ಶುಕ್ರವಾರ, ಆಗಸ್ಟ್ 19, 2022
27 °C
ಮುಡಬಿ, ಕೊಹಿನೂರ ಹೋಬಳಿಗಳಲ್ಲಿ ಅಧಿಕ ಬೆಳೆಹಾನಿ; ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿ ವರದಿ ಸಲ್ಲಿಕೆ

ಬಸವಕಲ್ಯಾಣ: 5,975 ಹೆಕ್ಟೇರ್ ಬೆಳೆ ಹಾನಿ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಈಚೆಗೆ ಕೆಲ ದಿನಗಳವರೆಗೆ ಸತತವಾಗಿ ಮಳೆ ಸುರಿದಿದ್ದರಿಂದ ಅಂದಾಜು 5,975 ಹೆಕ್ಟೇರ್ ನಷ್ಟು ಬೆಳೆ ಹಾನಿಯಾಗಿದೆ. ಈ ಕಾರಣ ರೈತರು ಕಂಗಾಲಾಗಿದ್ದಾರೆ. ಹೊಲಗಳಲ್ಲಿ ಮೊಳಕಾಲು ಮಟ್ಟ ಕೆಸರು ಇರುವುದರಿಂದ ಬೆಳೆಗಳು ಹಾಳಾಗುತ್ತಿವೆ.

ಮುಡಬಿ, ರಾಜೇಶ್ವರ, ಕೊಹಿನೂರ, ಮಂಠಾಳ ಹೋಬಳಿಗಳ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಸುರಿದಿದ್ದರಿಂದ ನಾಲೆಗಳಲ್ಲಿ ನೀರು ಹರಿಯುತ್ತಿದೆ. ಹಲವು ರೈತರ ಹೊಲಗಳಲ್ಲಿಯೂ ನೀರು ಸಂಗ್ರಹಗೊಂಡಿದೆ. ಮಳೆ ಹೆಚ್ಚಾಗಿ ಜಮೀನಿನಲ್ಲಿ ನೀರಿನ ಬುಗ್ಗೆಗಳು ಏಳುತ್ತಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

`ತಾಲ್ಲೂಕಿನಲ್ಲಿ ಹೆಸರು, ಉದ್ದು ಹಾಗೂ ಸೋಯಾಬಿನ್ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗಿದೆ. ಈ ಸಲ ವಾಡಿಕೆಗಿಂತ ಶೇ 80 ರಷ್ಟು ಮಳೆ ಹೆಚ್ಚಾಗಿದ್ದರಿಂದ ಕೆಲವೆಡೆ ಜಮೀನುಗಳಲ್ಲಿ ತಿಳಿ ನೀರು ಕಾಣುತ್ತಿದೆ. ಜನವಾಡಾ ಹತ್ತಿರದಲ್ಲಿ ನಾಲೆ ನೀರು ಜಮೀನಿಗೆ ನುಗ್ಗಿ 100 ಎಕರೆ ಬೆಳೆ ನಾಶವಾಗಿದೆ. ಅನೇಕ ಕಡೆ ಬೆಳೆಗಳು ಬಾಡಿವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ ತಿಳಿಸಿದ್ದಾರೆ.

‘ಹೆಸರು, ತೊಗರಿಗೆ ಅಧಿಕ ಪ್ರಮಾಣದ ಹಾನಿಯಾಗಿದೆ. ತಾಲ್ಲೂಕಿನಲ್ಲಿ ಬಿತ್ತನೆಯಾದ ಅರ್ಧದಷ್ಟು ಬೆಳೆ ನಾಶವಾಗಿದೆ ಎಂದು ಅಂದಾಜು ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಎಲ್ಲ ಹೋಬಳಿಗಳಲ್ಲಿ ಕೃಷಿ ಇಲಾಖೆಯಿಂದ ಬೆಳೆ ಹಾನಿಯ ನಿಖರ ಸಮೀಕ್ಷೆ ಕೈಗೊಳ್ಳಲಾಗಿದೆ' ಎಂದು ಹೇಳಿದ್ದಾರೆ.

`ಮಳೆಯಿಂದ ಬೆಳೆಗಳ ಕಾಯಿಗಳು ಉದುರಿವೆ, ಕೆಲವೆಡೆ ಬೆಳೆ ಕೊಳೆತಿದೆ. ಅನೇಕ ರೈತರ ಹತ್ತಾರು ಎಕರೆ ಬೆಳೆ ನಾಶವಾಗಿದ್ದರಿಂದ ಲಕ್ಷಾಂತರ ರೂಪಾಯಿ ಹಾನಿ ಅನುಭವಿಸಿದ್ದಾರೆ.  ಲಾಕ್‌ಡೌನ್‌ನಿಂದ
ತೊಂದರೆಗೊಳಗಾದ ರೈತರಿಗೆ ಪರಿಹಾರ ನೀಡುವುದು ಅಗತ್ಯವಾಗಿದೆ. ಆದ್ದರಿಂದ ಬೆಂಗಳೂರಿಗೆ ನಿಯೋಗದೊಂದಿಗೆ ಹೋಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಮನವಿಪತ್ರ ಸಲ್ಲಿಸಲಾಗಿದೆ' ಎಂದು ಮುಖಂಡ ಶರಣು ಸಲಗರ ಹೇಳಿದ್ದಾರೆ.

`ತಾಲ್ಲೂಕಿನ ರೈತರ ಸ್ಥಿತಿ ಚಿಂತಾಜನಕ ಆಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಡಳಿತದವರಾಗಲಿ ಈ ಕಡೆ ಕಣ್ಣೆತ್ತಿ ನೋಡಿಲ್ಲ. ಆದ್ದರಿಂದ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹೆದ್ದಾರಿ ತಡೆ ಚಳವಳಿಗೆ ನಿರ್ಧರಿಸಲಾಗಿತ್ತು. ಅನಿವಾರ್ಯ ಕಾರಣಗಳಿಂದ ಅದನ್ನು ಮುಂದೂಡಲಾಗಿದ್ದು ಸಂಬಂಧಿತರ ನಿರ್ಲಕ್ಷ ಹೀಗೆಯೇ ಮುಂದುವರಿದರೆ ಮುಂದಿನ ಹೋರಾಟದ ಬಗ್ಗೆ ಶೀಘ್ರ ನಿರ್ಣಯ ತೆಗೆದುಕೊಳ್ಳಲಾಗುವುದು' ಎಂದು ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ಸಂತೋಷ ಗುದಗೆ ಹಾಗೂ ಮುಖಂಡ ಶಿವಶರಣಪ್ಪ ಪಾಟೀಲ ಹಿರೇನಾಗಾಂವ ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು