ಸೋಮವಾರ, ಆಗಸ್ಟ್ 19, 2019
28 °C
ಶ್ರದ್ಧಾ ಭಕ್ತಿಯಿಂದ ಈದ್ ಉಲ್ ಅಧಾ ಆಚರಣೆ

ನೆರೆ ಸಂತ್ರಸ್ತರಿಗೆ ವಿಶೇಷ ಪ್ರಾರ್ಥನೆ

Published:
Updated:
Prajavani

ಬೀದರ್: ಜಿಲ್ಲೆಯಾದ್ಯಂತ ಸೋಮವಾರ ಶ್ರದ್ಧಾ ಭಕ್ತಿಯಿಂದ ಈದ್ ಉಲ್ ಅಧಾ (ಬಕ್ರೀದ್‌) ಆಚರಿಸಲಾಯಿತು. ದೇಶದ ವಿವಿಧೆಡೆ ನೆರೆ ಹಾವಳಿಯಲ್ಲಿ ನೆಲೆ ಕಳೆದುಕೊಂಡ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಬೆಳಗಾವಿ, ಕೊಡಗು ಹಾಗೂ ಉಡುಪಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನದಿಗಳಿಗೆ ಬಂದಿರುವ ಪ್ರವಾಹದಿಂದ ಅನೇಕ ಗ್ರಾಮಗಳಲ್ಲಿ ಮನೆಗಳು ನೀರಿನಲ್ಲಿ ಮುಳುಗಿವೆ. ಜನರು ಊರು ಬಿಟ್ಟು ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಳ್ಳುವಂಥ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಪ್ರತಿಯೊಬ್ಬರೂ ಆರ್ಥಿಕ ನೆರವು ನೀಡಬೇಕು ಎಂದು ಪ್ರಾರ್ಥನೆಯ ಸಂದರ್ಭದಲ್ಲಿ ಮನವಿ ಮಾಡಲಾಯಿತು.

ಈದ್ಗಾ ಮೈದಾನದ ಪ್ರವೇಶ ದ್ವಾರದಲ್ಲಿಯೇ ಯುವಕರು ಬ್ಯಾನರ್‌ ಹಚ್ಚಿ ಜೋಳಿಗೆ ಹಿಡಿದು ನಿಧಿ ಸಂಗ್ರಹಿಸಿದರು. ಎಲ್ಲ ಹಣವನ್ನು ಒಟ್ಟುಗೂಡಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ನಿಧಿಗೆ ಹಣ ಜಮಾ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದರು.

ನಗರದ ಚಿದ್ರಿಯ ಈದ್ಗಾ ಮೈದಾನ, ಜಾಮಿಯಾ ಮಸೀದಿ, ಮಸೀದ್‌–ಎ ಆಯಿಷಾ, ಕಾಲಿ ಮಸೀದಿ, ಸಿದ್ದಿಷಾ ತಾಲೀಂ ಮಸೀದಿ, ದರ್ಗಾಪುರ ಮಸೀದಿ, ಹೈದರಾಬಾದ್ ರಸ್ತೆಯಲ್ಲಿ ಇರುವ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಾಮೂಹಿಕ ಪ್ರಾರ್ಥನೆಯ ನಂತರ ಯುವಕರು ಹಾಗೂ ವೃದ್ಧರು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭ ಕೋರಿದರು. ಕೆಲವರು ಬಡವರಿಗೆ ದಾನ ಮಾಡುವ ಮೂಲಕ ಉದಾರತೆ ತೋರಿದರು.

ಸಾಮೂಹಿಕ ಪ್ರಾರ್ಥನೆಯ ಪ್ರಯುಕ್ತ ಸಂಚಾರ ದಟ್ಟಣೆ ತಡೆಯಲು ಪೊಲೀಸರು ಬೆಳಿಗ್ಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದರು.

ನಗರದಲ್ಲಿ ಬೆಳಿಗ್ಗೆಯೇ ಪ್ರಖರ ಬಿಸಿಲು ಇತ್ತು. ಮಧ್ಯಾಹ್ನದ ವೇಳೆ ಕಪ್ಪು ಮೋಡ ಆವರಿಸಿದರೂ ಮಳೆ ಸುರಿಯಲಿಲ್ಲ.

Post Comments (+)