ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ರಂಗ ಮಂದಿರದ ನವೀಕರಣ, ದುರಸ್ತಿಗೆ ₹ 50 ಲಕ್ಷ ಬಿಡುಗಡೆ

ಪ್ರಜಾವಾಣಿ ನಮ್ಮ ಜನ ನಮ್ಮ ಧ್ವನಿ ಅಂಕಣದ ಫಲಶೃತಿ
Last Updated 31 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೀದರ್‌: ‘ಗಬ್ಬು ನಾರುತ್ತಿರುವ ರಂಗ ಮಂದಿರ; ಸ್ವಚ್ಛತೆ ಕೊರತೆ’ ಶೀರ್ಷಿಕೆ ಅಡಿಯಲ್ಲಿ ಪ್ರಜಾವಾಣಿಯ ನಮ್ಮ ಜನ ನಮ್ಮ ಧ್ವನಿ ಅಂಕಣದಲ್ಲಿ ಪ್ರಕಟವಾದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದ ನವೀಕರಣ ಹಾಗೂ ದುರಸ್ತಿ ಕಾಮಗಾರಿಗೆ ₹ 50 ಲಕ್ಷ ಬಿಡುಗಡೆ ಮಾಡಿದೆ.

ರಂಗ ಮಂದಿರದ ನವೀಕರಣ ಹಾಗೂ ದುರಸ್ತಿ ಕಾಮಗಾರಿಗೆ ಅಮೃತ ಮಹೋತ್ಸವ ಯೋಜನೆ ಅಡಿ ಉಳಿತಾಯವಾಗುವ ಅನುದಾನದಲ್ಲಿ ₹ 50 ಲಕ್ಷ ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಕೋರಿದ್ದರು. ಅನುದಾನ ಬಿಡುಗಡೆ ಮಾಡಿ ಮಂಜೂರಾದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಸೂಚಿಸಿ ಮಾರ್ಚ್‌ 28ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್‌.ಗೀತಾಬಾಯಿ ಆದೇಶ ಹೊರಡಿಸಿದ್ದಾರೆ.

ರಂಗ ಮಂದಿರದ ಹೊರ ಗುತ್ತಿಗೆ ನೌಕರರ ಏಳು ತಿಂಗಳ ವೇತನವನ್ನೂ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ವಾರದ ಹಿಂದೆ ತಮ್ಮ ಕಚೇರಿಗೆ ಕಡತಗಳನ್ನು ತರಿಸಿಕೊಂಡು ಎಲ್ಲ ನೌಕರರ ವೇತನ ಬಿಡುಗಡೆ ಮಾಡಿದ್ದಾರೆ. ರಂಗ ಮಂದಿರ ನವೀಕರಣಕ್ಕೆ ಅಗತ್ಯವಿರುವ ಪ್ರಾಥಮಿಕ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.

ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಪ್ರಮುಖರು ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ವರದಿಯ ತುಣುಕುಗಳನ್ನು ಲಗತ್ತಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದ್ದರು. ರಂಗ ಮಂದಿರ ದುರಸ್ತಿ ಮಾಡದಿರುವ ಬಗ್ಗೆ ಆಕ್ರೋಶ ಸಹ ವ್ಯಕ್ತಪಡಿಸಿದ್ದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಭೇಟಿ ಮಾಡಿ ರಂಗ ಮಂದಿರದ ದುಃಸ್ಥಿತಿಯ ಮಾಹಿತಿ ನೀಡಿದ್ದರು. ಇಲಾಖೆ ನಿರ್ದೇಶಕರು ನೇರವಾಗಿ ಪ್ರಜಾವಾಣಿಗೆ ಕರೆ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗ ಮಂದಿರದ ನವೀಕರಣಕ್ಕೆ ₹ 50ಲಕ್ಷ ಬಿಡುಗಡೆ ಮಾಡಿರುವುದು ಸಂತಸದ ವಿಚಾರವಾಗಿದೆ. ಮೊದಲೇ ಆದೇಶವಾಗಿರುವುದರಿಂದ ದುರಸ್ತಿ ಕಾರ್ಯ ಶೀಘ್ರ ಆರಂಭಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮನವಿ ಮಾಡಿದ್ದಾರೆ.

‘ರಂಗ ಮಂದಿರ ದುರಸ್ತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಬಿಡುಗಡೆ ಮಾಡಿದೆ. ಜಿಲ್ಲಾಡಳಿತ ತಕ್ಷಣ ದುರಸ್ತಿ ಕಾರ್ಯವನ್ನು ಆರಂಭಿಸಬೇಕು. ರಂಗ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಲು ಅನುಕೂಲ ಮಾಡಿಕೊಡಬೇಕು’ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಒತ್ತಾಯಿಸಿದ್ದಾರೆ.

ಕನ್ನಡ ಭವನಕ್ಕೆ ₹ 50 ಲಕ್ಷ ಬಿಡುಗಡೆ
ಬೀದರ್‌ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮೂಲಕ ಜಿಲ್ಲಾಧಿಕಾರಿ ಖಾತೆಗೆ ಎರಡನೇ ಕಂತಿನ ₹ 50 ಲಕ್ಷ ಬಿಡುಗಡೆ ಮಾಡಲಾಗಿದೆ.

ಪ್ರತಿ ಹಂತದ ಕಾಮಗಾರಿಯ ಪೊಟೊಗಳು ಹಾಗೂ ಗುಣಮಟ್ಟದ ಬಗ್ಗೆ ಸರ್ಕಾರದ ಸಂಸ್ಥೆಯಿಂದ ಗುಣಮಟ್ಟ ಪ್ರಮಾಣಪತ್ರ ಪಡೆದು ಸಲ್ಲಿಸಬೇಕು. ಕಾಮಗಾರಿಯ ಪ್ರಗತಿ ಪರಿಶೀಲಿಸಿ ಪ್ರತಿ ತಿಂಗಳು ವರದಿ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸೂಚಿಸಿದ್ದಾರೆ.

ಕನ್ನಡ ಭವನ ನಿರ್ಮಾಣಕ್ಕೆ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ₹ 2 ಕೋಟಿ ಮಂಜೂರಾಗಿತ್ತು. ಪ್ರಾಧಿಕಾರದ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ನಂತರ ₹ 1 ಕೋಟಿ ಬಿಡುಗಡೆ ಮಾಡಿದರು. ಇನ್ನೊಂದು ಕೋಟಿ ರೂಪಾಯಿ ಕೊಡಲು ನಿರಾಕರಿಸಿದ್ದರು. ಸಂಘ ಸಂಸ್ಥೆಗಳ ಒತ್ತಡ ಹೆಚ್ಚಾದ ನಂತರ ಮತ್ತೆ ಹಣ ಕೊಡಲು ಒಪ್ಪಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT