ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ: ಸಚಿವ ಪ್ರಹ್ಲಾದ್ ಜೋಶಿ

ಅನುಭವ ಮಂಟಪ ಉತ್ಸವ–2020ದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆನ್‌ಲೈನ್ ಮೂಲಕ ಸಂದೇಶ
Last Updated 29 ನವೆಂಬರ್ 2020, 1:40 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಬಸವಣ್ಣನವರದ್ದು ಜ್ಞಾನ ಮತ್ತು ಸಂವಾದ ಆಧಾರಿತವಾದ ಸಾಮಾಜಿಕ ಕ್ರಾಂತಿ ಆಗಿತ್ತು. ಸಮಾ ನತೆಯ ಸಮಾಜಕ್ಕೆ ಅವರು ಮಾರ್ಗ ದರ್ಶಕ ಆಗಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಇಲ್ಲಿನ ಅನುಭವ ಮಂಟಪದಲ್ಲಿ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯಿಂದ ಆಯೋಜಿಸಿದ್ದ 41ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ–2020ದಲ್ಲಿ ಆನ್‌ಲೈನ್ ಮೂಲಕ ಅವರು ಮಾತನಾಡಿದರು.

‘ಬಸವಣ್ಣನವರು ಹೊಸ ಸಮಾಜದ ಸೃಷ್ಟಿಗೆ ಯತ್ನಿಸಿದರು. ಪ್ರಜಾಪ್ರಭುತ್ವದ ಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ನೀಡಿದರು. ಬೇರೆ ಬೇರೆ ಕಾಯಕ ಮಾಡುತ್ತಿದ್ದ 770 ಅಮರ ಗಣಂಗಳನ್ನು ಸಂಘಟಿಸಿ ಜೀವನ ಮತ್ತು ಉಪ ಜೀವನಕ್ಕೆ ಬೇಕಾದ ಮಾರ್ಗದರ್ಶನ ಮಾಡಿದರು. ಅವರ ವಚನಗಳಲ್ಲಿ ಸಂವಿಧಾನ ಹಾಗೂ ಮಾನವ ಹಕ್ಕುಗಳು, ಜಾತಿ, ವರ್ಗರಹಿತ ಸಮಾಜಕ್ಕೆ ಬೇಕಾದ ಅಂಶಗಳಿವೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ದೇಶ ವಿದೇಶಗಳಲ್ಲಿ ಬಸವಣ್ಣನವರ ಸಂದೇಶ ಪಸರಿಸುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಬಸವಣ್ಣನವರ ಪ್ರತಿಮೆ ಅನಾವರಣಗೊಳಿಸಲು ಹೋಗಿದ್ದರು. ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಕೂಡ ಬಸವತತ್ವ ಪ್ರಚಾರಕ್ಕೆ ಸತತವಾಗಿ ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಿದರು.

ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕೂಡ ಆನ್‌ಲೈನ್ ಮೂಲಕ ಮಾತನಾಡಿ, ‘ಬಸವಣ್ಣನವರು ಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಹೇಳಿ ಜನಸಾಮಾನ್ಯರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಅವರ ತತ್ವದ ಪ್ರಚಾರ ಅಷ್ಟಾಗಿ ಆಗಿಲ್ಲ. ಇಂಗ್ಲಿಷ್‌ನಲ್ಲಿ ಏನಾದರೂ ಅವರು ವಚನಗಳನ್ನು ಬರೆಯುತ್ತಿದ್ದರೆ ಅವರು ವಿಶ್ವವ್ಯಾಪಿ ಆಗುತ್ತಿದ್ದರು’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ‘ಎಸ್.ಎಂ.ಕೃಷ್ಣ ಮುಖ್ಯಮಂತ್ರಿ, ಮಲ್ಲಿಕಾರ್ಜುನ ಖರ್ಗೆ ಸಚಿವರಾಗಿದ್ದಾಗ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಜಾರಿಗೊಂಡಿತು. ಸಿದ್ರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಆಗ ಗೋ.ರು.ಚನ್ನಬಸಪ್ಪ ಅವರ ನೇತೃತ್ವದ ಸಮಿತಿ ರಚಿಸಿ ₹600 ಕೋಟಿ ವೆಚ್ಚದ ನೂತನ ಅನುಭವ ಮಂಟಪದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು. ಅದಕ್ಕೆ ಯಡಿಯೂರಪ್ಪ ಅನುದಾನ ಬಿಡುಗಡೆ ಮಾಡಿದ್ದು ಮಂಟಪದ ಶಂಕುಸ್ಥಾಪನಾ ಕಾರ್ಯ ಶೀಘ್ರ ನೆರವೇರಬೇಕು’ ಎಂದು ಹೇಳಿದರು.

ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ‘ಬಸವಣ್ಣನವರು ಜ್ಞಾನ, ಧ್ಯಾನ ಮತ್ತು ಭಕ್ತಿಯ ಮೂಲಕ ಕ್ರಾಂತಿಗೈದರು. ಅವರ ಕಾಯಕವೇ ಕೈಲಾಸ ಸಿದ್ಧಾಂತವು ಯುವಕರು ಸ್ವಾವಲಂಬಿಯಾಗಲು ಪ್ರೇರಣೆಯಾಗಿದೆ. ನಾಡಿನ ವಚನ ಸಾಹಿತ್ಯ ಅಲ್ಲದೆ ದಾಸ ಸಾಹಿತ್ಯ ಕೂಡ ನಿಜ ಸಂಪತ್ತಾಗಿದೆ. ಎಲ್ಲರೂ ಜಾತಿ, ವರ್ಗ ಭೇದ ಮರೆತು ಬಸವತತ್ವದ ಪಾಲನೆ ಮಾಡಬೇಕಾಗಿದೆ’ ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್‌. ಧ್ವಜಾರೋಹಣ ನೆರವೇರಿಸಿ, ಗ್ರಂಥಗಳನ್ನು ಬಿಡುಗಡೆ ಮಾಡಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು, ಅಕ್ಕ ಅನ್ನಪೂರ್ಣ, ಗುರುಬಸವ ಪಟ್ಟದ್ದೇವರು, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ, ಬಾಬು ವಾಲಿ, ಶಿವರಾಜ ನರಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚೆನಶೆಟ್ಟಿ, ವೈಜನಾಥ ಕಾಮಶೆಟ್ಟಿ, ಡಾ.ಎಸ್.ಬಿ.ದುರ್ಗೆ, ಬಸವರಾಜ ಧನ್ನೂರ್, ಶಂಕರ ಮದರಗೈ ಪಾಲ್ಗೊಂಡಿದ್ದರು.

ಸಂಗೀತ ಕಲಾವಿದರಾದ ಶಿವಕುಮಾರ ಪಂಚಾಳ, ರಾಜಕುಮಾರ ಹೂಗಾರ ಮದಕಟ್ಟಿ, ನವಲಿಂಗಕುಮಾರ ಪಾಟೀಲ ವಚನಗಾಯನ ಮಾಡಿದರು. ಬಸವರಾಜ ಬಾಲಿಕಿಲೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT