ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್: ಹಚ್ಚ ಹಸಿರಿನಿಂದ ಕೂಡಿದ ನರ್ಸರಿ, ಬರಗಾಲದ ನಡುವೆ ಲಕ್ಷ ಸಸಿಗಳ ಪೋಷಣೆ

ಹಸಂಘ ಸಂಸ್ಥೆಗಳಿಗೆ ಗಿಡ ವಿತರಣೆ ಮಾಡಲು ಯೋಜನೆ
ಮನ್ಮಥಪ್ಪ ಸ್ವಾಮಿ
Published 24 ಮೇ 2024, 5:50 IST
Last Updated 24 ಮೇ 2024, 5:50 IST
ಅಕ್ಷರ ಗಾತ್ರ

ಔರಾದ್: ಬರ, ನೀರಿನ ಕೊರತೆ ನಡುವೆಯೂ ಇಲ್ಲಿಯ ಬೋರಾಳ ಸಸ್ಯ ಕ್ಷೇತ್ರದಲ್ಲಿ (ನರ್ಸರಿ) ಒಂದು ಲಕ್ಷ ಸಸಿಗಳ ಪೋಷಣೆ ಮಾಡಲಾಗಿದೆ.

ಬೀದರ್-ಔರಾದ್ ಹೆದ್ದಾರಿಗೆ ಹೊಂದಿಕೊಂಡು ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಬೋರಾಳ ನರ್ಸರಿ ಬಿರು ಬಿಸಿಲಿನಲ್ಲೂ ಹಚ್ಚ ಹಸರಿನಿಂದ ಕಂಗೊಳಿಸುತ್ತಿದೆ.

ಹಸಿರೀಕರಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ರಸ್ತೆ ಬದಿ, ಸಾರ್ವಜನಿಕ ಸ್ಥಳ ಹಾಗೂ ರೈತರ ಹೊಲಗಳಲ್ಲಿ ಸಸಿ ನೆಡಲು ಈ ವರ್ಷ 1.04 ಲಕ್ಷ ಸಸಿಗಳು ಬೆಳೆಸಿದೆ. ಬೇವು, ಮಾವು, ಅರಳಿ, ಹೆಬ್ಬೇವು, ತೇಗ, ಸಿಲ್ವರ ಓಕ್, ನಿಂಬೆ, ಶ್ರೀಗಂಧ, ಬನ್ನಿ, ಬಿಲ್ವಪತ್ರೆ, ಚರಿ, ನುಗ್ಗೆ, ಹುಣಸೆ, ಆಲ, ಅರಳಿ ಹೊಂಗೆ ಸೇರಿದಂತೆ 15 ಪ್ರಕಾರದ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿದ್ದಾರೆ.

ಅತಿ ದೊಡ್ಡ ಅಂದರೆ 14/20 ಚಿಕ್ಕ ಅಂದರೆ 6/9 ಎತ್ತರದ ಸಸಿಗಳು ಇಲ್ಲಿ ಬೆಳೆಸಿದ್ದು ಮಳೆಯಾದ ಕೂಡಲೇ ಇವು ತಾಲ್ಲೂಕಿನಾದ್ಯಂತ ನೆಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

’ಈ ನರ್ಸರಿಯಲ್ಲಿ ವರ್ಷ ಪೂರ್ತಿ ಸಸಿ ಪೋಷಣೆ ಮಾಡುವ ಕೆಲಸ ನಡೆಯುತ್ತಿರುತ್ತದೆ. ಇದಕ್ಕಾಗಿ 2. 5 ಎಕರೆ ಜಮೀನು ಇದೆ. ಸುತ್ತಲೂ ಬೇಲಿ ಹಾಕಿ ಅದರಲ್ಲಿ ಸಸಿಗಳ ಪೋಷಣೆ ಮಾಡಲಾಗುತ್ತದೆ. ಎರಡು ಕೊಳವೆ ಬಾವಿ ಇದೆ. ಅದರ ನೀರನ್ನು ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಸಸಿಗಳಿಗೆ ನಿಯಮಿತವಾಗಿ ಬಿಡಲಾಗುತ್ತದೆ. ಆದರೆ, ಈ ಬಾರಿ ಬೇಸಿಗೆ ಆರಂಭದಲ್ಲೇ ಎರಡು ಕೊಳವೆ ಬಾವಿ ಬತ್ತಿ ಕೆಲ ದಿನ ಸಮಸ್ಯೆಯಾಗಿತ್ತು. ಹೀಗಾಗಿ ಖಾಸಗಿ ವ್ಯಕ್ತಿಯೊಬ್ಬರ ಕೊಳವೆ ಬಾವಿ ಪಡೆದು ಅದರ ಮೂಲಕ ನಮ್ಮ ನರ್ಸರಿಗೆ ನೀರು ಪೂರೈಸಿದ್ದೇವೆʼ ಎನ್ನುತ್ತಾರೆ ಉಪ ವಲಯ ಅರಣ್ಯಾಧಿಕಾರಿ ಹಾವಪ್ಪ ಶೆಂಬೆಳ್ಳಿ.

’ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಎಲ್ಲ ಕಡೆ ಸಸಿಗಳು ನೆಡಬೇಕಾಗಿದೆ. ಇದಕ್ಕಾಗಿ ಕೃಷಿ ವಿಕಾಸ, ನರೇಗಾ ಸೇರಿದಂತೆ ವಿವಿಧ ಯೋಜನೆಯಡಿ ನಾವು 1 ಲಕ್ಷ ಸಸಿ ಬೆಳೆಸಿದ್ದೇವೆ. ಈ ಮಳೆಗಾಲದಲ್ಲಿ ರೈತರು, ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ಸಸಿ ನೆಟ್ಟು ಪೋಷಣೆ ಮಾಡಲಾಗುವುದುʼ ಎಂದು ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ ತಿಳಿಸಿದ್ದಾರೆ.

ನಿಗದಿತ ಗುರಿಯಂತೆ ನಾವು ಪ್ರತಿ ವರ್ಷ ನರ್ಸರಿಯಲ್ಲಿ ಸಸಿಗಳ ಪೋಷಣೆ ಮಾಡುತ್ತೇವೆ. ಆದರೆ ಈ ವರ್ಷ ನೀರಿನ ಕೊರತೆ ನಡುವೆಯೂ ಒಂದು ಲಕ್ಷ ಸಸಿ ಬೆಳೆಸಿದ್ದೇವೆ
–ಪ್ರಕಾಶ ನಿಪ್ಪಾಣಿ, ವಲಯ ಅರಣ್ಯಾಧಿಕಾರಿಗಳು ಸಾಮಾಜಿಕ ವಲಯ ಔರಾದ್
ಔರಾದ್ ತಾಲ್ಲೂಕಿನ ಬೋರಾಳ ನರ್ಸರಿಯಲ್ಲಿ ನೀರು ಹಾಕಿ ಸಸಿಗಳು ಪೋಷಣೆ ಮಾಡಲಾಗುತ್ತಿದೆ
ಔರಾದ್ ತಾಲ್ಲೂಕಿನ ಬೋರಾಳ ನರ್ಸರಿಯಲ್ಲಿ ನೀರು ಹಾಕಿ ಸಸಿಗಳು ಪೋಷಣೆ ಮಾಡಲಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT