ಶನಿವಾರ, ಮಾರ್ಚ್ 6, 2021
18 °C
ಪಕ್ಷಿ ಪ್ರಪಂಚದ ಸೊಬಗು ಕಂಡು ಸಂಭ್ರಮಿಸಿದ ವೀಕ್ಷಕರು

ಬೀದರ್‌: ಮೊದಲ ದಿನ 105 ಹಕ್ಕಿಗಳ ದರ್ಶನ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಬೀದರ್‌: ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಿರುವ ‘ಕರ್ನಾಟಕ ಹಕ್ಕಿ ಹಬ್ಬ’ದ ಅಂಗವಾಗಿ ರಾಜ್ಯದ ವಿವಿಧೆಡೆಯಿಂದ ಪರಂಪರೆ ನಗರಕ್ಕೆ ಬಂದಿರುವ ಪಕ್ಷಿಪ್ರೇಮಿಗಳಿಗೆ ಮೊದಲ ದಿನವಾದ ಶನಿವಾರ 105 ಹಕ್ಕಿಗಳ ದರ್ಶನ ಭಾಗ್ಯ ದೊರೆಯಿತು. ವಿದೇಶಿ ಮೂಲದ ಅಪರೂಪದ ಹಕ್ಕಿಗಳು ವೀಕ್ಷಕರನ್ನು ಪುಳಕಿತಗೊಳಿಸಿದವು.

ಬೀದರ್‌ ತಾಲ್ಲೂಕಿನ ಸಂಗೋಳಗಿ ಹಾಗೂ ಹುಮನಾಬಾದ್‌ ತಾಲ್ಲೂಕಿನ ಅತಿವಾಳ ಸಮೀಪ ಕಾರಂಜಾ ಹಿನ್ನೀರ ಪ್ರದೇಶದಲ್ಲಿ
ಪಕ್ಷಿಗಳು ಬೆಳಗಿನ ಜಾವ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡಿದ್ದು, ಪಕ್ಷಿ ಪ್ರೇಮಿಗಳ ಖುಷಿಯನ್ನು ಇಮ್ಮಡಿಗೊಳಿಸಿತು. ಹಕ್ಕಿ ವೀಕ್ಷಕರ ಇನ್ನೊಂದು ತಂಡ ಪಾಪನಾಶ ಕೆರೆ ಪ್ರದೇಶದಲ್ಲಿ ಅಪರೂಪದ ಪಕ್ಷಿಗಳನ್ನು ಕಂಡು ಸಂಭ್ರಮಿಸಿತು.

ವಿವಿಧ ಬಗೆಯ ಪಕ್ಷಿ ಆವಾಸ ಸ್ಥಾನಗಳಲ್ಲೇ ಕೆಲಹೊತ್ತು ಕೂತು ವೀಕ್ಷಕರು ಪಕ್ಷಿ ಪ್ರಪಂಚದ ಕೌತುಕಗಳನ್ನು ಕಂಡು ಬೆರಗಾದರು. ಅಪರೂಪದ ಪಕ್ಷಿಗಳ ವಯ್ಯಾರದ ಹಾರಾಟ, ಇಂಪಾದ ಧ್ವನಿ, ಜಟ್ಟಿಗಳ ಗುದ್ದಾಟ, ಗರಿಬಿಚ್ಚಿ ಕುಣಿದ ಹಕ್ಕಿಗಳ ಮೋಹಕತೆಯನ್ನು ವೀಕ್ಷಿಸಿ ಸಂಭ್ರಮಿಸಿದರು.

ಗ್ರೇಟರ್‌ ಫ್ಲಾಮಿಂಗೊ, ಮಂಗೋಲಿಯಾದ ಪಕ್ಷಿ, ಹಿಮಾಲಯದ ಬ್ಲ್ಯೂಕ್ಯಾಪ್ ರಾಕ್‌ಥ್ರಸ್, ರೆಡ್‌ ಕ್ರೆಸ್ಟೆಡ್‌ ಪೋಚರ್ಡ್, ಗ್ಲೋಸಿ ಇಹಿಸ್, ವೈಟ್‌ ವೆಗ್‌ಟೇಲ್, ಸಿಟರ್ನ್‌ ವೆಗ್‌ಟೇಲ್‌, ಪ್ರಾಂಟಿನ್‍ಕೊಲ್, ಎಲ್ಲೊ ವೆಗ್‌ಟೇಲ್, ಗ್ರೇವೆಟ್‌ಟೇಲ್, ಲಿಟಿಲ್‌ ಸ್ಟಿಂಟ್, ಲಿಟಲ್‌ ಪ್ರ್ಯಾಂಟಿನ್‌ ಕಾಲ್, ಸ್ಪೂನ್‌ಬಿಲ್‌, ಕಾಮನ್‌ಕೂಟ್, ಬಾರ್‌ ಹೆಡೆಡ್‌ಗೂಸ್, ಬ್ಯಾನ್‌ಸ್ವಾಲೊ, ಬ್ರೌನ್‌ಹೆಡೆಡ್‌ ಗುಲ್, ಬ್ಲ್ಯಾಕ್‌ ಹೆಡೆಡ್‌ ಗುಲ್, ಗ್ರೇಹಾರ್ನ್‌ ಬಿಲ್‌, ಪೆರಾಡೈಸ್‌ ಫ್ಲೈಕ್ಯಾಚರ್, ಓರಿಯಂಟಲ್‌ ಡಾರ್ಟರ್, ರಿವರ್ಟನ್, ಪಿಟ್ಟಾ, ಕೊಕ್ಕರೆ, ಬಡಿಗನ ಹಕ್ಕಿ, ಕರಿಭೀಮಾ, ನೀಲಕಂಠ, ಬೂದು ಕೊಕ್ಕರೆಗಳು ಕಂಡು ಬಂದವು.

ಬೀದರ್‌ ಅಪರೂಪದ ಹಕ್ಕಿಗಳಿಗೆ ನೆಲೆ ಒದಗಿಸಿಕೊಟ್ಟಿರುವ ಐತಿಹಾಸಿಕ ನಾಡಾಗಿದೆ. ಇಲ್ಲಿಯ ಪಕ್ಷಿಗಳನ್ನು ನೋಡಿ ಬಹಳ ಸಂತಸವಾಗಿದೆ ಎಂದು ಬೆಂಗಳೂರಿನಿಂದ ಬಂದಿರುವ ಹರಿಶ್ಚಂದ್ರ, ಸಂತೋಷ ಹಾಗೂ ಕುಮುದಾ ಖುಷಿ ಹಂಚಿಕೊಂಡರು.

‘ಜಿಲ್ಲೆಯ ಪಾಪನಾಶ ಕೆರೆ, ಕಾರಂಜಾ ಜಲಾಶಯದ ಹಿನ್ನೀರಿನ ಪ್ರದೇಶ, ಹಾಲಹಿಪ್ಪರ್ಗಾ, ಹುಪಳಾ ಕೆರೆ, ಕರಕನಳ್ಳಿ ಔಷಧಿವನ, ಚಟ್ನಳಿ ಹುಲ್ಲುಗಾವಲು, ಕೌಡಗಾಂವ ಅರಣ್ಯ ಪ್ರದೇಶ ಹಾಗೂ ಮಹಾಗಾಂವ ಕೆರೆ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚಿನ ಪಕ್ಷಿ ಪ್ರಭೇದಗಳು ಕಾಣಸಿಗುತ್ತವೆ. ಇವುಗಳಲ್ಲಿ ವಲಸೆ ಹಕ್ಕಿಗಳೂ ಸೇರಿವೆ’ ಎಂದು ಬೀದರ್‌ ಉಪ ಅರಣ್ಯ ಸಂರಕ್ಷಣಾಧಿಕಾರಿ ಉಪ ಸಂರಕ್ಷಣಾಧಿಕಾರಿ (ಸಾಮಾಜಿಕ) ಕೆ.ಎಂ.ಗಾಮನಗಟ್ಟಿ ಮಾಹಿತಿ ನೀಡಿದರು.

‘ಬೀದರ್ ಹಕ್ಕಿಹಬ್ಬದ ರಾಯಭಾರಿ ಹಕ್ಕಿಯಾಗಿ ಒಣ ಪ್ರದೇಶಗಳಲ್ಲಿ ಕಾಣಸಿಗುವ ಭಾರತೀಯ ಕೋರ್ಸರ್ ಪಕ್ಷಿಯನ್ನು ಆಯ್ಕೆ ಮಾಡಲಾಗಿದೆ. ಈ ಪಕ್ಷಿಯ ಆವಾಸ ಸ್ಥಾನ ರಕ್ಷಿಸುವ ಹಾಗೂ ಅದರ ಮಹತ್ವ ತಿಳಿಸುವ ದಿಸೆಯಲ್ಲಿ ಒತ್ತು ಕೊಡಲಾಗಿದೆ’ ಎಂದು ಬೀದರ್‌ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ತೋಡುರಕರ್‌ ತಿಳಿಸಿದರು.

‘ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಪಕ್ಷಿ ವೀಕ್ಷಣೆಯೂ ಮಹತ್ವದ ಪಾತ್ರ ವಹಿಸುತ್ತದೆ. ಪರಿಸರ ಸಂರಕ್ಷಣೆ, ವನ್ಯ ಸಂಪತ್ತಿನ ತಿಳಿವಳಿಕೆ ಹಾಗೂ ಪಕ್ಷಿ ವೀಕ್ಷಣೆ ಉತ್ತೇಜಿಸುವುದು ಹಬ್ಬದ ಉದ್ದೇಶವಾಗಿದೆ. ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಅರಣ್ಯ ಇಲಾಖೆ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಯ ಸಹಯೋಗದೊಂದಿಗೆ ಹಕ್ಕಿಹಬ್ಬ ನಡೆಯುತ್ತಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.