ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ನಗರದಲ್ಲಿ 40 ಜನರಿಗೆ ಕಚ್ಚಿದ ಹುಚ್ಚು ನಾಯಿ

ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲಾಡಳಿತ, ನಗರಸಭೆ; ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 22 ಫೆಬ್ರುವರಿ 2021, 5:50 IST
ಅಕ್ಷರ ಗಾತ್ರ

ಬೀದರ್: ನಗರದಲ್ಲಿ ಹುಚ್ಚು ನಾಯಿಯೊಂದು 24 ಗಂಟೆಗಳ ಅವಧಿಯಲ್ಲಿ ದಾರಿ ಹೋಕರ ಮೇಲೆ ದಾಳಿ ನಡೆಸಿ 40 ಜನರಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ರಕ್ಷಣೆಗೆ ಹೋದ 20 ಜನರ ಮೈಪರಚಿದೆ.

ನಗರಸಭೆಯ ಅಧಿಕಾರಿಗಳಿಗೆ ಸಾರ್ವಜನಿಕರು ಕರೆ ಮಾಡಿದರೂ ಫೋನ್‌ ಸ್ವೀಕರಿಸದ ಕಾರಣ ಆಕ್ರೋಶಗೊಂಡ ಕೆಲ ಯುವಕರು ಹುಚ್ಚು ನಾಯಿಯ ಬೆನ್ನಟ್ಟಿ ಬಡಿಗೆಗಳಿಂದ ಹೊಡೆದು ಸಾಯಿಸಿದ್ದಾರೆ.

ಓಲ್ಡ್‌ಸಿಟಿಯ ಗವಾನ್‌ ಚೌಕ್, ಮನಿಯಾರ್ ತಾಲೀಂ, ನಯಾ ಕಮಾನ್‌ ಹಾಗೂ ಹಾರೂರಗೇರಿಯಲ್ಲಿ ಬೆಳಗಿನ ಜಾವ ರಸ್ತೆಯಲ್ಲಿ ಕಸಗೂಡಿಸುತ್ತಿದ್ದ ಪೌರ ಕಾರ್ಮಿಕರು, ವಾಯು ವಿಹಾರಕ್ಕೆ ಹೊರಟ್ಟಿದ್ದ ವೃದ್ಧರು ಹಾಗೂ ಬಯಲು ಶೌಚಕ್ಕೆ ಹೊರಟಿದ್ದ ವ್ಯಕ್ತಿಗಳ ಮೇಲೆ ಎರಗಿ ಹಣೆ, ಗಲ್ಲ, ಗದ್ದ, ಕುತ್ತಿಗೆ ಹಾಗೂ ಕಿವಿಯನ್ನು ಬಲವಾಗಿ ಕಚ್ಚಿದೆ. ಕೆಲವರ ತೊಡೆ, ಕಾಲು ಹಾಗೂ ಕೈಗಳಿಗೆ ಮಾಂಸ ಕಿತ್ತು ಬರುವಂತೆ ಕಚ್ಚಿ ಗಾಯಗೊಳಿಸಿದೆ.

ಓಲ್ಡ್‌ಸಿಟಿಯಲ್ಲಿರುವ ನಾಯಿಗಳ ಹಿಂಡು ಹುಚ್ಚು ನಾಯಿ ಮೇಲೆ ಎರಗಿದಾಗ ಅದು ಪ್ರತಿಯಾಗಿ ಕಚ್ಚಿದೆ. ಹೀಗಾಗಿ ಹಿಂಡಿನಲ್ಲಿದ್ದ ನಾಯಿಗಳಿಗೂ ರೇಬಿಸ್‌ ಹರಡುವ ಭೀತಿ ಎದುರಾಗಿದೆ.

‘ನಗರದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳ ಹಾವಳಿಯನ್ನು ತಡೆಯುವಂತೆ ಅನೇಕ ಸಂಘಟನೆಗಳು ಹಾಗೂ ಸಾರ್ವಜನಿಕರು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಲೇ ಇದ್ದಾರೆ. ಅಧಿಕಾರಿಗಳು ಮಾತ್ರ ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಿಲ್ಲ’ ಎಂದು ಹಾರೂರಗೇರಿಯ ಮಹಿಳೆಯರು ದೂರಿದರು.

‘ಓಲ್ಡ್‌ಸಿಟಿಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಮನೆಯಿಂದ ಹೊರಗೆ ಬರುವುದು ಕಷ್ಟವಾಗಿದೆ. ಜಿಲ್ಲೆಯ ಅಧಿಕಾರಿಗಳಿಗೆ ಜನರ ಜೀವದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ನಾಯಿಗಳಿಗೆ ತೋರಿಸುವ ಕಾಳಜಿಯನ್ನು ಜನ ಸಾಮಾನ್ಯರ ರಕ್ಷಣೆಗೆ ತೋರುತ್ತಿಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ಮನ್ಸೂರ್ ಖಾದ್ರಿ ಅಸಮಾಧಾನ ವ್ಯಕ್ತಪಡಿಸಿದರು.

‘ಮನುಷ್ಯರ ಮೇಲೆ ಹುಲಿ ದಾಳಿ ಮಾಡಿದರೂ ಗುಂಡುಕ್ಕಿ ಕೊಲ್ಲಲಾಗುತ್ತಿದೆ. ನಾಯಿಗಳು ನಡುಬೀದಿಯಲ್ಲಿ ಮನುಷ್ಯರನ್ನು ಹರಿದು ತಿನ್ನುತ್ತಿದ್ದರೂ ಬೀದರ್ ಜಿಲ್ಲಾಡಳಿತ ಮೌನವಾಗಿದೆ. ನಗರಸಭೆಯ ಅಧಿಕಾರಿಗಳು ಬೇಜವಾಬ್ದಾರಿತನ ವಹಿಸಿದ್ದಾರೆ. ರಕ್ಷಣೆಯ ಹೊಣೆ ಹೊತ್ತವರು ಮೌನವಾಗಿರುವುದು ನಾಚಿಕೆಗೇಡು ವಿಷಯವಾಗಿದೆ’ ಎಂದು ಕಿಡಿಕಾರಿದರು.

‘ನಾಯಿಗಳ ಹಿಂಡು ಬೆಳಿಗ್ಗೆ ರಸ್ತೆ ಮೇಲೆ ಕಸಗೂಡಿಸುವ ಪೌರ ಕಾರ್ಮಿಕರ ಮೇಲೆಯೇ ದಾಳಿ ನಡೆಸಿವೆ. ನಗರಸಭೆಯ ಆಯುಕ್ತರಿಗೆ ನಾನೇ ಅನೇಕ ಬಾರಿ ಕರೆ ಮಾಡಿ ತಿಳಿಸಿದ್ದೇನೆ. ನಗರಸಭೆಯ ಅಧಿಕಾರಿಗಳಿಗೆ ಇದೆಲ್ಲ ಗೊತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದು ಯುವ ಮುಖಂಡ ಇರ್ಷಾದ್‌ ಪೈಲಾನ್‌ ಆರೋಪಿಸಿದರು.

6 ಸಾವಿರ ಬೀದಿ ನಾಯಿಗಳು

2018ರಲ್ಲಿ ನಗರ ವ್ಯಾಪ್ತಿಯಲ್ಲಿ 400 ಬೀದಿ ನಾಯಿಗಳಿದ್ದವು. ಈಗ ಅವುಗಳ ಸಂಖ್ಯೆ ಆರು ಸಾವಿರಕ್ಕೆ ಏರಿದೆ. ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.

ಎರಡು ವರ್ಷಗಳ ಹಿಂದೆ ಕೇರಳದಿಂದ ಆಗಮಿಸಿದ್ದ ಡಾಗ್‌ ಕ್ಯಾಚೆಸ್‌ ಟೀಂನ ಸದಸ್ಯರು 100 ನಾಯಿಗಳನ್ನು ಹಿಡಿದಿದ್ದರು. ಪಶು ಇಲಾಖೆಯ ವೈದ್ಯರು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಈ ಕಾರ್ಯಕ್ಕೆ ಅಧಿಕ ವೆಚ್ಚವಾದ ಕಾರಣ 100 ನಾಯಿಗಳಿಗೆ ಮಾತ್ರ ಚಿಕಿತ್ಸೆ ಮಾಡಿ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.

ಹೈದರಾಬಾದ್‌ ರಸ್ತೆಯಲ್ಲಿರುವ ಕರ್ನಾಟಕ ಕಾಲೇಜು ಸಮೀಪ, ನಯಾಕಮಾನ್, ಮನಿಯಾರ್‌ ತಾಲೀಂ, ಗವಾನ್‌ಚೌಕ್‌, ಮುಸ್ತೈದಪುರಾ, ಹಾರೂರಗೇರಿ, ಜಿಲ್ಲಾ ರಂಗಮಂದಿರ ರಸ್ತೆ, ಕೆಇಬಿ ರಸ್ತೆ, ಕುಂಬಾರವಾಡಾ ರಸ್ತೆಯಲ್ಲಿ ಈಗಲೂ ನಾಯಿಗಳು ಹಿಂಡುಗಳಲ್ಲಿ ಸಂಚರಿಸುತ್ತಿವೆ.

ಪ್ರಯಾಸಪಟ್ಟ ಆಸ್ಪತ್ರೆ ಸಿಬ್ಬಂದಿ

ಹುಚ್ಚು ನಾಯಿ ಕಚ್ಚಿದ ನಂತರ ಬ್ರಿಮ್ಸ್‌ ಆಸ್ಪತ್ರೆಗೆ ಒಂದೇ ಬಾರಿಗೆ 30ರಿಂದ 40 ಜನ ಬಂದ ಕಾರಣ ಏಕಕಾಲದಲ್ಲಿ ಎಲ್ಲರಿಗೂ ಚಿಕಿತ್ಸೆ ಕೊಡುವುದು ಕಷ್ಟ ಆಯಿತು. ತುರ್ತು ಚಿಕಿತ್ಸಾ ಘಟಕದಲ್ಲಿಯೇ ಚಿಕಿತ್ಸೆ ನೀಡಲಾಯಿತು.

ಜಾಗ ಸಾಲದಕ್ಕೆ ನೆಲದ ಮೇಲೆಯೇ ಕೂಡಿಸಿ ಚಿಕಿತ್ಸೆ ನೀಡಿ ವಾರ್ಡ್‌ಗಳಿಗೆ ಕಳಿಸಲಾಯಿತು.

ಆಸ್ಪತ್ರೆಯ ಸಿಬ್ಬಂದಿ, ರೋಗಿಗಳ ಸಂಬಂಧಿಗಳನ್ನು ಹೊರಗೆ ಕಳಿಸಲು ಪ್ರಯಾಸಪಡಬೇಕಾಯಿತು. ನಾಯಿ ಕಚ್ಚಿದ ಎಲ್ಲರಿಗೂ ರೋಗ ನಿರೋಧಕ ಚುಚ್ಚು ಮದ್ದು ನೀಡಿದ ನಂತರ ಮನೆಗೆ ಕಳಿಸಿಕೊಡಲಾಯಿತು.

ತೀವ್ರ ಸ್ವರೂಪದ ಗಾಯ ಇರುವವರಿಗೆ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಮರುದಿನ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT