ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನಗಳ ಬೆಲೆ ಏರಿಳಿತ: ಆತಂಕದಲ್ಲಿ ರೈತ

ಸ್ಥಳೀಯ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ದೊರೆಯದ ಯೋಗ್ಯ ಬೆಲೆ; ಸಣ್ಣ ರೈತರಿಗೆ ಸಾಗಣೆ ವೆಚ್ಚವೇ ಅಧಿಕ
Last Updated 20 ಜೂನ್ 2021, 12:34 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ನಿಯಂತ್ರಣಕ್ಕೆ ಜಾರಿಗೊಳಿಸಲಾದ ಲಾಕ್‌ಡೌನ್‌ ಹಾಗೂ ಕೇಂದ್ರದ ಕೃಷಿ ನೀತಿಯಿಂದ ಕೃಷಿ ಮಾರುಕಟ್ಟೆ ವ್ಯವಹಾರದಲ್ಲಿ ಏರುಪೇರಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯುತ್ತಿಲ್ಲ. ರೈತರಿಗೆ ದೂರದ ನಗರಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸಾಗಣೆ ಸಮಸ್ಯೆಯಿಂದ ಜಿಲ್ಲೆಯ ವಿವಿಧ ಎಪಿಎಂಸಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿದೆ.

ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಒಂದು ವಾರದ ಅವಧಿಯಲ್ಲಿ ತೊಗರಿ ಹಾಗೂ ಕಡಲೆ ಬೆಲೆ ಸಾಕಷ್ಟು ಏರಿಳಿತ ಕಂಡಿದೆ.

ತೊಗರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹500 ರಿಂದ ₹1,000ಕ್ಕೆ ಕಡಿಮೆಯಾಗಿದೆ. ₹7 ಸಾವಿರ ತಲುಪಿದ್ದ ತೊಗರಿ ಬೆಲೆ ಬುಧವಾರ ₹6,500 ಇತ್ತು. ಗುರುವಾರ ₹6 ಸಾವಿರ, ಶುಕ್ರವಾರ ₹6,521 ಇತ್ತು. ಪ್ರತಿ ಕ್ವಿಂಟಲ್‌ಗೆ 5,300 ಇದ್ದ ಕಡಲೆ ಬೆಲೆ ₹ 5 ಸಾವಿರಕ್ಕೆ ಇಳಿದಿದೆ. ತೊಗರಿಗೆ ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ನಷ್ಟ ಅನುಭವಿಸುವಂತಾಗಿದೆ.

ಆರ್ಥಿಕ ಸಂಕಷ್ಟದಲ್ಲಿದ್ದ ರೈತರು ತಿಂಗಳ ಹಿಂದೆಯೇ ತೊಗರಿ ಹಾಗೂ ಕಡಲೆ ಮಾರಿದ್ದಾರೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದವರು ಕೊನೆ ಕ್ಷಣದಲ್ಲಿ ಬೇಳೆ ಕಾಳು ಮಾರಾಟ ಮಾಡುತ್ತಿದ್ದಾರೆ. ಬೀದರ್‌ಗೆ ನಿತ್ಯ ಸರಾಸರಿ 2,500 ತೊಗರಿ ಮೂಟೆಗಳು ಬರುತ್ತಿವೆ. ಕೋವಿಡ್ ಕಾರಣ ವ್ಯಾಪಾರಸ್ಥರು ರೈತರಿಂದ ಒಂದು ದಿನ ತೊಗರಿ, ಇನ್ನೊಂದು ದಿನ ಕಡಲೆ ಖರೀದಿಸುತ್ತಿದ್ದಾರೆ.

‘ಕೇಂದ್ರ ಸರ್ಕಾರ ಬೇಳೆ ಕಾಳುಗಳ ಆಮದಿಗೆ ಅವಕಾಶ ಕೊಟ್ಟಿದೆ. ರೆಸ್ಟೋರೆಂಟ್, ಹೋಟೆಲ್‌, ಶಾಲಾ ಕಾಲೇಜುಗಳಲ್ಲಿನ ಕ್ಯಾಂಟೀನ್, ಮೆಸ್‌, ವಿದ್ಯಾರ್ಥಿ ವಸತಿನಿಲಯಗಳು ಬಂದ್‌ ಇವೆ. ಮದುವೆ ಸಮಾರಂಭಗಳು ಕಡಿಮೆಯಾಗಿವೆ. ಬಿಸಿಯೂಟಕ್ಕೆ ಬೇಳೆ ಕಾಳು ಟೆಂಡರ್‌ ಕರೆಯಲಾಗುತ್ತಿತ್ತು. ಕೋವಿಡ್‌ ಕಾರಣ ಟೆಂಡರ್‌ ಸಹ ಕರೆದಿಲ್ಲ. ಬೇಡಿಕೆ ಕಡಿಮೆಯಾಗಿ ಬೇಳೆಕಾಳುಗಳ ಬೆಲೆ ಕುಸಿದಿದೆ’ ಎಂದು ಬೇಳೆಕಾಳು ವ್ಯಾಪಾರಸ್ಥರ ಸಂಘದ ಮುಖಂಡ ಬಸವರಾಜ ಧನ್ನೂರ್‌ ಹೇಳುತ್ತಾರೆ.

‘ಬುಧವಾರ ಬೀದರ್ ಎಪಿಎಂಸಿಗೆ 4 ಸಾವಿರ ಚೀಲ ತೊಗರಿ ಬಂದಿದೆ. ಗುರುವಾರ ಬೆಲೆ ಇನ್ನಷ್ಟು ಕುಸಿಯಿತು. ರೈತರಿಗೆ ಅಂದು ಪರವಾಗಿಲ್ಲ ಎನ್ನುವ ಬೆಲೆಯೂ ಸಿಗಲಿಲ್ಲ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಹಣ ಅಗತ್ಯವಿರುವ ಕಾರಣ ರೈತರು ಕಡಿಮೆ ಬೆಲೆಯಲ್ಲೇ ವ್ಯಾಪಾರಸ್ಥರಿಗೆ ತೊಗರಿ ಮಾರಾಟ ಮಾಡಿದರು.

‘ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕುತ್ತಿಲ್ಲ. ಹೀಗಾಗಿ ರೈತರು ಕಷ್ಟ ಅನುಭವಿಸಬೇಕಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಹೇಳುತ್ತಾರೆ.

ಕಳೆಗುಂದಿದ ಔರಾದ್ ಎಪಿಎಂಸಿ ಮಾರುಕಟ್ಟೆ

ಔರಾದ್: ಲಾಕ್‌ಡೌನ್‌ನಿಂದ ಎರಡು ತಿಂಗಳಿನಿಂದ ಇಲ್ಲಿ ಆವಕ ಬಾರದೆ ಮಾರುಕಟ್ಟೆ ಕಳೆಗುಂದಿದೆ. ಲಾಕ್‌ಡೌನ್ ವೇಳೆ ರೈತರಿಗೆ ತಮ್ಮ ಉತ್ಪನ್ನ ಮಾರುಕಟ್ಟೆಗೆ ತರಲು ಅವಕಾಶ ನೀಡಿದರೂ ಇತ್ತ ಯಾರೂ ಸುಳಿಯುತ್ತಿಲ್ಲ.

‘ಕೊರೊನಾ ಸೋಂಕಿನ ಭಯ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದ‌ ಕಾರಣ ರೈತರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಒಂದು ಕ್ವಿಂಟಲ್ ಸಹ ಆವಕ ಆಗಿಲ್ಲ’ ಎನ್ನುತ್ತಾರೆ ಔರಾದ್ ಎಪಿಎಂಸಿ ಕಾರ್ಯದರ್ಶಿ ಮರಿಬಸಪ್ಪ.

‘ನಮ್ಮಲ್ಲಿ ಪ್ರತಿ ವರ್ಷ ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೆ ಆವಕ ಇರುತ್ತದೆ. ಬೇಸಿಗೆಯಲ್ಲಿ ವ್ಯಾಪಾರ ಭರಾಟೆ ಇರುವುದಿಲ್ಲ. ಆದರೂ ಸರ್ಕಾರ ಹೊಸ ಕೃಷಿ ನೀತಿ ತಂದ ಬಳಿಕ ವರ್ಷದ ಎಲ್ಲ ತಿಂಗಳಲ್ಲಿ ಆವಕ ಕಡಿಮೆಯಾಗಿದೆ. ರೈತರು ತಮ್ಮ ಉತ್ಪನ್ನ ಎಲ್ಲಿ ಬೇಕಾದರೂ ಮಾರಲು ಅವಕಾಶ ದೊರೆತ ಕಾರಣ ಎಪಿಎಂಸಿ ಮಾರುಕಟ್ಟೆಯಲ್ಲಿ‌ ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ’ ಎಂದು ಹೇಳುತ್ತಾರೆ.

‘ಕಳೆದ ವರ್ಷದಿಂದ ವ್ಯಾಪಾರ ಕುಸಿದಿದೆ. ಅನಧಿಕೃತ ವ್ಯಾಪಾರಿಗಳು ರೈತರ ಬಳಿ ಹೋಗಿ ಉತ್ಪನ್ನ ಖರೀದಿಸುತ್ತಿದ್ದಾರೆ. ಹೀಗಾಗಿ ಎಪಿಎಂಸಿ ‌ಖರೀದಿದಾರರೂ ಆತಂಕದಲ್ಲಿದ್ದಾರೆ’ ಎನ್ನುತ್ತಾರೆ ವ್ಯಾಪಾರಿ ಮುಖಂಡ ಪ್ರಕಾಶ ಘುಳೆ.

ಹುಮನಾಬಾದ್ ತಾಲ್ಲೂಕಿನಲ್ಲಿ ರೈತರು ಮುಂಗಾರು ಹಂಗಾಮಿನ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ಸಣ್ಣ ರೈತರು ಕೃಷಿ ಉತ್ಪನ್ನಗಳನ್ನು ಕಮಿಷನ್‌ ಏಜೆಂಟರ ಬಳಿ ಮಾರಾಟಕ್ಕೆ ಇಟ್ಟು ಹೋಗಿದ್ದಾರೆ. ಹೆಚ್ಚು ಸರಕು ಇದ್ದರೆ ಮಾತ್ರ ಬೇರೆ ಪಟ್ಟಣಗಳಿಗೆ ಸಾಗಿಸಲಾಗುತ್ತದೆ. ಕಡಿಮೆ ಸರಕು ಇರುವ ಕಾರಣ ಹಣಕ್ಕಾಗಿ 20 ದಿನಗಳ ವರೆಗೆ ಕಾಯಬೇಕಾಗಿದೆ.

‘ಸರ್ಕಾರ ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಹೇಳುತ್ತದೆ. ಆದರೆ, ಸಣ್ಣ ರೈತರಿಗೆ ಸಾಗಣೆ ವೆಚ್ಚವೇ ಅಧಿಕವಾಗುತ್ತಿದೆ. ತೊಗರಿ ಮಾರಾಟ ಮಾಡಲು ಕಮಿಷನ್‌ ಏಜೆಂಟರನ್ನೇ ಅವಲಂಬಿಸಬೇಕಾಗಿದೆ. ಅವರು ಕೊಟ್ಟಾಗ ಹಣ ಪಡೆಯಬೇಕಾಗುತ್ತದೆ’ ಎಂದು ರೈತ ಶಿವಕುಮಾರ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದರು.

ಮುಂಗಾರು ಬಿತ್ತನೆ ಆರಂಭದ ತರಾತುರಿಯಲ್ಲಿರುವ ರೈತರು ಈಗ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವುದರಿಂದ ಚಿಟಗುಪ್ಪ ಎಪಿಎಂಸಿ ಪ್ರಾಂಗಣ ಭಣಗುಡುತ್ತಿದೆ. ಲಾಕ್‌ಡೌನ್‌ ಕಾರಣ ಮಧ್ಯಾಹ್ನದ ವರೆಗೂ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದರೂ ರೈತರು ಎಪಿಎಂಸಿಗಳಿಗೆ ಬರುತ್ತಿಲ್ಲ.

ಕೃಷಿ ಉತ್ಪನ್ನಕ್ಕೆ ಕಡಿಮೆ ಬೆಲೆ

ಬಸವಕಲ್ಯಾಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನ ಯಾವಾಗಲೂ ₹ 50 ರಿಂದ ₹100 ರಷ್ಟು ಕಡಿಮೆ ಬೆಲೆ ಸಿಗುತ್ತದೆ. ಸಮೀಪದಲ್ಲಿಯೇ ಇರುವ ಕಲಬುರ್ಗಿ, ಲಾತೂರ್‌ನ ದೊಡ್ಡ ಮಾರುಕಟ್ಟೆಗಳಿಗೆ ಹೆಚ್ಚು ಜನ ಹೋಗುತ್ತಾರೆ.

ಸಣ್ಣ ರೈತರು, ಬೇಳೆಕಾಳು ಪ್ರಮಾಣ ಕಡಿಮೆ ಇದ್ದಾಗ, ಅನಿವಾರ್ಯ ಇದ್ದಾಗ ಬಸವಕಲ್ಯಾಣದ ಮಾರುಕಟ್ಟೆಗೆ ಬರುತ್ತಿದ್ದಾರೆ. ಹೀಗಾಗಿ ಎಪಿಎಂಸಿಯಲ್ಲಿ ಆವಕ ಕಡಿಮೆಯಾಗಿದೆ.

ಗುರುವಾರ ಎಪಿಎಂಸಿಯಲ್ಲಿ ತೊಗರಿಗೆ ₹6,100 ಬೆಲೆ ಇತ್ತು. ಲಾತೂರ್‌ನಲ್ಲಿ ಇದಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿಯಾಗಿದೆ. ದೊಡ್ಡ ವ್ಯಾಪಾರಸ್ಥರು ಊರೂರಿಗೆ ಲಾರಿ ಕಳುಹಿಸಿ ಉತ್ಪನ್ನಗಳನ್ನು ಕೊಂಡೊಯ್ಯುತ್ತಿದ್ದಾರೆ. ರೈತರ ಮನೆ ಬಾಗಿಲಿಗೆ ಹಣ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.

‘ಬಸವಕಲ್ಯಾಣದಲ್ಲಿ ಹಳ್ಳಿಗಳಿಂದ ಉತ್ಪನ್ನ ತರುವುದಕ್ಕೆ ವಾಹನಗಳ ವ್ಯವಸ್ಥೆ ಇಲ್ಲ. ಮನೆಯಲ್ಲಿ ಕಾರ್ಯಕ್ರಮವಿದ್ದಾಗ ಹಾಗೂ ಹಣದ ತೀರಾ ಅಗತ್ಯವಿದ್ದಾಗ ಮಾತ್ರ ರೈತರು ಕೃಷಿ ಉತ್ಪನ್ನಗಳನ್ನು ಇಲ್ಲಿಗೆ ತರುತ್ತಾರೆ. ಆಹಾರಧಾನ್ಯ ನೂರಾರು ಕ್ವಿಂಟಲ್‌ ಇದ್ದರೆ ಲಾತೂರ್‌ಗೆ ಒಯ್ಯುತ್ತಾರೆ’ ಎಂದು ಮುಡಬಿ ರೈತ ಧೇನುಸಿಂಗ್ ಹೇಳುತ್ತಾರೆ.

ಭಾಲ್ಕಿ ಮಾರುಕಟ್ಟೆಗೆ ಹೆಚ್ಚಿದ ಆವಕ

ಲಾಕ್‌ಡೌನ್‌ ಭಾಗಶಃ ಸಡಿಲಿಕೆ ಮಾಡಿರುವುದರಿಂದ ಭಾಲ್ಕಿ ಎಪಿಎಂಸಿ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ದವಸ ಧಾನ್ಯ ಬರುತ್ತಿದೆ. ಕಡಲೆ, ತೊಗರಿ ಸೇರಿ ನಿತ್ಯ ಸುಮಾರು 3 ಸಾವಿರ ಮೂಟೆಗಳು ಬರುತ್ತಿವೆ. ರೈತರಿಗೆ ಧಾನ್ಯಗಳನ್ನು ಮಾರುಕಟ್ಟೆಗೆ ತರುವಲ್ಲಿ ಎಲ್ಲಿಯೂ ಅನಾನುಕೂಲ ಆಗದಂತೆ ವ್ಯವಸ್ಥೆ ಮಾಡಲಾಗಿದೆ.

‘ಮಹಾರಾಷ್ಟ್ರದ ಉದಗಿರ ಮಾರುಕಟ್ಟೆಗಿಂತ ಹೆಚ್ಚಿನ ಧಾನ್ಯ ಭಾಲ್ಕಿ ಎಪಿಎಂಸಿಗೆ ಬರುತ್ತಿದೆ’ ಎಂದು ಅಡತ ವ್ಯಾಪಾರಿಗಳ ಸಂಘದ ಅಧ್ಯಕ್ಷ ದತ್ತು ಹೊನ್ನಾ ಹೇಳುತ್ತಾರೆ.

‘ಲಾಕ್‌ಡೌನ್ ಘೋಷಿಸಿರುವುದರಿಂದ ತೊಗರಿ ಹಾಗೂ ಕಡಲೆ ಬೆಲೆ ಪ್ರತಿ ಕ್ವಿಂಟಲ್‌ಗೆ ₹800 ಇಳಿಕೆಯಾಗಿದೆ. ಇದರಿಂದ ವಹಿವಾಟು ಕುಸಿದಿದೆ. ರೈತರು ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಮಾರಾಟ ಮಾಡುವ ಮೂಲಕ ಸದ್ಯದ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ’ ಎಂದು ರೈತ ಮುಖಂಡ ನಾಗನಾಥ ಬಿರಾದಾರ ಹೇಳುತ್ತಾರೆ.

ಪೂರಕ ಮಾಹಿತಿ: ಮಾಣಿಕ ಭುರೆ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ವೀರೇಶ ಮಠಪತಿ, ಗುಂಡು ಅತಿವಾಳೆ, ಗಿರಿರಾಜ್‌ ವಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT