ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ಕೋಟೆ ಸ್ವಚ್ಛತೆ

ವಾಯುವಿಹಾರಕ್ಕೆ ಬಂದವರಿಂದ ಮುಳ್ಳು ಕಂಟಿ ತೆರವು
Last Updated 4 ಜುಲೈ 2022, 4:30 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ಉತ್ತರದ ತುದಿಯಲ್ಲಿನ ಐತಿಹಾಸಿಕ ಕೋಟೆಯಲ್ಲಿ ಜಿಲ್ಲಾಧಿಕಾರಿಗಳಿಂದ ಹಿಡಿದು ಎಲ್ಲ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾನುವಾರ ಸ್ವಚ್ಛತಾ ಕಾರ್ಯ ಕೈಗೊಂಡರು. ಹುಲ್ಲು, ಮುಳ್ಳುಕಂಟೆಗಳನ್ನು ತೆಗೆದಿದ್ದರಿಂದ ಕೋಟೆಯ ಅರ್ಧದಷ್ಟು ಭಾಗ ಸುಂದರವಾಗಿ ಕಂಗೊಳಿಸಿತು.

ಎಲ್ಲ ಕಚೇರಿಗಳಿಗೆ ರಜೆ ಇದ್ದರೂ ಪೂರ್ವನಿರ್ಧಾರಿತವಾಗಿ ಈ ಬಗ್ಗೆ ಎಲ್ಲರಿಗೂ ಸೂಚಿಸಲಾಗಿತ್ತು. ಆದ್ದರಿಂದ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರು ನೇರವಾಗಿ ಇಲ್ಲಿಗೆ ಬಂದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಕೋಟೆಯ ಪ್ರಮುಖ ಪ್ರವೇಶದ್ವಾರದಿಂದ ಹಿಡಿದು ಒಳಗಡೆ ಮೂರು ದ್ವಾರಗಳನ್ನು ದಾಟಿ ಹೋದಾಗ ಎದುರಾಗುವ ದೊಡ್ಡ ಆಲದಮರದ ಅಂಗಳದವರೆಗೆ ಕಟ್ಟಡದ ಸಂದು, ಹೊರಗೋಡೆ, ಛಾವಣಿಯ ಮೇಲಿದ್ದ ಹುಲ್ಲನ್ನು ತೆಗೆದು ಸ್ವಚ್ಛತೆ ಕೈಗೊಳ್ಳಲಾಯಿತು.

ಪ್ರವೇಶ ದ್ವಾರದ ಎದುರಲ್ಲಿ ಹಾಗೂ ಒಳಗಡೆ ಮೊಳಕಾಲೆತ್ತರಕ್ಕೆ ಹುಲ್ಲು, ಮುಳ್ಳಿನ ಗಿಡಗಳು ಬೆಳೆದಿದ್ದರಿಂದ ಒಳಗೆ ಪ್ರವೇಶಿಸುವವರಿಗೆ ಭಯ ಹುಟ್ಟುವಂಥ ವಾತಾವರಣ ಇತ್ತು. ಹಾವು, ಚೇಳು ಇತರೆ ಹುಳಹುಪ್ಪಡಿಯಿಂದ ಅಪಾಯ ಸಂಭವಿಸುವ ಸಾಧ್ಯತೆಯೂ ಇತ್ತು. ಆದ್ದರಿಂದ ಪ್ರವಾಸಿಗರು ಅಂಜುತ್ತಲೇ ಒಳಗೆ ಹೋಗಬೇಕಾಗುತ್ತಿತ್ತು. ಅದೆಲ್ಲವೂ ಸ್ವಚ್ಛಗೊಳಿಸಿದ್ದರಿಂದ ಈಗ ಯಾವುದೇ ಭಯವಿಲ್ಲದೆ ಎಲ್ಲಿಯೂ ಸಂಚರಿಸಬಹುದಾಗಿದೆ.

ಶಾಸಕ ಶರಣು ಸಲಗರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಇಂಥ ಅಭಿಯಾನ ಬರೀ ಒಂದು ದಿನ ಕೈಗೊಂಡರೆ ಸಾಲದು. ನಿರಂತರವಾಗಿ ನಡೆಯಬೇಕು. ಈ ಕಾರ್ಯದಲ್ಲಿ ಅಧಿಕಾರಿಗಳು, ಸಂಘ ಸಂಸ್ಥೆಯವರು, ನಗರ ನಿವಾಸಿಗಳು, ಗಣ್ಯರು ಕೈಜೋಡಿಸಿರುವುದು ಹೆಮ್ಮೆ ತಂದಿದೆ' ಎಂದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು, ಜಿ.ಪಂ.ಸಿಇಒ ಶಿಲ್ಪಾ ಅವರು ಸ್ವತಃ ಪೊರಕೆ ಹಿಡಿದು ಕಸಗೂಡಿಸಿದರು.

ತಹಶೀಲ್ದಾರ್ ಸಾವಿತ್ರಿ ಸಲಗರ, ಬಿಇಒ ಚನ್ನಬಸಪ್ಪ ಹಳ್ಳದ್, ತಾಲ್ಲೂಕು ಪಂಚಾಯಿತಿ ಇಒ ಕಿರಣ ಪಾಟೀಲ, ಸೂರ್ಯಕಾಂತ ಪಾಟೀಲ ಪಾಲ್ಗೊಂಡಿದ್ದರು.

ಅಧಿಕಾರಿಗಳ ಜತೆಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎನ್.ಸಿ.ಸಿ ಮತ್ತು ಎನ್.ಎಸ್.ಎಸ್. ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್, ಶಿಕ್ಷಕರು, ವಿವಿಧ ಪಕ್ಷಗಳ ಕಾರ್ಯಕರ್ತರು, ನಗರಸಭೆ, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಉಪಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT