ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭ ಉದ್ಘಾಟನೆ

Last Updated 26 ಜನವರಿ 2020, 14:52 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ರೈಲು ನಿಲ್ದಾಣದ ಆವರಣದಲ್ಲಿ 100 ಅಡಿ ಎತ್ತರದ ಧ್ವಜಸ್ತಂಭವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿ ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಶಾಸಕರಾದ ರಹೀಂ ಖಾನ್, ಬಂಡೆಪ್ಪ ಖಾಶೆಂಪೂರ, ವಿಧಾನ ಪರಿಷತ್‌ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್ ಹಾಗೂ ರೈಲ್ವೆ ಅಧಿಕಾರಿಗಳು ಇದ್ದರು.

ಸಂಸದ ಭಗವಂತ ಖೂಬಾ ಅವರು ರೈಲು ನಿಲ್ದಾಣದ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣ ಹಾಗೂ 10.30ಕ್ಕೆ ಮಾಧ್ಯಮಗೋಷ್ಠಿ ನಡೆಸುವ ಕಾರ್ಯಕ್ರಮ ಇತ್ತು. ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳು ತರಾತುರಿಯಲ್ಲಿ 9.45 ಕ್ಕೆ ಅಲ್ಲಿಂದ ಹೊರಟು ರೈಲು ನಿಲ್ದಾಣಕ್ಕೆ ಬಂದರು. ರೈಲು ನಿಲ್ದಾಣದಲ್ಲಿ ಆಗಲೇ ಸಾಕಷ್ಟು ಜನ ಸೇರಿದ್ದರು.

ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ರೈಲ್ವೆ ಅಧಿಕಾರಿಗಳು, ಗಣ್ಯರು ರೈಲು ನಿಲ್ದಾಣದಲ್ಲಿ ಒಂದೂವರೆ ಗಂಟೆ ಕಾಯಬೇಕಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಟೀಕೆಗಳೂ ಕೇಳಿ ಬಂದವು. ಸಂಸದ ಖೂಬಾ 11.20ಕ್ಕೆ ಸ್ಥಳಕ್ಕೆ ಬಂದು ಗುಂಡಿ ಒತ್ತುವ ಮೂಲಕ ಧ್ವಜಾರೋಹಣ ನೆರವೇರಿಸಿದರು.

ಮೂರನೇ ಧ್ವಜಸ್ತಂಭ: ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ರೈಲು ನಿಲ್ದಾಣಗಳ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗಿದೆ. ದಕ್ಷಿಣ ಮಧ್ಯ ರೈಲ್ವೆ ವಿಭಾಗದ ಒಟ್ಟು 15 ನಿಲ್ದಾಣಗಳಲ್ಲಿ ಈ ಧ್ವಜಸ್ತಂಬ ಅಳವಡಿಸಲು ನಿರ್ಧರಿಸಲಾಗಿದೆ. ಹೈದರಾಬಾದ್‌ ಹಾಗೂ ಸಿಕಂದರಾಬಾದ್‌ನಲ್ಲಿ ಈಗಾಗಲೇ ಧ್ವಜಸ್ತಂಭ ಅಳವಡಿಸಲಾಗಿದ್ದು, ಬೀದರ್‌ನಲ್ಲಿರುವುದು ಮೂರನೇ ಧ್ವಜಸ್ತಂಬ’ ಎಂದು ತಿಳಿಸಿದರು.

‘ದೇಶಭಕ್ತಿಯನ್ನು ಜಾಗೃತಗೊಳಿಸುವ ಉದ್ದೇಶದಿಂದ ರೈಲು ನಿಲ್ದಾಣಗಳಲ್ಲಿ ಧ್ವಜಸ್ತಂಭ ನಿರ್ಮಿಸಲಾಗುತ್ತಿದೆ. ಈಗಾಗಲೇ ರೈಲು ನಿಲ್ಧಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬೀದರ್‌ ಮಾರ್ಗವಾಗಿ ಸಿಕಂದರಾಬಾದ್‌–ಹುಬ್ಬಳ್ಳಿ ರೈಲನ್ನು ಓಡಿಸುವ ಪ್ರಸ್ತಾವ ರೈಲ್ವೆ ಇಲಾಖೆ ಮುಂದೆ ಇದೆ’ ಎಂದು ಹೇಳಿದರು.

‘ಬೆಳಗಾವಿಯಲ್ಲಿ ಪಿಟ್‌ಲೈನ್‌ ಇಲ್ಲ. ಪಿಟ್‌ಲೈನ್‌ ನಿರ್ಮಾಣವಾದ ಮೇಲೆ ಸಿಕಂದರಾಬಾದ್‌–ಹುಬ್ಬಳ್ಳಿ ರೈಲನ್ನು ಬೆಳಗಾವಿ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಬೀದರ್‌–ನಾಂದೇಡ್‌ ರೈಲು ಮಾರ್ಗದ ಡಿಪಿಆರ್‌ ಆಗಿದೆ. ಹೊಸ ಮಾರ್ಗ ನಿರ್ಮಾಣ ಆಗಬೇಕಿದೆ’ ಎಂದು ತಿಳಿಸಿದರು.

‘ಕಲಬುರ್ಗಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಬರಲು ವಿಶೇಷ ರೈಲು ಓಡಿಸುವಂತೆ ಯಾರೊಬ್ಬರೂ ಮನವಿ ಮಾಡಿಲ್ಲ. ಮೊದಲೇ ಮನವಿ ಮಾಡಿದ್ದರೆ ರೈಲು ಓಡಿಸಬಹುದಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT