಾರ್ ಕೋಟೆ , ಸಂತೋಷ ತಾಳಂಪಳ್ಳಿ, ರಾಮದಾಸ ತುಳಸಿರಾಮ, ಉದಯ ಹಲವಾಯಿ, ಅಶೋಕ ರೇಜಂತಲ್, ವಿಜಯಲಕ್ಷ್ಮಿ ಹೂಗಾರ, ನಿಜ್ಜಪ್ಪ ಪತ್ರಿ, ಆಕಾಶ್ ಪಾಟೀಲ, ಸೈಯದ್ ಖುಝಿರಿಲ್ಲ, ಜೈಕುಮಾರ್ ಕಾಂಗೆ, ಅನಿಲ್ ಕುಮಾರ್ ಬೆಲ್ದಾರ್, ಆಸ್ಪತ್ರೆಯ ಸಿಇಒ ಕೃಷ್ಟಾ ರೆಡ್ಡಿ, ಆಡಳಿತಾಧಿಕಾರಿ ಡಾ. ದೀಪಕ ಚೋಕ್ಡಾ, ಎನ್‍ಎಸ್‍ಎಸ್‍ಕೆ ನಿರ್ದೇಶಕ ಶಂಕರ ಪಾಟೀಲ, ನರಸಾ ರೆಡ್ಡಿ, ಮಾಧವರಾವ್ ಪಾಟೀಲ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.