ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳ

ಮಹಾರಾಷ್ಟ್ರದಲ್ಲಿ ಕೋವಿಡ್‌ ಹಾವಳಿ: ನಾಗಪುರದಲ್ಲಿ ಲಾಕ್‌ಡೌನ್‌, ಲಾತೂರ್‌ನಲ್ಲಿ ರಾತ್ರಿ ಕರ್ಫ್ಯೂ
Last Updated 13 ಮಾರ್ಚ್ 2021, 4:25 IST
ಅಕ್ಷರ ಗಾತ್ರ

ಬೀದರ್: ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಲೇ ಇವೆ. ನಾಗಪುರ ಜಿಲ್ಲೆಯನ್ನು ಒಂದು ವಾರ ಲಾಕ್‌ಡೌನ್‌ ಮಾಡಲಾಗಿದೆ. ಬೀದರ್‌ ಜಿಲ್ಲೆಗೆ ಹೊಂದಿಕೊಂಡಿರುವ ಲಾತೂರ್‌ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಮುಂದುವರಿದಿದೆ. ನೆರೆ ರಾಜ್ಯದಲ್ಲಿ ಏರಿಕೆಯಾಗುತ್ತಿರುವ ಕೋವಿಡ್‌ ಪ್ರಕರಣಗಳಿಂದಾಗಿ ಜಿಲ್ಲೆಯ ಗಡಿ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಿದೆ.

ಕಳೆದ ವರ್ಷ ಲಾಕ್‌ಡೌನ್‌ ಅವಧಿಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಪ್ರತಿಯೊಂದು ಮಾರ್ಗದಲ್ಲೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರವಾಸಿಗರ ತಪಾಸಣೆ ನಡೆಸಿದ್ದರು. ಈ ಬಾರಿ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ, ಕಮಲನಗರ ಹಾಗೂ ಔರಾದ್‌ ತಾಲ್ಲೂಕಿನ ವನಮಾರಪಳ್ಳಿಯಲ್ಲಿ ಮಾತ್ರ ಚೆಕ್‌ಪೋಸ್ಟ್‌ ತೆರೆಯಲಾಗಿದೆ.

ಮಹಾರಾಷ್ಟ್ರದ ನಾಗಪುರ, ಪುಣೆ, ಸೊಲ್ಲಾಪುರ ಹಾಗೂ ಲಾತೂರ್‌ನಿಂದ ವೈದ್ಯಕೀಯ ವರದಿ ಇಲ್ಲದೆ ಬರುತ್ತಿರುವವರು ಬೇರೆ ಬೇರೆ ಮಾರ್ಗಗಳ ಮೂಲಕ ಜಿಲ್ಲೆಯೊಳಗೆ ಪ್ರವೇಶ ಮಾಡುತ್ತಿದ್ದಾರೆ. ಕಮಲನಗರ ತಾಲ್ಲೂಕಿನ ಚಿಕಲಿ(ಯು) ಹಾಗೂ ಹುಲಸೂರು ಮಾರ್ಗವಾಗಿ ನಿತ್ಯ ನೂರಾರು ಜನ ಜಿಲ್ಲೆಗೆ ಬರುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

‘ಊರು ಕೊಳ್ಳೆಹೊಡೆದ ಮೇಲೆ ಅಗಸಿ ಬಾಗಿಲು ಹಾಕಿದಂತೆ’ ಸೋಂಕಿತರೆಲ್ಲ ಮನೆ ಸೇರಿದ ಮೇಲೆ ಗಡಿಯಲ್ಲಿ ಮತ್ತೆ ಚೆಕ್‌ಪೋಸ್ಟ್‌ ಆರಂಭಿಸಿದರೆ ಪ್ರಯೋಜನ ಇಲ್ಲ. ಗಡಿಯಲ್ಲಿನ ಎಲ್ಲ ಮಾರ್ಗಗಳಲ್ಲೂ ತಪಾಸಣೆ ನಡೆಸಬೇಕು’ ಎಂದು ಹುಲಸೂರಿನ ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.

ಲಾತೂರ್‌ ನಗರದ ಎಂಐಡಿಸಿ ಹಾಸ್ಟೆಲ್‌ನಲ್ಲಿ ಒಂದೇ ದಿನ 44 ವಿದ್ಯಾರ್ಥಿಗಳ ತಪಾಸಣೆ ನಡೆಸಿದಾಗ 19 ಪಾಸಿಟಿವ್‌ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಲಾತೂರ್‌ ಜಿಲ್ಲಾಡಳಿತ ತಪಾಸಣೆಯನ್ನು ತೀವ್ರಗೊಳಿಸಿದೆ. ಈಗಾಗಲೇ ನಿತ್ಯ ರಾತ್ರಿ 11 ಗಂಟೆಯಿಂದ ಬೆಳಗಿನ 5 ಗಂಟೆ ವರೆಗೆ ಕರ್ಫ್ಯೂ ಇದೆ. ಜಾತ್ರೆ, ಸಂತೆ ಹಾಗೂ ಸಮಾವೇಶಗಳನ್ನು ನಿಷೇಧಿಸಲಾಗಿದೆ. ಮದುವೆ ಮುಂಜಿಗಳಿಗೆ ಕೆಲವೊಂದು ನಿರ್ಬಂಧ ಹೇರಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಲಾಕ್‌ಡೌನ್‌ ಮಾಡುವುದು ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಮುಂದುವರಿದಿದೆ. ಗಡಿಯಲ್ಲಿ ಪ್ರಯಾಣಿಕರ ತಪಾಸಣೆ ನಡೆಸಿದ ನಂತರವೇ ಒಳಗೆ ಪ್ರವೇಶ ನೀಡಲಾಗುತ್ತಿದೆ. ಚಿಕಲಿಯಲ್ಲೂ ಚೆಕ್‌ಪೋಸ್ಟ್‌ ಆರಂಭಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಜಿಲ್ಲಾಡಳಿತ ಅದಕ್ಕೆ ಕ್ಯಾರೇ ಅನ್ನುತ್ತಿಲ್ಲ.

ಒಂದು ವಾರದ ಅವಧಿಯಲ್ಲೇ ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ.

ಸಾಮಾನ್ಯವಾಗಿ ಗಡಿ ಆಚೆಯಿಂದ ಗಡಿ ಈಚೆಗೆ ನಿತ್ಯ 700ರಿಂದ 900 ಜನ ಬರುತ್ತಿದ್ದರು.

ನಾಗಪುರ ಜಿಲ್ಲೆಯಲ್ಲಿ ಒಂದು ವಾರ ಲಾಕ್‌ಡೌನ್‌ ಘೋಷಣೆ ಮಾಡಿದ ನಂತರ ಒಂದೇ ದಿನ 1,547 ಜನ ಜಿಲ್ಲೆಗೆ ಬಂದಿದ್ದಾರೆ.

‘ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ ವರೆಗೆ 1,547 ಜನರ ತಪಾಸಣೆ ನಡೆಸಲಾಗಿದೆ. ವೈದ್ಯಕೀಯ ವರದಿ ಇಲ್ಲದ 170 ಜನರನ್ನು ಮರಳಿ ಕಳಿಸಲಾಗಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT