ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪೆಟ್‌ಗೆ ಮೂರು ಕಡೆ ಜಾಗ ಪರಿಶೀಲನೆ:

ಬರುವ ಶೈಕ್ಷಣಿಕ ವರ್ಷದಿಂದ ಸಿಪೆಟ್‌ ಪ್ರವೇಶ ಆರಂಭ
Last Updated 24 ಜನವರಿ 2022, 16:14 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಗೆ ಮಂಜೂರಾಗಿರುವ ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್ ಪೆಟ್ರೊ ಕೆಮಿಕಲ್ಸ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಾಜಿ (ಸಿಪೆಟ್) ಕಟ್ಟಡ ನಿರ್ಮಾಣಕ್ಕೆ ಜಿಲ್ಲೆಯ ಮೂರು ಕಡೆ ಜಾಗ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣದ ವರೆಗೂ ಕಾಯದೆ ಬರುವ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಹುಮನಾಬಾದ್ ರಸ್ತೆಯಲ್ಲಿನ ಹಾಲಹಳ್ಳಿ ಹತ್ತಿರದ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಕಟ್ಟಡದಲ್ಲಿ ತರಗತಿಗಳು ಆರಂಭವಾಗಲಿವೆ ಎಂದು ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಸಿಪೆಟ್‍ಗೆ ಕನಿಷ್ಠ 10 ಎಕರೆ ಜಮೀನು ಅಗತ್ಯವಿದೆ. ಬೀದರ್-ಔರಾದ್ ರಸ್ತೆಯ ಬಲ್ಲೂರ, ನಗರದ ಹೊರವಲಯದ ಮಾಮನಕೇರಿ ಬಳಿ ಹಾಗೂ ಹುಮನಾಬಾದ್ ರಸ್ತೆಯ ಹಾಲಹಳ್ಳಿ ಸಮೀಪ ಜಾಗ ಗುರುತಿಸಲಾಗಿದೆ. ಕೇಂದ್ರದ ಅಧಿಕಾರಿಗಳ ತಂಡ ಮೂರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಜಿಲ್ಲಾಡಳಿತದೊಂದಿಗೆ ಸಭೆಯನ್ನೂ ನಡೆಸಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ನೋಂದಣಿ ಮತ್ತು ಪರಿಹಾರ ಪಡೆಯುವಲ್ಲಿ ದೇಶದಲ್ಲಿ ಬೀದರ್ ಜಿಲ್ಲೆ ಮೊದಲ ಸ್ಥಾನದಲ್ಲಿದೆ.

ಐದು ವರ್ಷಗಳಲ್ಲಿ ಜಿಲ್ಲೆಯ ರೈತರಿಗೆ ₹ 450 ಕೋಟಿಗೂ ಅಧಿಕ ಬೆಳೆ ವಿಮೆ ಪರಿಹಾರ ದೊರಕಿದೆ. ಈ ವರ್ಷ ಅತಿವೃಷ್ಟಿಯಿಂದ ಹಾನಿಯಾದ 87 ಸಾವಿರ ರೈತರ ಖಾತೆಗೆ ₹ 19 ಕೋಟಿ ಪರಿಹಾರ ಜಮಾ ಆಗಿದೆ. ಇನ್ನೂ 37 ಸಾವಿರ ರೈತರಿಗೆ ಎರಡು ವಾರದಲ್ಲಿ ₹ 75 ಕೋಟಿ ಪರಿಹಾರ ಬರಲಿದೆ ಎಂದು ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಡಂಬಲ್‌ ಎಂಜಿನ್‌ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ರಾಜಶೇಖರ ಪಾಟೀಲ್ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ದೂರುತ್ತಿರುವುದು ಹಾಸ್ಯಾಸ್ಪದ ಎಂದರು.

ಕಾಂಗ್ರೆಸ್‌ ಪಕ್ಷದ ಎಂಜಿನ್‌ ಗುಜರಿಗೆ ಸೇರಿದೆ. ರಾಜ್ಯದ ಆ ಪಕ್ಷದ ಎಂಜಿನ್‌ನ ಒಂದು ಭಾಗ ಕನಕಪುರದಲ್ಲಿದ್ದರೆ, ಇನ್ನೊಂದು ಬೀದರ್‍ ನಲ್ಲಿದೆ. ಗೇರ್ ಬಾಕ್ಸ್ ಬಾದಾಮಿ ಹಾಗೂ ಮೈಸೂರಿನಲ್ಲಿ ಹಂಚಿ ಹೋಗಿವೆ. ಎಲ್ಲ ಭಾಗಗಳ ಜೋಡಣೆ ವೇಳೆಗೆ 2023ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸರ್ಕಾರ ₹ 1,500 ಕೋಟಿ ಅನುದಾನ ಒದಗಿಸಿದೆ. ₹ 800 ಕೋಟಿ ಖರ್ಚಾಗಿದೆ. ಆದರೆ ಖಂಡ್ರೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಸ್ವಾಭಿಮಾನಿ ಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಅದೊಂದು ಸುಳ್ಳುಯಾತ್ರೆ ಆಗಲಿದೆ ಎಂದರು.

ಹುಮನಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲರು ತಾಲ್ಲೂಕು ಅಧಿಕಾರಿಗಳಿಗೆ ಗದರಿಸಿ, ಬೆದರಿಕೆ ಹಾಕಿರುವುದು ಖಂಡನೀಯ. ಶಾಸಕರು ಆರೋಗ್ಯಕರ ರಾಜಕೀಯದಲ್ಲಿ ತೊಡಗುವುದು ಒಳ್ಳೆಯದು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT