ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ | ಮಳೆ ನಾಪತ್ತೆ: ಬಿತ್ತನೆ ಬೀಜ ಖರೀದಿ ಜೋರು

ಬಸವಕಲ್ಯಾಣ ತಾಲ್ಲೂಕಿನಲ್ಲಿ ಸೋಯಾಬಿನ್ ಬೀಜಕ್ಕೆ ಹೆಚ್ಚಿನ ಬೇಡಿಕೆ
Published 16 ಜೂನ್ 2023, 23:34 IST
Last Updated 16 ಜೂನ್ 2023, 23:34 IST
ಅಕ್ಷರ ಗಾತ್ರ

ಮಾಣಿಕ ಆರ್.ಭುರೆ

ಬಸವಕಲ್ಯಾಣ: ತಾಲ್ಲೂಕಿನಲ್ಲಿ ಬಿತ್ತನೆಗೆ ಅಗತ್ಯವಾದ ಸಮರ್ಪಕ ಮಳೆ ಸುರಿದಿಲ್ಲ. ಆದರೂ, ಬಿತ್ತನೆ ಬೀಜ ಖರೀದಿಗೆ ಮಾತ್ರ ರೈತ ಸಂಪರ್ಕ ಕೇಂದ್ರಗಳ ಎದುರಲ್ಲಿ ನೂಕುನುಗ್ಗಲು ಆಗುತ್ತಿದೆ.

ಮಳೆಗಾಲ ಆರಂಭವಾಗಿ ವಾರ ಕಳೆಯುತ್ತಿದೆ. ಹೊಲಗಳಲ್ಲಿನ ಕಳೆ ತೆಗೆದು, ನೇಗಿಲು ಕುಂಟೆ ಹೊಡೆದು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಮಳೆ ನಾಪತ್ತೆ ಆಗಿದೆ. ಮೋಡಗಳು ಸಹ ಕಾಣದಂತಾಗಿದ್ದು ಬರೀ ಬಿಸಿಲು ಬೀಳುತ್ತಿದೆ. ಆದ್ದರಿಂದ ರೈತರು ಮುಗಿಲು ನೋಡುವಂತಾಗಿದೆ. ಕೃಷಿ ಇಲಾಖೆಯವರು ಮಾತ್ರ ಆಗಲೇ ಬೀಜ ವಿತರಣೆ ಆರಂಭಿಸಿದ್ದಾರೆ.

ತಾಲ್ಲೂಕಿನ 6 ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು 20 ಕ್ಕೂ ಅಧಿಕ ಬೀಜ ವಿತರಣಾ ಕೇಂದ್ರಗಳಲ್ಲಿ ಬೀಜ ಮಾರಾಟ ಆರಂಭಿಸಲಾಗಿದೆ. ಆದರೂ, ಸಿಬ್ಬಂದಿಗಳ ಕೊರತೆಯ ಕಾರಣ ಕೆಲವೆಡೆ ವಿತರಣೆ ನಡೆದಿಲ್ಲ.

`ನಾರಾಯಣಪುರದ ಬೀಜ ವಿತರಣಾ ಕೇಂದ್ರದಲ್ಲಿ ಕೆಲ ದಿನ ಬೀಜ ವಿತರಿಸಲಾಯಿತು. ಆದರೆ, ನಂತರ ಬಸವಕಲ್ಯಾಣದಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಬರಲು ಹೇಳಿದ್ದರಿಂದ ಶುಕ್ರವಾರ ಇಲ್ಲಿ ನೂಕು ನುಗ್ಗಲು ಆಯಿತು. 500 ಕ್ಕೂ ಹೆಚ್ಚಿನ ರೈತರು, ಮಹಿಳೆಯರು ಬೆಳಿಗ್ಗೆ 7 ಗಂಟೆಯಿಂದಲೇ ಕೇಂದ್ರದ ಎದುರು ಬಂದು ಕುಳಿತಿದ್ದರು. ಕೇಂದ್ರದ ಬಾಗಿಲು ತೆರೆಯದಿದ್ದರೂ ರೈತರು ಹಾಗೆಯೇ ಕುಳಿತಿದ್ದರು' ಎಂದು ರೈತ ಶಿವರಾಮಪ್ಪ ತಿಳಿಸಿದರು.

`ಮಳೆ ಬಾರದಿದ್ದರೂ ನಂತರದಲ್ಲಿ ಬಿತ್ತನೆ ಬೀಜ ಸಿಗುತ್ತದೋ ಇಲ್ಲವೋ ಎಂದು ಈಗಲೇ ಬೀಜ ಖರೀದಿಸುತ್ತಿದ್ದೇವೆ. ಮಳೆ ಬಂದು ಜಮೀನು ಹಸಿ ಆಗುವುದೊಂದೇ ಬಾಕಿ ಇದೆ' ಎಂದು ಇನ್ನೊಬ್ಬ ರೈತ ರಾಮಶೆಟ್ಟೆಪ್ಪ ಹೇಳಿದರು.

`ಮಳೆಗೆ ವಿಳಂಬವಾಗಿದೆ. ಹವಾಮಾನ ಇಲಾಖೆಯ ವರದಿ ಪ್ರಕಾರ ಇನ್ನೂ ಕೆಲದಿನ ಮಳೆ ಸುರಿಯುವುದಿಲ್ಲ. ಆದ್ದರಿಂದ ರೈತರು ಸಮರ್ಪಕ ಮಳೆ ಆಗುವವರೆಗೆ ಬಿತ್ತನೆ ಕೈಗೊಳ್ಳಬಾರದು' ಎಂದು ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ ಮಚಕೂರಿ ಸಲಹೆ ನೀಡಿದ್ದಾರೆ.

`ಎಲ್ಲ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಆದರೆ, ಸೋಯಾಬಿನ್ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಇದುವರೆಗೆ 16 ಸಾವಿರ ಕ್ವಿಂಟಾಲ್‌ನಷ್ಟು ಈ ಬೀಜದ ದಾಸ್ತಾನು ಮಾಡಲಾಗಿತ್ತು. ಈಗಾಗಲೇ 10,298 ಕ್ವಿಂಟಾಲ್‌ನಷ್ಟು ಖರೀದಿ ಆಗಿದೆ. ಬೇಡಿಕೆಗೆ ಅನುಗುಣವಾಗಿ ಬೀಜ ಪೊರೈಸಲಾಗುವುದು' ಎಂದು ಸಹ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT