ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಕೋವಿಡ್‌ ಲಸಿಕೆ ಪಡೆದ 3.47 ಲಕ್ಷ ಜನ

ಜಿಲ್ಲಾ ವಾರ್‌ರೂಮ್ ಸಿಬ್ಬಂದಿಯಿಂದ ಜನ ಜಾಗೃತಿ; ಲಸಿಕೆ ಪಡೆಯಲು ಬರುವವರ ಸಂಖ್ಯೆ ಹೆಚ್ಚಳ
Last Updated 5 ಜೂನ್ 2021, 5:57 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಲಸಿಕಾಕರಣ ಬಿರುಸು ಪಡೆದಿದೆ. ಲಸಿಕೆ ಜಾಗೃತಿಯೂ ಮುಂದುವರಿದಿದೆ. ಜಿಲ್ಲಾ ವಾರ್‌ರೂಮ್ ಸಿಬ್ಬಂದಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಯೊಬ್ಬರನ್ನು ಸಂಪರ್ಕಿಸಿ ಲಸಿಕೆ ಪಡೆಯುವಂತೆ ಮನವರಿಕೆ ಮಾಡುತ್ತಿದ್ದಾರೆ. ಹೀಗಾಗಿ ಲಸಿಕೆ ಪಡೆಯಲು ಕೇಂದ್ರಗಳಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 3,47,425 ಮಂದಿ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ 1,96,835 ಮಂದಿ ಕೋವ್ಯಾಕ್ಸಿನ್‌ ಲಸಿಕೆಯ ಎರಡನೇ ಡೋಸ್ ಪಡೆಯಬೇಕಿದೆ. ಇವರಲ್ಲಿ ಅನಾರೋಗ್ಯದ ಕಾರಣ ಅನೇಕರಿಗೆ ಎರಡನೇ ಡೋಸ್‌ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಮೊದಲ ಡೋಸ್‌ ಪಡೆದ ಸೋಂಕು ಕಾಣಿಸಿಕೊಂಡವರಿಗೆ ಒಂದಿಷ್ಟು ಅಂತರ ಕಾಯ್ದುಕೊಂಡು ಲಸಿಕೆ ಪಡೆಯಲು ಸೂಚಿಸಲಾಗಿದೆ.
2,54,739 ಜನ ಕೋವಿಶೀಲ್ಡ್‌ ಮೊದಲ ಡೋಸ್ ಹಾಗೂ 65,519 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಇನ್ನೂ 1,89,220 ಜನ ಕೋವಿಶೀಲ್ಡ್‌ ಎರಡನೇ ಡೋಸ್ ಪಡೆದುಕೊಳ್ಳಬೇಕಿದೆ. ಕೋವ್ಯಾಕ್ಸಿನ್‌ ಮೊದಲ ಡೋಸ್ 18,891 ಜನ ಹಾಗೂ ಎರಡನೇ ಡೋಸ್ 11,276 ಜನ ಪಡೆದಿದ್ದಾರೆ. ಇನ್ನೂ 1,96,835 ಮಂದಿ ಕೋವ್ಯಾಕ್ಸಿನ್‌ ಎರಡನೇ ಡೋಸ್ ಪಡೆಯಬೇಕಿದೆ.

ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್ ಪಡೆದ 84 ದಿನ ಮುಗಿದವರು ಹಾಗೂ ಕೋವಾಕ್ಸಿನ್‌ ಪಡೆದು ಒಂದು ತಿಂಗಳು ಪೂರ್ಣಗೊಳಿಸಿದವರು ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಎರಡನೇ ಡೋಸ್ ಪಡೆಯಬಹುದಾಗಿದೆ. ಅಲ್ಲಿ ಯಾರೂ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ತಿಳಿವಳಿಕೆ ಮೂಡಿಸುತ್ತಿದ್ದಾರೆ.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೆರವಿನಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ದೈಹಿಕ ಅಂಗವಿಕಲರು, ಮಾನಸಿಕ ಅಸ್ವಸ್ಥರಿಗೆ ಅವರು ಇರುವಲ್ಲಿಗೆ ಹೋಗಿ ಕೋವಿಡ್‌ ಲಸಿಕೆ ಕೊಡುತ್ತಿದ್ದಾರೆ. ದುರ್ಬಲರಿಗೆ ಆದ್ಯತೆ ಮೇಲೆ ಕೋವಿಡ್‌ ಲಸಿಕೆ ಕೊಡುವ ಕಾರ್ಯ ತೀವ್ರಗತಿಯಲ್ಲಿ ನಡೆದಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್‌. ಹೇಳುತ್ತಾರೆ.

ಕೋವಿಡ್ ಮೊದಲ ಲಸಿಕೆ ಪಡೆದಾಗ ನೀಡಿದ ಮೊಬೈಲ್ ಸಂಖ್ಯೆಗೆ ಮೆಸೇಜ್‌ ಬಂದಿರುತ್ತದೆ. ಬಾರದಿದ್ದರೂ ಇಲಾಖೆಯ ವೆಬ್‌ಸೈಟ್‌ನಲ್ಲಿ ದಾಖಲಾಗಿರುತ್ತದೆ. ಆರೋಗ್ಯ ಸಿಬ್ಬಂದಿ ಸ್ಥಳದಲ್ಲೇ ಖಾತರಿ ಪಡಿಸಿಕೊಂಡು ಎರಡನೇ ಡೋಸ್ ಕೊಡಲಿದ್ದಾರೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆಯುವುದು ಅಗತ್ಯ ಎಂದು ಜಿಲ್ಲಾ ವಾರ್‌ರೂಮ್‌ ನೋಡಲ್‌ ಅಧಿಕಾರಿ ಡಾ.ಗೌತಮ ಅರಳಿ ಹೇಳುತ್ತಾರೆ.

ಇಲಾಖೆಗಳ ನಡುವೆ ಸಮನ್ವಯ: ಕೋವಿಡ್‌ ನಿಯಂತ್ರಿಸಲು ಆರೋಗ್ಯ ಇಲಾಖೆ ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದರೂ ಸಮನ್ವಯದ ಕೊರತೆಯಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದವು. ಜಿಲ್ಲಾಡಳಿತ ವಾರ್‌ರೂಮ್‌ ಆರಂಭಿಸಿದ ನಂತರ ಅಲ್ಲಿನ ಅಧಿಕಾರಿಗಳು ನಿತ್ಯ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಜನರಿಗೆ ಉತ್ತಮ ಸೇವೆ ದೊರಕುವಂತೆ ಮಾಡಿದ್ದಾರೆ.

ವಾರ್‌ರೂಮ್‌ಗೆ ನಿತ್ಯ ನೂರಾರು ಕರೆಗಳು ಬರುತ್ತಿವೆ. ವಾರ್‌ರೂಮ್‌ ಸಿಬ್ಬಂದಿ ಪ್ರತಿಯೊಂದು ಕರೆಯನ್ನೂ ಗಂಭೀರವಾಗಿ ಪರಿಗಣಿಸಿ ಜನರ ಕಷ್ಟ, ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ತಕ್ಷಣ ಪರಿಹಾರ ಸೂಚಿಸುತ್ತಿರುವುದರಿಂದ ವಾರ್‌ರೂಮ್‌ಗೆ ಬರುವ ಕರೆಗಳ ಸಂಖ್ಯೆ ಹೆಚ್ಚಾಗಿದೆ. ಅನೇಕರು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ ಮಾಹಿತಿ ಪಡೆದು ಅನುಮಾನ ನಿವಾರಿಸಿಕೊಳ್ಳುತ್ತಿದ್ದಾರೆ.

ವಾರ್‌ರೂಮ್‌ ಸಿಬ್ಬಂದಿ ಕೋವಿಡ್‌ ಲಸಿಕೆ ಪಡೆದುಕೊಳ್ಳುವಂತೆ ಪ್ರತಿಯೊಬ್ಬರ ಮೊಬೈಲ್‌ಗೆ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ. ಮೂರು ದಿನಗಳಲ್ಲಿ ಎಂಟು ಸಾವಿರ ಜನರನ್ನು ಸಂಪರ್ಕಿಸಿ ಲಸಿಕೆ ಪಡೆದುಕೊಳ್ಳುವಂತೆ ಮನವರಿಕೆ ಮಾಡಿದ್ದಾರೆ ಎಂದು ಡಾ.ಗೌತಮ ಅರಳಿ ಅವರು ಹೇಳುತ್ತಾರೆ.

ದೂರವಾಣಿ ಕರೆಗಳು ಸಂಪರ್ಕಕ್ಕೆ ಸಿಗದಿದ್ದರೆ ಮೆಸೇಜ್‌ಗಳನ್ನು ಕಳಿಸುತ್ತಿದ್ದಾರೆ. ಈವರೆಗೆ 4,800 ಜನರಿಗೆ ಸಂದೇಶ ಕಳಿಸಿ ತಿಳಿವಳಿಕೆ ನೀಡಲು ಯತ್ನಿಸಿದ್ದಾರೆ. ಜಿಲ್ಲಾಡಳಿತವೇ ನೇರವಾಗಿ ಜನರನ್ನು ಸಂಪರ್ಕಿಸಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತಿರುವ ಕಾರಣ ಸರ್ಕಾರಿ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಲು ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT