ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲಿ ಎತ್ತುಗಳ ಮೆರವಣಿಗೆ

ಚಿಟಗುಪ್ಪ: ತಾಲ್ಲೂಕಿನ ಎಲ್ಲೆಡೆ ಕಾರಹುಣ್ಣಿಮೆ ಆಚರಣೆ
Last Updated 25 ಜೂನ್ 2021, 4:13 IST
ಅಕ್ಷರ ಗಾತ್ರ

ಚಿಟಗುಪ್ಪ: ರೈತರ ಮುಂಗಾರು ಹಬ್ಬ ಕಾರಹುಣ್ಣಿಮೆಯು ತಾಲ್ಲೂಕಿನಾದ್ಯಂತ ಗುರುವಾರ ಸಂಭ್ರಮದಿಂದ ನಡೆಯಿತು.

ಕೋವಿಡ್‌ ಲಾಕ್‌ಡೌನ್‌ದಿಂದ ಬೇಸತ್ತಿದ್ದ ರೈತರು ಹುಣ್ಣಿಮೆಯಂದು ಉತ್ಸಾಹದಿಂದ ಹೊಲ ಗದ್ದೆಗಳಿಗೆ ತೆರಳಿ ನಸುಕಿನ ಜಾವದಲ್ಲಿಯೇ ಎತ್ತು, ಗೋವುಗಳಿಗೆ ಸ್ನಾನ ಮಾಡಿಸಿಕೊಂಡು ಚಕ್ಕಡಿಯಲ್ಲಿ ಹಸಿ ಮೇವು ತುಂಬಿಕೊಂಡು ಊರಿನತ್ತ ಮರಳಿದರು. ಊರ ಹೊರಗಡೆ ಎತ್ತುಗಳಿಗೆ ಮತಾಟಿ, ಮಗಡಾ, ಹಣಿಕಟ್ಟು, ಗೊಂಡ್ಯಾ, ಕೊರಳ ಪಟ್ಟಿ, ಮಿಂಚು ಪಟ್ಟಿ ಸೇರಿದಂತೆ ವಿವಿಧ ವರ್ಣರಂಜಿತ ಹಗ್ಗದ ವಸ್ತುಗಳಿಂದ ಸಿಂಗಾರ ಮಾಡಿ ಬಾಜಾ-ಭಜಂತ್ರಿಯೊಂದಿಗೆ ಮೆರವಣಿಗೆ ಮಾಡಿಕೊಂಡು ಊರೊಳಗೆ ಪ್ರವೇಶ ಮಾಡಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ತಾಲ್ಲೂಕಿನ ಚಾಂಗಲೇರಾ ಗ್ರಾಮದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇಗುಲದಲ್ಲಿಯ ಗೋಶಾಲೆಯಲ್ಲಿ ಸಿಬ್ಬಂದಿ ಎಲ್ಲ ಆಕಳು, ಎತ್ತುಗಳಿಗೆ ನಸುಕಿನಲ್ಲಿ ಮೈ ತೊಳೆದು ವಿವಿಧ ಬಗೆಯ ಹಗ್ಗದ ವಸ್ತುಗಳಿಂದ ಸಿಂಗಾರ ಮಾಡಿದರು. ಬಳಿಕ ದೇಗುಲದ ಅರ್ಚಕ ರಾಮಯ್ಯ ಶಾಸ್ತ್ರಿ ಅವರಿಂದ ವಿಶೇಷ ಪೂಜೆ ನಡೆಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಬೆಳಕೇರಾದಲ್ಲಿ ರೈತರು ಎತ್ತು, ಹೋರಿ, ಆಕಳುಗಳಿಗೆ ಸಿಂಗರಿಸಿ, ಕೊರಳಿಗೆ ಹುರಿಗೆಜ್ಜೆ, ಕಿರುಗಂಟೆಗಳ ಸರ ಹಾಕಿ ಸಿಂಗರಿಸಿದ್ದರು. ಗಳೆ, ನೊಗ, ಗಾಡಿ, ಹಗ್ಗ, ಪಲಗ, ದಿಂಡು ಮಂತಾದ ಕೃಷಿ ಸಲಕರಣೆಗಳನ್ನು ಸಜ್ಜುಗೊಳಿಸಿ ಪೂಜೆ ಮಾಡಿದರು.

ನೈವೇದ್ಯಕ್ಕೆಂದು ಜೋಳ ಕುಟ್ಟಿ, ಜೋಳದಿಂದ ತಯಾರಿಸಿದ ಕಿಚಡಿ ಅಂಬಲಿಯನ್ನು ಎತ್ತುಗಳಿಗೆ ತಿನ್ನಿಸಿದರು. ಸಿಂಗರಿಸಿದ ಎತ್ತು, ಹೋರಿಗಳನ್ನು ಮಧ್ಯಾಹ್ನ ಊರಲೆಲ್ಲ ಓಡಿಸುವ ದೃಶ್ಯ ಕಂಡುಬಂತು.

ಕಾರಹುಣ್ಣಿಮೆ ಹಬ್ಬ ಎರಡು ದಿನ ನಡೆಯುತ್ತದೆ. ಶುದ್ಧ ಚತುರ್ದಶಿ ಕಾರಹಬ್ಬದ ಮೊದಲ ದಿನವಾಗಿದ್ದು, ಹುಣ್ಣಿಮೆ ಎರಡನೇ ದಿನವಾಗಿರುತ್ತದೆ. ಚತುರ್ದಶಿಗೆ ‘ಹೊನ್ನುಗ್ಗಿ’ ಎಂದು ಕರೆಯುತ್ತಾರೆ.

ಸಂಜೆ ತಾಲ್ಲೂಕಿನ ನಿರ್ಣಾ, ಮಂಗಲಗಿ, ಉಡಬಾಳ್‌, ಕುಡಂಬಲ್‌, ಬೆಮಳಖೇಡಾ, ಮನ್ನಾಎಖ್ಖೇಳಿ, ತಾಳಮಡಗಿ, ಬನ್ನಳ್ಳಿ ಗ್ರಾಮಗಳಲ್ಲಿ ಎತ್ತುಗಳನ್ನು ಹನುಮಾನ ದೇಗುಲದ ಎದುರಿಗೆ ತಂದು ಊರ ಅಗಸಿಯಲ್ಲಿ ಕರಿ ಹಾಯಿಸಲಾಯಿತು.

ಕೆಲವು ಕಡೆ ಓಟದ ಸ್ಪರ್ಧೆಯಲ್ಲಿ ಮುಂದೆ ಬಂದ ಎತ್ತು ಕರಿ ಹರಿದರೆ ಇನ್ನೂ ಕೆಲವೆಡೆ ಸಾಂಪ್ರದಾಯದಂತೆ ಹಿಂದಿನ ವರ್ಷದ ಎತ್ತುಗಳು ಕರಿ ಹರಿದವು. ಯಾವ ಬಣ್ಣದ ಎತ್ತು ಮುಂದೆ ಬರುತ್ತವೆಯೋ, ಆ ಬಣ್ಣದ ದವಸ ಧಾನ್ಯಗಳು ಮುಂಗಾರು ಬೆಳೆಯಲ್ಲಿ ಅಧಿಕ ಫಸಲು ಕೊಡುತ್ತವೆ ಎಂಬ ನಂಬಿಕೆ ರೈತರಲ್ಲಿದೆ. ಹೀಗಾಗಿ ಎತ್ತಿಗೆ ಬಣ್ಣ ಹಚ್ಚುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT