ಬುಧವಾರ, ಸೆಪ್ಟೆಂಬರ್ 22, 2021
24 °C
ಪರೀಕ್ಷೆ ಬರೆದ 27,679 ಮಕ್ಕಳು

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ 303 ವಿದ್ಯಾರ್ಥಿಗಳು ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಮೊದಲ ದಿನ 303 ಜನ ಗೈರಾದರೆ, 27,679 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೈಹಿಕ ಉಷ್ಣಾಂಶ ಪರೀಕ್ಷಿಸಿ ವಿದ್ಯಾರ್ಥಿಗಳನ್ನು ಒಳಗಡೆ ಬಿಡಲಾಯಿತು. ಮೈಲೂರ್‌ ಕ್ರಾಸ್‌ನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಚಪ್ಪಾಳೆ ತಟ್ಟಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.

ಪರೀಕ್ಷಾ ಕೇಂದ್ರಗಳ ಹೊರ ಭಾಗದಲ್ಲಿ ನಾಮಫಲಕ ಅಳವಡಿಸಿ ನೋಂದಣಿ ಸಂಖ್ಯೆ ನಮೂದಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಗುಂಪುಗೂಡದಂತೆ ತಿಳಿವಳಿಕೆ ನೀಡಿ ಪರೀಕ್ಷಾ ಸಿಬ್ಬಂದಿ ಒಳಗೆ ಕಳಿಸಿದರು. ಮಾಸ್ಕ್ ಧರಿಸದೆ ಬಂದಿದ್ದ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಮಾಸ್ಕ್ ವಿತರಿಸಲಾಯಿತು.

ಜಿಲ್ಲೆಯಲ್ಲಿ 153 ಸಾಮಾನ್ಯ ಹಾಗೂ 11 ಸೂಕ್ಷ್ಮ ಪರೀಕ್ಷಾ ಕೇಂದ್ರ ಸೇರಿ ಒಟ್ಟು 164 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.

12,289 ಬಾಲಕರು ಹಾಗೂ 11,634 ಬಾಲಕಿಯರು ಸೇರಿ ಒಟ್ಟು 27,999 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 27,679 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಬೀದರ್‌ನಲ್ಲಿ ಜ್ವರ ಕಾಣಿಸಿಕೊಂಡ ಒಬ್ಬ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಯಿತು. 266 ವಲಸೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಪರೀಕ್ಷೆ ಬರೆದರು.

ಬೀದರ್‌ ಜಿಲ್ಲೆಯಲ್ಲಿ 23,726 ರೆಗ್ಯುಲರ್, 1,310 ಖಾಸಗಿ ಹಾಗೂ 2,643 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 170 ರೆಗ್ಯುಲರ್, 42 ಖಾಸಗಿ ಹಾಗೂ 91 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 303 ವಿದ್ಯಾರ್ಥಿಗಳು ಗೈರಾಗಿದ್ದರು ಎಂದು ಡಿಡಿಪಿಐ ಗಂಗಣ್ಣ ಸ್ವಾಮಿ ತಿಳಿಸಿದರು.

‘ಪರೀಕ್ಷೆ ಬರೆಯುವ ಮುನ್ನ ಸ್ವಲ್ಪ ಭಯ ಇತ್ತು. ಪರೀಕ್ಷೆಯಲ್ಲಿ ಸರಳವಾದ ಪ್ರಶ್ನೆಗಳನ್ನು ಕೊಡಲಾಗಿತ್ತು. ಹೀಗಾಗಿ ಉತ್ತರ ಬರೆಯಲು ಕಷ್ಟವಾಗಲಿಲ್ಲ. ಪರೀಕ್ಷೆ ಹೊಸ ಅನುಭವ ನೀಡಿತು’ ಎಂದು ಸರ್ದಾರ್‌ ಜೋಗಾಸಿಂಗ್‌ ಪ್ರೌಢಶಾಲೆ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರಣ್ಯ ಪ್ರೌಢಶಾಲೆಯ ವಿದ್ಯಾರ್ಥಿನಿ ವಚನಾಂಬಿಕಾ ಅನುಭವ ಹಂಚಿಕೊಂಡರು.

‘ಶಿಕ್ಷಣ ಇಲಾಖೆಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ರೀತಿಯ ತೊಂದರೆಯಾಗಲಿಲ್ಲ’ ಎಂದು ನಗರದ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆ ಕೇಂದ್ರದಲ್ಲಿ ಪರೀಕ್ಷೆ ಬರೆದ ಅರುಣೋದಯ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಪರಮೇಶ್ವರ ರವೀಂದ್ರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು