ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಕ್ಟರ್‌ ಆಗುವ ಕನಸು ಬಿಚ್ಚಿಟ್ಟ ಕೆಸಿಇಟಿಯಲ್ಲಿ ಏಳನೇ ರ್‍ಯಾಂಕ್‌ ಪಡೆದ ಆದಿತ್ಯ

Published 15 ಜೂನ್ 2023, 23:30 IST
Last Updated 15 ಜೂನ್ 2023, 23:30 IST
ಅಕ್ಷರ ಗಾತ್ರ

ಶಶಿಕಾಂತ ಎಸ್‌. ಶೆಂಬೆಳ್ಳಿ

ಪ್ರಸಕ್ತ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಕೆಸಿಇಟಿ) ರಾಜ್ಯಕ್ಕೆ ಏಳನೇ ರ್‍ಯಾಂಕ್‌ ಗಳಿಸಿರುವ ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಆದಿತ್ಯ ನಿಟ್ಟೂರೆ ಅವರು ಡಾಕ್ಟರ್ ಆಗುವ ಕನಸು ಕಂಡಿದ್ದಾರೆ.

ಬೀದರ್‌: ‘ಬಾಲ್ಯದಿಂದಲೂ ನನಗೆ ಡಾಕ್ಟರ್‌ ಆಗಬೇಕೆನ್ನುವ ಕನಸಿದೆ. ಈಗ ಅದರ ಹತ್ತಿರಕ್ಕೆ ಬಂದಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಏನೇ ಕಷ್ಟ ಬರಲಿ, ಸವಾಲು ಎದುರಾಗಲಿ ನನ್ನ ಗುರಿ ತಲುಪುವವರೆಗೆ ವಿರಮಿಸುವುದಿಲ್ಲ’

ಪ್ರಸಕ್ತ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಕೆಸಿಇಟಿ) ರಾಜ್ಯಕ್ಕೆ ಏಳನೇ ರ್‍ಯಾಂಕ್‌ ಗಳಿಸಿರುವ ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಆದಿತ್ಯ ನಿಟ್ಟೂರೆ ಅವರ ಸ್ಪಷ್ಟ ನುಡಿಗಳಿವು.

ಆದಿತ್ಯ ಪಶು ವೈದ್ಯಕೀಯ ಹಾಗೂ ಬಿ.ಎಸ್ಸಿ ನರ್ಸಿಂಗ್‌ ವಿಭಾಗದಲ್ಲಿ ಏಳನೇ ರ್‍ಯಾಂಕ್‌ ಗಳಿಸಿ, ಸಾಧನೆ ಮಾಡಿದ್ದಾರೆ. ಈಗ ಅವರ ಮುಂದಿನ ಗುರಿ ವೈದ್ಯನಾಗುವುದು. ‘ವೈದ್ಯನಾದರೆ ನೂರಾರು ಜನರ ಜೀವ ಉಳಿಸಬಹುದು. ಜನರ ಸೇವೆಗೆ ಉತ್ತಮ ಅವಕಾಶ’ ಎನ್ನುವುದು ಅವರ ಬಲವಾದ ನಂಬಿಕೆ. ಈ ಕಾರಣಕ್ಕಾಗಿಯೇ ಅವರ ಗುರಿ ಅಚಲವಾಗಿದೆ.

ರ್‍ಯಾಂಕ್‌ ಗಳಿಸಿದ ವಿಷಯ ತಿಳಿದು ಸ್ನೇಹಿತರು, ಗೆಳೆಯರೊಂದಿಗೆ ಸಂಭ್ರಮದಲ್ಲಿದ್ದ ಆದಿತ್ಯ ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದರು. ಪರೀಕ್ಷೆಯ ಸಿದ್ಧತೆ, ಮುಂದಿನ ಗುರಿ ಬಗ್ಗೆ ಅವರ ಮನದಾಳ ಬಿಚ್ಚಿಟ್ಟರು.

‘ಮೊದಲ ದಿನದಿಂದಲೂ ಓದುವುದರಲ್ಲಿ ತಲ್ಲೀನನಾಗಿದ್ದೆ. ಅಂದಿನ ಪಾಠ ಅದೇ ದಿನ ಓದು ಮುಗಿಸುತ್ತಿದ್ದೆ. ನಿತ್ಯ 8ರಿಂದ 9 ಗಂಟೆ ಓದಿಗೆ ಮೀಸಲಿಡುತ್ತಿದ್ದೆ. ಕಾಲೇಜಿನಲ್ಲಿ ತರಗತಿಗಳು ಮುಗಿದ ನಂತರ ಬಿಡುವಿದ್ದಾಗಲೆಲ್ಲ ಓದುತ್ತಿದ್ದೆ. ಮನೆಗೆ ಹೋಗಿದ ನಂತರ ರಾತ್ರಿ 12 ಗಂಟೆಯ ವರೆಗೆ ಅಂದಿನ ಪಾಠಗಳನ್ನು ಮೆಲುಕು ಹಾಕಿ, ಮುಂದಿನ ಪಾಠಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೆ. ಏನೇ ಅನುಮಾನವಿದ್ದರೂ ಮರುದಿನ ತರಗತಿಯಲ್ಲಿ ಪ್ರಾಧ್ಯಾಪಕರಿಗೆ ಕೇಳಿ ಬಗೆಹರಿಸಿಕೊಳ್ಳಲು ಅನುಕೂಲವಾಗುತ್ತಿತ್ತು’ ಎಂದು ಆದಿತ್ಯ ಹೇಳಿದರು.

‘ನನ್ನ ತಂದೆ ದಿಲೀಪ್‌ ನಿಟ್ಟೂರೆ ಅವರು ಸಿವಿಲ್‌ ಎಂಜಿನಿಯರ್‌, ತಾಯಿ ದೀಪಿಕಾ ಗೃಹಿಣಿ. ನಾನು ಹಾಗೂ ನನಗೆ ಒಬ್ಬ ಕಿರಿಯ ಸಹೋದರ ಇದ್ದಾನೆ. ಪೋಷಕರು ನಮ್ಮ ಓದಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಶಾಹೀನ್‌ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಕೊಟ್ಟಿದ್ದಾರೆ. ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿ ವಾರ ಕಿರು ಪರೀಕ್ಷೆ ನಡೆಸಿ, ನಮ್ಮನ್ನೆಲ್ಲ ತಯಾರಿ ಮಾಡುತ್ತಿದ್ದರು. ಅದರಿಂದ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಬಹಳ ಸಹಾಯವಾಗಿದೆ. ಪಿಯುಸಿಯಲ್ಲಿ ಶೇ 93ರಷ್ಟು ಫಲಿತಾಂಶ ಬಂದಿತ್ತು. ಈಗ ಕೆಸಿಇಟಿಯಲ್ಲಿ ನನ್ನ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿರುವುದಕ್ಕೆ ಖುಷಿಯಾಗಿದೆ. ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಮಾಡಬೇಕೆಂಬ ಆಸೆ ಇದೆ’ ಎಂದು ಹೇಳಿದರು.

ಈ ಸಲವೂ ಉತ್ತಮ ಸಾಧನೆ:

ಕೆಸಿಇಟಿ ಪರೀಕ್ಷೆಯಲ್ಲಿ ಶಾಹೀನ್‌ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಈ ಸಲವೂ ಉತ್ತಮ ಸಾಧನೆ ಮಾಡಿದ್ದಾರೆ. ಪಶು ವೈದ್ಯಕೀಯ ವಿಭಾಗದಲ್ಲಿ ಕಾಲೇಜಿನ ಓವೆಸ್ 34ನೇ ರ್‍ಯಾಂಕ್‌, ನಿಹಾಲ್ ಆಲಂಗೆ 43ನೇ ರ್‍ಯಾಂಕ್‌, ಅಭಿಷೇಕಗೆ 58ನೇ ರ್‍ಯಾಂಕ್‌ , ಆದರ್ಶ 61ನೇ ರ್‍ಯಾಂಕ್‌ ಹಾಗೂ ಅಮೋಘ 82ನೇ ರ್‍ಯಾಂಕ್‌ ಗಳಿಸಿದ್ದಾರೆ.

6 ವಿದ್ಯಾರ್ಥಿಗಳು 100 ರ ಒಳಗೆ, 30 ವಿದ್ಯಾರ್ಥಿಗಳು 500 ರ ಒಳಗೆ ಹಾಗೂ 50 ವಿದ್ಯಾರ್ಥಿಗಳು 1,000 ದೊಳಗೆ ರ್‍ಯಾಂಕ್‌ ಗಳಿಸಿದ್ದಾರೆ. ‘ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಶಿಕ್ಷಣದ ಫಲವಾಗಿ ಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ವರ್ಷವೂ ನಿರೀಕ್ಷೆಯಂತೆ ಫಲಿತಾಂಶ ಬಂದಿರುವುದಕ್ಕೆ ಖುಷಿಯಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT