ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ನಿರ್ಧಾರ: ಈಶ್ವರ ಬಿ. ಖಂಡ್ರೆ

ಶಿಕ್ಷಣ, ಆರೋಗ್ಯಕ್ಕೆ ಮೊದಲ ಆದ್ಯತೆ; ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ
Published 18 ಜೂನ್ 2024, 15:26 IST
Last Updated 18 ಜೂನ್ 2024, 15:26 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಖಾಲಿ ಹುದ್ದೆಗಳನ್ನು ತುಂಬಲು ಸರ್ಕಾರ ನಿರ್ಧರಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ಶಿಕ್ಷಣ ಸೇರಿದಂತೆ ಯಾವ್ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಅದರ ವಿವರಗಳನ್ನು ಕೊಡಬೇಕು. 72 ಏಕೋಪಾಧ್ಯಾಯ ಶಾಲೆಗಳು ಜಿಲ್ಲೆಯಲ್ಲಿವೆ. ಒಂದರಿಂದ ಹತ್ತನೇ ತರಗತಿವರೆಗೆ ಕಲಿಕೆ ಇರುವ ಮಾದರಿ ಶಾಲೆಗಳನ್ನು ರೂಪಿಸಲು ಯೋಜನೆ ರೂಪಿಸಬೇಕು. ವಿದ್ಯಾರ್ಥಿಗಳು ಹೆಚ್ಚಿರುವ ಕಡೆ ಸ್ಥಳ ಗುರುತಿಸಬೇಕು ಎಂದು ಸೂಚಿಸಿದರು.

ಯಾರ್‍ಯಾರು ಕೆಡಿಪಿ ಸಭೆಗೆ ಗೈರು ಹಾಜರಾಗಿದ್ದಾರೆ. ಅಂತಹ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಕೊಟ್ಟು ಕ್ರಮ ಜರುಗಿಸಲಾಗುವುದು.
ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಯಾವ ಸರ್ಕಾರಿ ಶಾಲೆಗೆ ಸ್ವಂತ ಜಮೀನು ಇಲ್ಲವೋ ಅಂತಹ ಕಡೆಗಳಲ್ಲಿ ಖಾಸಗಿ ಜಮೀನು ಖರೀದಿಸಬಹುದು. ಅದಕ್ಕೆ ಕೆಕೆಆರ್‌ಡಿಬಿಯಿಂದ ಅನುದಾನ ಒದಗಿಸಲಾಗುವುದು. 1ರಿಂದ 3 ಎಕರೆ ಜಮೀನು ಇದ್ದರೆ ಸೂಕ್ತ ಎಂದು ಹೇಳಿದರು.

ಜಿಲ್ಲೆಯಲ್ಲಿ ಎಲ್ಲೆಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿವೆಯೋ ಅವುಗಳನ್ನು ತುರ್ತಾಗಿ ನೆಲಸಮಗೊಳಿಸಬೇಕು. ಯಾವುದೇ ಕಾರಣಕ್ಕೂ ಶಿಥಿಲ ಕಟ್ಟಡದಲ್ಲಿ ಮಕ್ಕಳನ್ನು ಓದಿಸಬಾರದು. ಒಂದುವೇಳೆ ನಿರ್ಲಕ್ಷಿಸಿ ಏನಾದರೂ ಅನಾಹುತ ಸಂಭವಿಸಿದರೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕರನ್ನು ಹೊಣೆಗಾರರಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯಾವ ಗ್ರಾಮಗಳಿಂದ ಮಕ್ಕಳು ನಗರಕ್ಕೆ ಶಾಲೆಗಳಿಗೆ ಬರುತ್ತಾರೆ ಅಂತಹ ಕಡೆಗಳಲ್ಲಿ ಬಸ್‌ ಸೌಕರ್ಯ ಕಲ್ಪಿಸಬೇಕು. ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಅದು ಅನುಷ್ಠಾನಕ್ಕೆ ಬರಬೇಕು. ಯಾವುದೇ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಬಾರದು ಎಂದು ಕೆಕೆಆರ್‌ಟಿಸಿ ಬೀದರ್‌ ವಿಭಾಗದ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಸಂಸದ ಸಾಗರ್‌ ಖಂಡ್ರೆ, ಶಾಸಕರಾದ ಶರಣು ಸಲಗರ್‌, ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ಭೀಮರಾವ ಪಾಟೀಲ, ಡಾ. ಚಂದ್ರಶೇಖರ ಪಾಟೀಲ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್‌, ಆರೋಗ್ಯ ಇಲಾಖೆಯ ಡಿ. ರಂದೀಪ್‌, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಹಾಜರಿದ್ದರು.

‘ಎಸ್‌ಎಸ್‌ಎಲ್‌ಸಿಯಲ್ಲಿ ಶೇ 80 ಫಲಿತಾಂಶ ಬರಲಿ’

‘ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 80ರಷ್ಟು ಬರುವಂತೆ ಗುರಿ ಹಾಕಿಕೊಳ್ಳಬೇಕು. ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಬೇಕು. ಈ ವರ್ಷ ಜಿಲ್ಲೆ 32ನೇ ಸ್ಥಾನದಲ್ಲಿದೆ. ಮುಂದಿನ ವರ್ಷ ಆ ಸ್ಥಾನ 20 ರೊಳಗೆ ಬರಬೇಕು. ಅದಕ್ಕಾಗಿ ಶಿಕ್ಷಣ ಇಲಾಖೆಯ ಎಲ್ಲರೂ ಶ್ರಮಿಸಬೇಕು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಇದಕ್ಕೂ ಮುನ್ನ ಸಭೆಗೆ ಮಾಹಿತಿ ನೀಡಿದ ಡಿಡಿಪಿಐ ಸಲೀಂ ಪಾಶಾ ಇಡೀ ರಾಜ್ಯದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 20ರಷ್ಟು ಕುಸಿದಿದೆ. ಬೀದರ್‌ ಜಿಲ್ಲೆಯಲ್ಲಿ ಶೆ 18ರಷ್ಟು ಕಡಿಮೆಯಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಪರೀಕ್ಷೆ ನಡೆಸಿದ್ದರಿಂದ ನೈಜ ಫಲಿತಾಂಶ ಬಂದಿದೆ ಎಂದು ವಿವರಿಸಿದರು.

‘ಜನಪ್ರತಿನಿಧಿಗಳು ಕರೆ ಮಾಡಿದರೆ ಸ್ಪಂದಿಸಿ’

‘ಏನಾದರೂ ಮಾಹಿತಿ ಸಂಬಂಧ ಜನಪ್ರತಿನಿಧಿಗಳು ಕರೆ ಮಾಡಿದರೆ ಸರಿಯಾಗಿ ಸ್ಪಂದಿಸಬೇಕು’ ಎಂದು ಅಧಿಕಾರಿಗಳಿಗೆ ಸಚಿವ ಈಶ್ವರ ಬಿ. ಖಂಡ್ರೆ ತಾಕೀತು ಮಾಡಿದರು. ‘ಸಾರ್ವಜನಿಕರ ಸಮಸ್ಯೆಗಳು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕರೆ ಮಾಡಿದರೆ ಅಧಿಕಾರಿಗಳು ತೆಗೆಯುವುದಿಲ್ಲ. ಕನಿಷ್ಠ ಮೆಸೇಜ್‌ ನೋಡಿಯಾದರೂ ಎರಡ್ಮೂರು ದಿನಗಳ ನಂತರವೂ ಪ್ರತಿಕ್ರಿಯಿಸುವುದಿಲ್ಲ. ನಾವು ವಿರೋಧ ಪಕ್ಷದಲ್ಲಿದ್ದೇವೆ. ನಮ್ಮ ನೋವು ನೋಡಿಕೊಂಡಿದ್ದೇವೆ. ನೀವು ಹಿಂದೆ ಇಲ್ಲಿ ಕುಳಿತಿದ್ದವರು’ ಎಂದು ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಗೋಳು ತೋಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ ಮೇಲಿನಂತೆ ಹೇಳಿದರು. ‘ನಿಮ್ಮ ನೋವು ನಮಗೆ ಅರ್ಥವಾಗಿದೆ’ ಎಂದರು.

ಗಮನ ಸೆಳೆದ ಸಾಗರ ಖಂಡ್ರೆ

ಸಾಗರ್‌ ಖಂಡ್ರೆ

ಸಾಗರ್‌ ಖಂಡ್ರೆ

ಸಂಸದರಾಗಿ ಆಯ್ಕೆಯಾದ ನಂತರ ಮೊದಲ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಾಗರ್‌ ಖಂಡ್ರೆಯವರು ಚರ್ಚೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಮೊದಲ ಸಭೆಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ‘ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ್‌ ಹೋಬಳಿಯಲ್ಲಿ ಭಾರಿ ಹಾನಿಯಾಗಿದೆ. ನಾನು ಇತ್ತೀಚೆಗೆ ಅಲ್ಲಿಗೆ ಭೇಟಿ ಕೊಟ್ಟಾಗ ಹಾನಿಯ ವಿವರ ಬೇರೆಯದ್ದೇ ಹೇಳಿದ್ದೀರಿ. ಇಲ್ಲಿ ಬೇರೆ ಮಾಹಿತಿ ಕೊಡುತ್ತಿದ್ದೀರಲ್ಲ’ ಎಂದು ಸಾಗರ್‌ ಖಂಡ್ರೆಯವರು ಜಂಟಿ ಕೃಷಿ ನಿರ್ದೇಶಕರ ಡಾ. ರತೇಂದ್ರನಾಥ ಸುಗೂರ್‌ ಅವರನ್ನು ಪ್ರಶ್ನಿಸಿದರು. ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲೂ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT