ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ಭವ್ಯ ಮೆರವಣಿಗೆ

ಶ್ರೀ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವ: ಸಾವಿರಾರು ಜನ ಭಾಗಿ
Last Updated 24 ಸೆಪ್ಟೆಂಬರ್ 2022, 13:19 IST
ಅಕ್ಷರ ಗಾತ್ರ

ಬೀದರ್: ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ನಗರದಲ್ಲಿ ಶನಿವಾರ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಯಿತು.


ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ನೌಬಾದ್‍ನಿಂದ ಆರಂಭಗೊಂಡ ಮೆರವಣಿಗೆಯು ಪ್ರತಾಪನಗರ, ಶಿವನಗರ, ಕೇಂದ್ರ ಬಸ್ ನಿಲ್ದಾಣ, ಮಡಿವಾಳ ಮಾಚಿದೇವ ವೃತ್ತ, ಕನ್ನಡಾಂಬೆ ರೋಟರಿ ವೃತ್ತ, ಜಿಲ್ಲಾ ಅಸ್ಪತ್ರೆ ತಿರುವು, ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ, ಶಹಾಗಂಜ್ ಕಮಾನ್, ಗವಾನ್ ಚೌಕ್, ಚೌಬಾರಾ, ನಯಾ ಕಮಾನ್, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಹರಳಯ್ಯ ವೃತ್ತ, ಮೋಹನ್ ಮಾರ್ಕೆಟ್, ಕೆಇಬಿ ರಸ್ತೆ, ಶಿವನಗರ ಮಾರ್ಗವಾಗಿ ಪಾಪನಾಶ ಮಂದಿರ ಪರಿಸರಕ್ಕೆ ತಲುಪಿ ಮುಕ್ತಾಯಗೊಂಡಿತು.


ಮೆರವಣಿಗೆ ಮುಂಚೂಣಿಯಲ್ಲಿದ್ದ ತೆರೆದ ಕಾರ್‌ನಲ್ಲಿ ಶ್ರೀ ಹವಾ ಮಲ್ಲಿನಾಥ ಮಹಾರಾಜರು ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದುಕೊಂಡು ನಿಂತಿದ್ದರು. ಭಾರತ ಮಾತೆ, ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಡಾ. ಬಿ.ಆರ್. ಅಂಬೇಡ್ಕರ್, ಭಗತ್‍ಸಿಂಗ್ ಮೊದಲಾದ ಮಹಾ ಪುರುಷರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಬೃಹತ್ ಭಾವಚಿತ್ರಗಳನ್ನು ಇಡಲಾಗಿದ್ದ 69 ಅಲಂಕೃತ ವಾಹನಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಬ್ಯಾಂಡ್ ಬಾಜಾ, ಭಜನೆ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಮೆರವಣಿಗೆ ಉದ್ದಕ್ಕೂ ದೇಶ ಭಕ್ತಿ ಗೀತೆಗಳ ಸಂಗೀತದ ತಾಳಕ್ಕೆ ತಕ್ಕಂತೆ ಯುವಕರು, ಹಿರಿಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಬೋ ಭಾರತ ಮಾತಾ ಕೀ ಜೈ ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದವು. ದೇಶಾಭಿಮಾನ ಉಕ್ಕಿಸಿದ ಮೆರವಣಿಗೆಯಲ್ಲಿ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆ ನಂತರ ಪಾಪನಾಶ ಮಂದಿರದ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.
ಯುವಕರಲ್ಲಿ ದೇಶಾಭಿಮಾನ ಮೂಡಿಸಲು ಹಾಗೂ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಲು ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಹವಾ ಮಲ್ಲಿನಾಥ ಮಹಾರಾಜರು ತಿಳಿಸಿದರು.
ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟ ಹಾಗೂ ಹೋರಾಟಗಾರರ ಕುರಿತ ಪಾಠವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ಈ ಮೂಲಕ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಹೇಳಿದರು.
ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ, ಪ್ರಮುಖರಾದ ವೈಜಿನಾಥ ಝಳಕೆ, ಶರಣಪ್ಪ ಮಾಳಗೆ, ಮಂಜು ಮಾಳಗೆ, ದಿಲೀಪ್ ಪಾಟೀಲ, ಶಿವಕುಮಾರ, ನಾಗು ಜಾಬಶೆಟ್ಟಿ, ಆಶ್ವಿನ್, ಸಂಗಮೇಶ, ವಿಶ್ವ, ವಿಷ್ಣುಕಾಂತ, ಪ್ರಮೋದ್ ಗಾದಾ, ನಂದೇಶ್ ಪಾಟೀಲ, ನಾಗಶೆಟ್ಟಿ ಬೇಮಳಖೇಡ ಇದ್ದರು.
ಇದಕ್ಕೂ ಮುನ್ನ ಶ್ರೀ ಹವಾ ಮಲ್ಲಿನಾಥ ಮಹಾರಾಜರು ನೌಬಾದ್‍ನ ಶರಣಪ್ಪ ಮಾಳಗೆ ಅವರ ಜಮೀನಿನಲ್ಲಿ ಶ್ರೀ ಸತ್ಯ ಹನುಮಾನ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT