ಮಂಗಳವಾರ, ಅಕ್ಟೋಬರ್ 27, 2020
28 °C
48 ಗಂಟೆಗಳ ಅವಧಿಯಲ್ಲಿ ಭಾರಿ ಮಳೆ ಸಾಧ್ಯತೆ

ಬೀದರ್: ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗುವ ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಬೀದರ್ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿಪತ್ತು ನಿರ್ವಹಣಾ ಸಮಿತಿಯ ತುರ್ತು ಸಭೆ ನಡೆಸಿದರು.

ಬೀದರ್, ಬಸವಕಲ್ಯಾಣ, ಔರಾದ್, ಭಾಲ್ಕಿ, ಹುಮನಾಬಾದ್, ಕಮಲನಗರ, ಚಿಟಗುಪ್ಪ ಮತ್ತು ಹುಲಸೂರಿನ ತಾಲ್ಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದವನ್ನೂ ಮಾಡಿದರು.

ಜಿಲ್ಲೆಯಲ್ಲಿ ಐದು ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಬೀಳುವ ಸಂಭವ ಇದೆ. ಗರಿಷ್ಠ ಉಷ್ಣಾಂಶ 24 ರಿಂದ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18 ರಿಂದ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪ್ರತಿ ಗಂಟೆಗೆ 3 ರಿಂದ 7 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎನ್ನುವ ಮಾಹಿತಿ ಇದೆ. ಕಾರಣ ಅಧಿಕಾರಿಗಳು ಎಚ್ಚರ ವಹಿಸಬೇಕು. ಪೌರಾಯುಕ್ತರು, ಮುಖ್ಯಾಧಿಕಾರಿಗಳು, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಸೇರಿ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಪರಿಸ್ಥಿತಿಯನ್ನು ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸತತ ಮಳೆಯಿಂದಾಗಿ ತುಂಬುವ ಜಿಲ್ಲೆಯಲ್ಲಿನ ಕೆರೆ ಕಟ್ಟೆಗಳು, ಡ್ಯಾಮ್‍ಗಳಿಂದ ನೀರು ಹೊರ ಬಿಡುವ ಮುನ್ನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಡ್ಯಾಮ್ ಸುತ್ತಮುತ್ತಲಿನ ಜನರಿಗೆ ಸೂಚನೆ ನೀಡಿದ ನಂತರವೇ ನೀರು ಬಿಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಪ್ರಯುಕ್ತ ಅಧಿಕಾರಿಗಳು 24 ಗಂಟೆಗಳ ಕಾಲ ಅಲರ್ಟ್ ಆಗಿರಬೇಕು. ಮೊಬೈಲ್ ಹಾಳಾಗಿದೆ ಎನ್ನುವುದು ಸೇರಿ ಯಾವುದೇ ನೆಪ ಹೇಳಬಾರದು. ತಕ್ಷಣ ದೂರವಾಣಿ ಕರೆಗಳನ್ನು ಸ್ವೀಕರಿಸಿ, ಸಮಸ್ಯೆಗೆ ಸ್ಪಂದಿಸಬೇಕು ಎಂದು ತಿಳಿಸಿದರು.

ತುರ್ತು ಸನ್ನಿವೇಶದ ಸಂದರ್ಭದಲ್ಲಿ ಸರ್ಕಾರಿ ಸಿಬ್ಬಂದಿ ಕೂಡ ಕಾಳಜಿ ವಹಿಸಿ ಕೆಲಸ ಮಾಡಬೇಕು. ಯಾರೂ ಅನವಶ್ಯಕವಾಗಿ ರಜೆ ಮೇಲೆ ತೆರಳಬಾರದು ಎಂದು ಹೇಳಿದರು.

ಅತಿವೃಷ್ಟಿಯಿಂದಾದ ಬೆಳೆ ಹಾನಿ, ಜೀವ ಹಾನಿ ಪ್ರಕರಣಗಳಿಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಬೇಕು. ಅತಿವೃಷ್ಟಿಯಿಂದಾಗಿ ಇದುವರೆಗೆ ಸಂಭವಿಸಿದ 60 ಜಾನುವಾರುಗಳ ಜೀವ ಹಾನಿ ಪ್ರಕರಣಗಳಲ್ಲಿ 52 ಪ್ರಕರಣಗಳಿಗೆ ರೂ. 9.39 ಲಕ್ಷ ಪರಿಹಾರ ನೀಡಲಾಗಿದೆ. ಬಾಕಿ 8 ಪ್ರಕರಣಗಳಿಗೂ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೌರಾಯುಕ್ತರಿಗೆ ಸೂಚನೆ: ಈ ಮೊದಲೇ ತಿಳಿಸಿದ್ದರೂ ಬೀದರ್ ನಗರದ ರಾಜಕಾಲುವೆಯ ಕೆಲವು ಕಡೆಗಳಲ್ಲಿ ಈವರೆಗೆ ಕಸ ತೆಗೆಯದ ಕಾರಣ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ನಗರದ ಎಲ್ಲ ಕಡೆಗಳಲ್ಲಿನ ಗಟಾರುಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಅಲ್ಲಿನ ಕಸ ಕಡ್ಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಬೀದರ್ ನಗರಸಭೆ ಆಯುಕ್ತರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುದ್ರೇಶ ಘಾಳಿ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್., ಬೀದರ್ ಹಾಗೂ ಬಸವಕಲ್ಯಾಣ ಉಪ ವಿಭಾಗಾಧಿಕಾರಿಗಳಾದ ಗರೀಮಾ ಪನ್ವಾರ್, ಭುವನೇಶ ಪಾಟೀಲ, ಬೀದರ್ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟಪ್ಪಗೋಳ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್., ತೋಟಗಾರಿಕೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಇದ್ದರು.

* * *

ಮನೆಯಿಂದ ಹೊರಗೆ ಬರಬೇಡಿ
ಬೀದರ್‌:
ಮುಂಬರುವ 48 ಗಂಟೆಗಳಲ್ಲಿ ಬೀದರ್‌, ಕಲಬುರ್ಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರತಿಯೊಬ್ಬರು ಮನೆಯಲ್ಲಿ ಉಳಿದುಕೊಳ್ಳಬೇಕು. ಜಾನುವಾರುಗಳನ್ನು ಹೊರಗೆ ಒಯ್ಯಬಾರದು. ಹೊಲ ಹಾಗೂ ತೋಟಗಳಿಗೆ ಹೋಗುವುದನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದು ಸಲಹೆ ನೀಡಿದೆ.

ಹೊಸೂರು ಬ್ಯಾರೇಜ್‌ನಿಂದ ನೀರು
ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ಹೊಸೂರ ಸಮೀಪ ಮಾಂಜ್ರಾ ನದಿಗೆ ನಿರ್ಮಿಸಿರುವ ಬ್ಯಾರೇಜ್‌ ತುಂಬಿದ್ದು ಮಂಗಳವಾರ ಮಧ್ಯಾಹ್ನ ಕ್ರಸ್ಟ್‌ ಗೇಟ್ ತೆರೆದು 3178 ಕ್ಯುಸೆಕ್‌ ನೀರು ಮಾಂಜ್ರಾ ನದಿಗೆ ಹರಿಯ ಬಿಡಲಾಗಿದೆ. ಬೀದರ್‌ ಜಿಲ್ಲೆಯ ಭಾಲ್ಕಿ, ಕಮಲನಗರ, ಔರಾದ್ ಹಾಗೂ ಬೀದರ್‌ ತಾಲ್ಲೂಕಿನ ನದಿ ದಂಡೆಗಳ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಮಾಂಜ್ರಾ ನದಿ ಪಾತ್ರದ ಗ್ರಾಮಗಳ ಜನ ಎಚ್ವರ ವಹಿಸುವಂತೆ ಎಲ್ಲ ಕಂದಾಯ ನಿರೀಕ್ಷಕರ ಮೂಲಕ ಮಾಹಿತಿ ಒದಗಿಸಲಾಗಿದೆ ಎಂದು ತಹಶೀಲ್ದಾರ್ ಎಂ.ಚಂದ್ರಶೇಖರ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು