ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಿನಗಳಲ್ಲಿ 1,087 ವಾಹನ ವಶ

ವಾಹನಗಳ ಬಿಡುಗಡೆಗೆ ಸರ್ಕಾರದಿಂದ ಬಾರದ ಮಾರ್ಗಸೂಚಿ; ಸಾಲು ಸಾಲು ನಿಂತ ಬೈಕ್‌, ಕಾರ್‌ಗಳು
Last Updated 14 ಮೇ 2021, 6:38 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಲಾಕ್‍ಡೌನ್ ನಡುವೆಯೂ ಅನಗತ್ಯವಾಗಿ ಸಂಚರಿಸುತ್ತಿದ್ದ ಒಟ್ಟು 1,087 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೊದಲ ದಿನ ಅತಿಹೆಚ್ಚು ಅಂದರೆ 836, ಎರಡನೇ ದಿನ 186, ಮೂರನೇ ದಿನ 36 ಹಾಗೂ ನಾಲ್ಕನೇ ದಿನವಾದ ಗುರುವಾರ 29 ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಜಪ್ತಿ ಮಾಡಲಾದ ದ್ವಿಚಕ್ರ ವಾಹನಗಳನ್ನು ಟೆಂಪೊ ಹಾಗೂ ಇತರ ವಾಹನಗಳಲ್ಲಿ ಪೊಲೀಸ್ ಠಾಣೆಗೆ ಒಯ್ದಿದ್ದಾರೆ. ಠಾಣೆ ಆವರಣದಲ್ಲಿ ಸಾಲು ಸಾಲು ವಾಹನಗಳು ಕಂಡುಬರುತ್ತಿವೆ.

ಠಾಣೆಗೆ ಹೋಗಿ ದಾಖಲೆ ತೋರಿಸಿದ ಸರ್ಕಾರಿ ನೌಕರರು, ಅಗತ್ಯ ಸೇವೆಯಲ್ಲಿ ಇರುವವರು ಹಾಗೂ ರೈತರ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಕಾರಣ ಇಲ್ಲದೆ ಸಂಚರಿಸುತ್ತಿದ್ದ ವಾಹನ ಸವಾರರು ಮಾತ್ರ ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶ ಬರುವವರೆಗೆ ತಮ್ಮ ವಾಹನ ಬಿಡಿಸಿಕೊಳ್ಳಲು ಕಾಯಬೇಕಿದೆ.

ಲಾಕ್‍ಡೌನ್ ವೇಳೆ ವಶಪಡಿಸಿಕೊಳ್ಳ ಲಾದ ವಾಹನಗಳ ಬಿಡುಗಡೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ವಾಹನಗಳ ಮಾಲೀಕರ ಹೆಸರು, ಊರು, ಮೊಬೈಲ್ ಸಂಖ್ಯೆಗಳನ್ನು ಬರೆದುಕೊಳ್ಳಲಾಗಿದೆ. ಮೇಲಧಿಕಾರಿಗಳ ಆದೇಶ ಬಂದ ನಂತರ ಅವರಿಗೆ ಮಾಹಿತಿ ಕೊಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

ವಾಹನ ಮಾಲೀಕರು ಆರ್‌ಸಿ ಬುಕ್, ಇನ್ಶೂರೆನ್ಸ್, ಲೈಸೆನ್ಸ್ ಹಾಗೂ ಆಧಾರ್ ತೋರಿಸಿ ತಮ್ಮ ವಾಹನ ಪಡೆಯಬಹುದು. ವಾಹನ ವಶಕ್ಕೆ ಪಡೆದ ಸಂದರ್ಭದಲ್ಲಿ ಸವಾರ ಹೆಲ್ಮೇಟ್ ಧರಿಸಿರದಿದ್ದರೆ ₹500 ದಂಡ ಪಾವತಿಸ ಬೇಕಾಗುತ್ತದೆ ಎಂದು ತಿಳಿಸುತ್ತಾರೆ.

ಮಾಸ್ಕ್ ಧರಿಸದವರಿಗೂ ದಂಡ: ಮಾಸ್ಕ್ ಧರಿಸದೆ ಓಡಾಡುತ್ತಿದ್ದ 4,536 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಒಟ್ಟು ₹4,53,800 ದಂಡ ವಿಧಿಸಿದ್ದಾರೆ. ಕರ್ನಾಟಕ ಎಪಿಡೆಮಿಕ್ ಡಿಸೀಸ್ ಆ್ಯಕ್ಟ್ 2020 ರ ಅನ್ವಯ 7 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.

ಪೊಲೀಸರಿಂದ 24 ಗಂಟೆ ಗಸ್ತು

ಕೋವಿಡ್ ತಡೆಗೆ ವಿಧಿಸಲಾದ ಲಾಕ್‍ಡೌನ್ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ತಿಳಿಸಿದ್ದಾರೆ.

ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ. ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಯೂ ಗಸ್ತು ನಡೆಸುತ್ತಿದ್ದಾರೆ. ಅನಗತ್ಯವಾಗಿ ಸಂಚರಿಸುವ ವಾಹನಗಳ ಜಪ್ತಿ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬೀದರ್ ಜಿಲ್ಲೆ ತೆಲಂಗಾಣ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಇದೆ. ಹೀಗಾಗಿ ಜಿಲ್ಲೆಯ ಗಡಿಗಳಲ್ಲಿ ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ವಾಹನ ಹಾಗೂ ವ್ಯಕ್ತಿಗಳು ಹೊರಗೆ ಹೋಗುವುದು ಹಾಗೂ ಹೊರಗಿನವರು ಜಿಲ್ಲೆಯ ಗಡಿಯೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸರಕು ಸಾಗಣೆ ಹಾಗೂ ತುರ್ತು ವೈದ್ಯಕೀಯ ಸೇವೆ ಅವಶ್ಯಕತೆ ಇರುವ ವ್ಯಕ್ತಿಗಳ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT