ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಿಯಂಬರ್: ಆಡಳಿತ ವರ್ಗದಿಂದಲೇ ಕನ್ನಡ ವಿರೋಧಿ ನಿಲುವು

ಸಮ್ಮೇಳನದ ಸಮಾರೋಪ ನುಡಿಯಲ್ಲಿ ಸಾಹಿತಿ ಬಸವರಾಜ ಬಲ್ಲೂರ ಅಸಮಾಧಾನ
Last Updated 9 ಫೆಬ್ರುವರಿ 2023, 4:42 IST
ಅಕ್ಷರ ಗಾತ್ರ

ಅಲಿಯಂಬರ್ (ಬೀದರ್): ‘ಜಾತಿಕೇಂದ್ರಿತ ದೇವಾಲಯ, ಮಠಮಾನ್ಯಗಳಿಗೆ ಉದಾರ ದೇಣಿಗೆ ನೀಡುವ ನಮ್ಮ ಸರ್ಕಾರಗಳು ಕನ್ನಡ ಭವನಕ್ಕೆ ಹಣ ನೀಡಲು ಹಿಂದೇಟು ಹಾಕವುದು ಕೂಡ ಕನ್ನಡ ಹಾಗೂ ಕನ್ನಡಿಗರ ವಿರೋಧಿ ನಿಲುವಿಗೆ ಸಮಾನವಾಗಿದೆ’ ಎಂದು ಸಾಹಿತಿ ಬಸವರಾಜ ಬಲ್ಲೂರ ಅಸಮಾಧಾನ ಹೊರ ಹಾಕಿದರು.

ಬೀದರ್ ತಾಲ್ಲೂಕಿನ ಅಲಿಯಂಬರ್‌ದಲ್ಲಿ ನಡೆದ ಬೀದರ್‌ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು.

‘ಸಮೃದ್ಧ ಭಾಷೆ ನಾಗರಿಕತೆಯ ಅಭಿವೃದ್ಧಿಗೆ ಪೂರಕ. ಭಾಷೆ ಗಟ್ಟಿಯಾಗಿ ನೆಲೆಗೊಂಡರೆ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಬಲವಾಗಿ ಬೇರೂರುತ್ತದೆ. ಜಾತಿಯೇ ಪ್ರಧಾನವಾದರೆ ವಿಘಟನೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇಂದು ಪ್ರಜಾಪ್ರಭುತ್ವದ ನೆಲೆಯಲ್ಲಿ ಸೇವೆ ಒದಗಿಸುವ ಧಾರ್ಮಿಕ ಸಂಸ್ಥೆಗಳು ನಮ್ಮ ಮಧ್ಯೆ ಉಳಿದಿಲ್ಲ’ ಎಂದರು.

‘ಪ್ರಜಾಪ್ರಭುತ್ವವನ್ನು ಮತ ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಜನ ಸಾಮಾನ್ಯರ ತೆರಿಗೆ ಹಣ ಪೋಲಾಗಬಾರದು. ಧಾರ್ಮಿಕ ಸಂಸ್ಥೆಗಳು ಹಣಕ್ಕಾಗಿ ಜೊಲ್ಲು ಸುರಿಸಬಾರದು. ಹೀಗೆ ಮಾಡುವುದರಿಂದ ಸಮಾಜವನ್ನೇ ಅಪಾಯದ ಸ್ಥಿತಿಗೆ ತಂದು ನಿಲ್ಲಿಸುವಂತೆ ಆಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಆಳುವ ವರ್ಗ ಕನ್ನಡ ಶ್ರೇಷ್ಠತೆ ಅರಿಯಲಿ:

’ಆಳುವ ವರ್ಗದವರು ಇಂದಿಗೂ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಆಳವಾಗಿ ಅರ್ಥ ಮಾಡಿಕೊಂಡಿಲ್ಲ. ಜನ ಜಾಗೃತಿಗೊಳಿಸುವ ನಿಟ್ಟಿಯಲ್ಲಿ ಇಂತಹ ಸಮ್ಮೇಳನಗಳು ಗ್ರಾಮ ಮಟ್ಟದಲ್ಲೂ ನಡೆಯಬೇಕು‘ ಎಂದು ಹೇಳಿದರು.

‘ಕನ್ನಡ ಪ್ರಪಂಚದಲ್ಲಿಯೇ 4ನೇ ಪ್ರಾಚೀನ ಭಾಷೆಯಾಗಿದೆ. ಕನ್ನಡಕ್ಕೆ 2000 ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಭಾಷಾ ಸಿರಿವಂತಿಕೆಯಿಂದಾಗಿಯೇ ಕನ್ನಡಕ್ಕೆ ಇದುವರೆಗೂ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ವಿನೋಭಾ ಭಾವೆ ಅವರು ಕನ್ನಡವನ್ನು 'ವಿಶ್ವ ಲಿಪಿಗಳ ರಾಣಿ' ಎಂದು ಹೊಗಳಿದ್ದಾರೆ. ಕವಿರಾಜಮಾರ್ಗದಲ್ಲಿ 'ಕಾವೇರಿಯಿಂದ ಗೋದಾವರಿವರೆಗಿರ್ಪ' ಕನ್ನಡ ಹರಡಿಕೊಂಡಿತ್ತು ಉಲ್ಲೇಖಿಸಲಾಗಿದೆ. ಆಗ ಇಂಗ್ಲಿಷ್‌ ತೊಟ್ಟಿಲಲ್ಲೂ ಇರಲಿಲ್ಲ. ಹಿಂದಿ ಜನ್ಮ ತಾಳಿರಲಿಲ್ಲ’ ಎಂದು ತಿಳಿಸಿದರು.

‘ಅಕ್ಷರ ಜ್ಞಾನ ಇಲ್ಲದಿದ್ದರೂ ಹಾಡುಗಳನ್ನು ರಚಿಸುವ ಸಾಮರ್ಥ್ಯ ಕನ್ನಡಿಗರಿಗೆ ಇದೆ. ಈ ಮಾತನ್ನು ಸಾವಿರ ವರ್ಷಗಳ ಹಿಂದೆಯೇ ಅಮೋಘವರ್ಶನ ಕವಿರಾಜಮಾರ್ಗದಲ್ಲಿಯೇ ಉಲ್ಲೇಖಿಸಲಾಗಿದೆ. ಕುವೆಂಪು ಪಡೆದಿರುವ ಸಾಹಿತ್ಯ ಪ್ರಶಸ್ತಿಗಳನ್ನು ಬೇರಾವ ಭಾರತೀಯ ಸಾಹಿತಿಯೂ ಪಡೆದಿಲ್ಲ‘ ಎಂದು ವಿವರಿಸಿದರು.

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ:

ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಲ್ಲ, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ಇವತ್ತಿಗೂ ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ. ಇಂಗ್ಲಿಷ್‌ ಅನ್ನು ರೋಮ್'ನಲ್ಲಿ, ಹಿಂದಿಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ಸ್ವಂತ ಲಿಪಿ, ಸ್ವಂತ ಸಂಖ್ಯೆ , ಸ್ವಂತ ವ್ಯಾಕರಣ, ದೊಡ್ಡ ವರ್ಣಮಾಲೆ, ಉಚ್ಚರಿಸುವುದನ್ನೇ ಬರೆಯುವ ಬರೆದಿದ್ದನ್ನೇ ಉಚ್ಚರಿಸುವ ಸಾವಿರಾರು ವರ್ಷಗಳ ಇತಿಹಾಸವಿರುವ ಭೂಮಂಡಲದ ಏಕೈಕ ಭಾಷೆ ನಮ್ಮ ಹೆಮ್ಮೆಯ ‘ಕನ್ನಡ’ ಎಂದರು.

ಕೇಂದ್ರ ಸರ್ಕಾರಗಳ ಸಾಂಸ್ಕೃತಿಕ ರಾಜಕಾರಣದಿಂದ ಪ್ರಾಚೀನ ಪ್ರದೇಶಿಕ ಭಾಷೆಗಳಿಗೆ ಅಪಾಯ ಎದುರಾಗುತ್ತಿದೆ. ಪ್ರಪಂಚದ ಅನೇಕ ರಾಷ್ಟ್ರಗಳು ತಮ್ಮ ನೆಲದ ಭಾಷೆಯಲ್ಲಿ ಶಿಕ್ಷಣ, ಆಡಳಿತ ನಡೆಸುತ್ತವೆ. ನಮ್ಮಲ್ಲಿ ಮಾತ್ರ ಅನುಕೂಲ ಭಾಷೆ ಹೇರಿಕೆ ನಡೆದಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದು ತಿಳಿಸಿದರು.

’ಎಲ್ಲ ಕಾಲದ ಪ್ರಬಲ ಭಾಷೆಗಳಿಗೆ ಪರ್ಯಾಯವಾಗಿ ಕನ್ನಡ ಉಳಿದು ಬೆಳೆದಿದೆ. ಪ್ರಾಕೃತ, ಸಂಸ್ಕೃತದ ಪ್ರಾಬಲ್ಯದಲ್ಲಿಯೂ ಕನ್ನಡ ಸಶಕ್ತವಾಗಿತ್ತು, ಪ್ರಸ್ತುತ ಇಂಗ್ಲಿಷ್‌ಗೆ ಪರ್ಯಾಯವಾಗಿ ಕನ್ನಡ ಕಟ್ಟಬೇಕಾಗಿದೆ’ ಎಂದು ಹೇಳಿದರು.

ಅರ್ಥಪೂರ್ಣ ಸಮ್ಮೇಳನ:

‘ಇದೊಂದು ಚಾರಿತ್ರಿಕ ಮತ್ತು ಮಹತ್ವದ ಸಮ್ಮೇಳನ. ಇದು ಗ್ರಾಮೀಣ ಸೊಗಡನ್ನು ಅಲಂಕರಿಸಿದೆ ಇಲ್ಲಿ ನಡೆದ ಗೋಷ್ಠಿಗಳು ಹಳ್ಳಿಯ ಬದುಕನ್ನು ಪ್ರತಿನಿಧಿಸುವ ಕಾರಣ ಇದೊಂದು ಅರ್ಥಪೂರ್ಣವಾದಂತಹ ಸಮ್ಮೇಳನವೆಂದು ಭಾವಿಸುತ್ತೇನೆ ಎಂದು ಬಲ್ಲೂರ ಹೇಳಿದರು.

‘ಸಾಹಿತ್ಯ ಸಮ್ಮೇಳನವೆಂದರೆ ನುಡಿ ಜಾತ್ರೆ ಇದು ಸಹಬಾಳ್ವೆಯನ್ನು ಕಲಿಸಿಕೊಡುತ್ತದೆ. ಇಡೀ ಊರು, ಊರ ಜನ ಸಹಭಾಗಿತ್ವ ಪಡೆದಿರುವುದೇ ಇದಕ್ಕೆ ಸಾಕ್ಷಿ. ಭಾಷಿಕವಾಗಿ ಕನ್ನಡ ಜಾಗೃತಿ ಸಮ್ಮೇಳನದ ಮುಖ್ಯ ಆಶಯ. ಆಬಾಲವೃದ್ಧರವರೆಗೆ ಎಲ್ಲರೂ ಕನ್ನಡ-ಕನ್ನಡಿಗ-ಕರ್ನಾಟಕ ಕುರಿತು ಚರ್ಚೆ ಮಾಡಲು ಇದೊಂದು ವೇದಿಕೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT