ಬುಧವಾರ, ಮೇ 12, 2021
17 °C
ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪ

ಬಿಜೆಪಿಯಿಂದ ಹಿಂದುಳಿದವರ ವಿರೋಧಿ ನಡೆ: ಎಚ್‌.ಡಿ. ಕುಮಾರಸ್ವಾಮಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿ ನೀತಿ ಅನುಸರಿಸುತ್ತಿದೆ. ಆದ್ದರಿಂದ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ವರ್ಷಾ ಸಭಾಂಗಣದಲ್ಲಿ ಉಪ ಚುನಾವಣೆ ಅಂಗವಾಗಿ ಶನಿವಾರ ಜೆಡಿಎಸ್‌ ಆಯೋಜಿಸಿದ್ದ ಗೊಂಡ ಕುರುಬ ಸಮಾಜ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರ ನೆಲದಲ್ಲಿ ಎಲ್ಲರೂ ಸಮಾನರು ಎಂಬ ಅವರ ತತ್ವದ ಪಾಲನೆಗಾಗಿಯೇ ಮುಸ್ಲಿಂ ಅಭ್ಯರ್ಥಿಯನ್ನು ಜೆಡಿಎಸ್‌ನಿಂದ ಕಣಕ್ಕೆ ಇಳಿಸಿದ್ದೇವೆ. ಈ ಕ್ಷೇತ್ರ ಗೆಲ್ಲಲೇಬೇಕು ಎಂಬ ಹಟದಿಂದ ಮಸ್ಕಿ, ಬೆಳಗಾವಿಯಲ್ಲಿ ಕಣದಲ್ಲಿ ಉಳಿದಿಲ್ಲ. ನಾನು ಕೆಲ ದಿನ ಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದು ಎಲ್ಲ ಸಮುದಾಯಗಳ ಜನರು ಸಹಕಾರ ನೀಡಬೇಕು’ ಎಂದು ಕೋರಿದರು.

‘ಸಾಲಮನ್ನಾ ಮಾಡಿದ್ದರಿಂದ ಎಲ್ಲ ವರ್ಗಗಳ ರೈತರಿಗೆ ಅನುಕೂಲ ಆಗಿದೆ. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಅವುಗಳನ್ನು ಈ ಸರ್ಕಾರ ಸ್ಥಗಿತಗೊಳಿಸಿದೆ’ ಎಂದು ಆರೋಪಿಸಿದರು.

ಶಾಸಕ ಬಂಡೆಪ್ಪ ಕಾಶೆಂಪೂರ್‌ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ಯೊಬ್ಬರು ಠಿಕಾಣಿ ಹೂಡಿ ನಿಮ್ಮ ಮನೆ ಬಾಗಿಲಿಗೆ ಬರುತ್ತಿರುವ ಕಾರಣ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ನಿಮ್ಮ ಕರ್ತವ್ಯವಾಗಿದೆ’ ಎಂದು ಹೇಳಿದರು.

ಗೊಂಡ ಕುರುಬ ಸಮಾಜದ ಮುಖಂಡ ನಾರಾಯಣ ರಾಂಪುರೆ ಮಾತನಾಡಿ, ‘ಕುರುಬರು ಬರೀ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಅವರನ್ನೇ ಸಮಾಜದ ನಾಯಕರೆಂದು ತಿಳಿಯದೆ ಜೆಡಿಎಸ್‌ನಲ್ಲಿ ಮಹತ್ವದ ಸ್ಥಾನದಲ್ಲಿರುವ ಬಂಡೆಪ್ಪ ಕಾಶೆಂಪೂರ್‌ ಅವರ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಸಮಾಜ ಬಾಂಧವರು ಗೊಂಡ ಜಾತಿ ಪ್ರಮಾಣಪತ್ರ ದೊರೆಯದೆ ಸಂಕಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸಲು ಮುಖಂಡರು ಯತ್ನಿಸಬೇಕಾಗಿದೆ. ಇವ ನಮ್ಮವ ಎಂಬ ತತ್ವ ಸಾರಿದ ನೆಲ ಇದಾಗಿದ್ದು ಮುಸ್ಲಿಂ ಅಭ್ಯರ್ಥಿ ಇದ್ದರೂ ಎಲ್ಲರೂ ಮತದಾನಗೈದು ಗೆಲ್ಲಿಸಬೇಕು. ಸುಳ್ಳು ಹೇಳುವ ಕೇಂದ್ರದ ಮೋದಿ ಹಾಗೂ ರಾಜ್ಯದ ಯಡಿಯೂರಪ್ಪ ಸರ್ಕಾರ ಕಿತ್ತೊಗೆಯಬೇಕಾಗಿದೆ’ ಎಂದರು.

ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಗೊಂಡ ಕುರುಬ ಸಮಾಜದ ಮುಖಂಡ ರಾದ ಬಂಡೆಪ್ಪ ಮೇತ್ರೆ, ತಾನಾಜಿ ತೋರಣೆಕರ ಮಾತನಾಡಿದರು.

ತಾ.ಪಂ ಮಾಜಿ ಅಧ್ಯಕ್ಷ ತುಕಾರಾಮ ಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ಪಾಟೀಲ, ಪಕ್ಷದ ಪ್ರವಕ್ತಾ ಆಕಾಶ ಖಂಡಾಳೆ, ಗೋವಿಂದ ಶಿಂಧೆ, ಬೊಮ್ಮಗೊಂಡ ಚಿಟ್ಟಾವಾಡಿ, ಮಹೇಶ, ಶಿವಕುಮಾರ ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು