ಗುರುವಾರ , ಜೂನ್ 24, 2021
29 °C
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್ ಎಚ್ಚರಿಕೆ

ರಸಗೊಬ್ಬರ ಅಧಿಕ ಬೆಲೆಗೆ ಮಾರಿದರೆ ಕ್ರಮ: ನಿರ್ದೇಶಕಿ ತಾರಾಮಣಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಸಗೊಬ್ಬರ ಅಧಿಕ ಬೆಲೆಗೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಎಚ್ಚರಿಸಿದರು.

ಮುಂಗಾರು ಹಂಗಾಮು ಪ್ರಯುಕ್ತ ನಗರದ ಕೃಷಿ ಇಲಾಖೆ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಹಿರಿಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಏಪ್ರಿಲ್‍ನಲ್ಲಿ ರಸಗೊಬ್ಬರ ದರ ಏರಿಕೆಯಾಗಿದೆ. ಆದರೆ, ಮಾರ್ಚ್‌ವರೆಗೆ ಹೊಂದಿರುವ ದಾಸ್ತಾನನ್ನು ಪರಿಷ್ಕೃತ ದರದ ಬದಲು ಹಳೆಯ ದರದಲ್ಲಿಯೇ ಮಾರಾಟ ಮಾಡಬೇಕು ಎಂದರು.

ರೈತರು ಚೀಲದ ಮೇಲೆ ಗರಿಷ್ಠ ಮಾರಾಟದ ದರ ನೋಡಿಯೇ ರಸಗೊಬ್ಬರ ಖರೀದಿಸಬೇಕು. ಒಂದು ವೇಳೆ ಯಾವುದೇ ರಸಗೊಬ್ಬರ ಮಾರಾಟಗಾರರು ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚು ದರ ಪಡೆದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ದೂರು ಸಲ್ಲಿಸಬೇಕು ಎಂದು ಹೇಳಿದರು.

ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪಾಯಿಂಟ್ ಆಫ್ ಸೇಲ್ ಮೂಲಕ ಹಾಗೂ ಹಳೆಯ ದರದಲ್ಲಿಯೇ ಹಳೆಯ ದಾಸ್ತಾನು ಆದ್ಯತೆ ಮೇರೆಗೆ ಮಾರಾಟ ಮಾಡಬೇಕು. ಮಾರಾಟ ಮಳಿಗೆಯಲ್ಲಿ ದರ ಪಟ್ಟಿ ಹಾಗೂ ದಾಸ್ತಾನು ಪ್ರದರ್ಶಿಸಬೇಕು. ನಗದು ರಹಿತ ವ್ಯವಹಾರ ಮಾಡಬೇಕು ಎಂದರು.

ಬಿತ್ತನೆ ಬೀಜ, ರಸಗೊಬ್ಬರ ಅಥವಾ ಕೀಟನಾಶಕಗಳು ಕಳಪೆ ಎಂದು ಕಂಡುಬಂದಲ್ಲಿ ಗ್ರಾಹಕರ ವೇದಿಕೆಯಲ್ಲಿ ಮೊಕದ್ದಮೆ ದಾಖಲಿಸಲು ರಶೀದಿ ಹಾಜರುಪಡಿಸಬೇಕಾಗುತ್ತದೆ. ಆದ್ದರಿಂದ ಕೃಷಿ ಪರಿಕರ ಖರೀದಿಸು ವುವಾಗ ಕಡ್ಡಾಯವಾಗಿ ರಶೀದಿ ಪಡೆಯಬೇಕು ಎಂದು ಹೇಳಿದರು.

ರೈತರು ಫ್ರೂಟ್ಸ್ ಪೋರ್ಟಲ್‍ನಲ್ಲಿ ತಾವು ಹೊಂದಿರುವ ಎಲ್ಲ ಸರ್ವೇ ನಂಬರ್‌ಗಳನ್ನು ನೋಂದಾಯಿಸಬೇಕು. ಇದ್ಕಕಾಗಿ ಹತ್ತಿರದ ನಾಡ ತಹಶೀಲ್ದಾರ್ ಕಚೇರಿ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಕೆಎಂಎಫ್, ಪಿಡಿಎಸ್ ಕಚೇರಿ ಅಥವಾ ಸಹಕಾರ ಸಂಘಗಳ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ರೈತ ಸಂಪರ್ಕ ಕೇಂದ್ರದಲ್ಲಿ ಲಘು ಪೋಷಕಾಂಶ, ಸಾವಯವ ಗೊಬ್ಬರ, ಸಸ್ಯ ಸಂರಕ್ಷಣ ಔಷಧಿ, ಸ್ಪ್ರೇಯರ್ ಮೊದಲಾದ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು ಎಂದು ಹೇಳಿದರು.

ಬೀಜ ವಿತರಣೆ ಸೇರಿ ಮುಂಗಾರು ಪೂರ್ವ ನಸಿದ್ಧತೆ, ಕೋವಿಡ್ ಕಾರಣ ಮುಂಜಾಗ್ರತೆ, ಸೋಯಾಅವರೆ, ತೊಗರಿ, ಹೆಸರು, ಉದ್ದು, ಹೈಬ್ರಿಡ್ ಜೋಳ, ಮೊಕ್ಕೆ ಜೋಳ ಇತರ ಬೆಳೆಗಳ ತಾಂತ್ರಿಕತೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಕೃಷಿ ಇಲಾಖೆ ಅಧಿಕಾರಿ, ಕೃಷಿ ವಿಜ್ಞಾನಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು