ಭಾನುವಾರ, ನವೆಂಬರ್ 29, 2020
24 °C
ಔರಾದ್ ಪಟ್ಟಣ ಪಂಚಾಯಿತಿ ಅಧ್ಯಕ್ಷ-, ಉಪಾಧ್ಯಕ್ಷರ ಆಯ್ಕೆ ಇಂದು

ಗುಪ್ತ ಸ್ಥಳದಲ್ಲಿ ಬಿಜೆಪಿ ಸದಸ್ಯರ ಬೀಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಸದಸ್ಯರ ಚುನಾವಣೆ ನಡೆದು ಒಂದೂವರೆ ವರ್ಷದ ನಂತರ ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಲಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಟ್ಟು 20 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ 12 ಸ್ಥಾನ ಪಡೆದ ಬಿಜೆಪಿಗೆ ಬಹುಮತ ಇದೆ. 6 ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಅಧ್ಯಕ್ಷ ಸ್ಥಾನಕ್ಕಾಗಿ ನೀಲಮ್ಮ ಖಾನಾಪುರೆ, ಅಂಬಿಕಾ ಕೇರಬಾ ಪವಾರ್, ಶೀಲಾಬಾಯಿ ರಾಮಚಂದ್ರ ಕಪ್ಪೆಕೇರಿ ದಾವೇದಾರರಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಸಂತೋಷ ಪೋಕಲವಾರ, ಕುಮಾರ ದೇಶಮುಖ, ಶಿವಾಜಿ ರಾಠೋಡ್ ಅವರ ಹೆಸರು ಕೇಳಿಬರುತ್ತಿದೆ.

ಬಿಜೆಪಿಗೆ ಬಹುಮತ ಇರುವುದರಿಂದ ಆ ಪಕ್ಷದ ಅಧ್ಯಕ್ಷ, ಉಪಾಧ್ಯಕ್ಷ ಆಕಾಂಕ್ಷಿಗಳು ಹಾಗೂ ಸದಸ್ಯರು ಎರಡು ದಿನಗಳ ಹಿಂದೆಯೇ ಪಟ್ಟಣ ಬಿಟ್ಟು ಗುಪ್ತ ಸ್ಥಳಕ್ಕೆ ಹೋಗಿದ್ದಾರೆ. ಎಲ್ಲ ಸದಸ್ಯರ ಮೊಬೈಲ್ ಫೋನ್ ಕೂಡ ನಾಟ್ ರಿಚೇಬಲ್ ಆಗಿದೆ. ಶನಿವಾರ ಕಮಲನಗರ ತಾಲ್ಲೂಕು ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲದ (ತಲಾ ಆರು) ಸದಸ್ಯರು ಇದ್ದರು. ಅವರಲ್ಲಿ ಇಬ್ಬರು ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಹೋದ ಪರಿಣಾಮ ಕಮಲನಗರ ಪಂಚಾಯಿತಿ ಬಿಜೆಪಿ ಪಾಲಾಗಿದೆ.

ಇನ್ನು ಪಕ್ಷೇತರರಾಗಿ ಆಯ್ಕೆಯಾದ ದಯಾನಂದ ಘುಳೆ ಹಾಗೂ ಬಂಟಿ ದರಬಾರೆ ತೆರೆಮರೆಯ ಚಟುವಟಿಕೆ ನಡೆಸಿದ್ದಾರೆ. ಆರು ಸದಸ್ಯ ಸ್ಥಾನ ಹೊಂದಿದ ಕಾಂಗ್ರೆಸ್ ಪಕ್ಷೇತರರ ಜತೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿ ನಡೆಸುತ್ತಿದೆ.
ಎಲ್ಲಿ ನಮ್ಮ ಸದಸ್ಯರಿಗೂ ಕಾಂಗ್ರೆಸ್ ಗಾಳ ಹಾಕಬಹುದೆಂಬ ಲೆಕ್ಕಾಚಾರದಿಂದ ಬಿಜೆಪಿ ಸದಸ್ಯರನ್ನು ಗುಪ್ತ ಸ್ಥಳದಲ್ಲಿ ಇರಿಸಲಾಗಿದೆ.

ಸೋಮವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ನಾಮಪತ್ರ ಸಲ್ಲಿಸುವ ವೇಳೆ ಇವರು ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಗೊತ್ತಾಗಿದೆ.

‘ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲ ಸದಸ್ಯರು ಒಟ್ಟಾಗಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಔರಾದ್ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಧ್ವಜ ಹಾರಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು