ಬಸವಕಲ್ಯಾಣಕ್ಕೆ ಹೊಸ ಕಳೆ ತಂದ ಮಾತಾಜಿ

ಶನಿವಾರ, ಮಾರ್ಚ್ 23, 2019
31 °C
108 ಅಡಿ ಎತ್ತರದ ಧ್ಯಾನಸ್ಥ ಬಸವ ಪ್ರತಿಮೆ ನಿರ್ಮಾಣ

ಬಸವಕಲ್ಯಾಣಕ್ಕೆ ಹೊಸ ಕಳೆ ತಂದ ಮಾತಾಜಿ

Published:
Updated:
Prajavani

ಬಸವಕಲ್ಯಾಣ: ಬರೀ ಬಸವಣ್ಣನವರ ಮೂರ್ತಿಗಳ ಬಗ್ಗೆ ಹೇಳುವುದಾದರೆ ಬಸವಕಲ್ಯಾಣದಲ್ಲಿ ನಿರ್ಮಿಸಿದ 108 ಅಡಿ ಎತ್ತರದ ಮೂರ್ತಿ ವಿಶ್ವದಲ್ಲೇ ಅತಿ ಎತ್ತರದ್ದು. ಇಂಥ ಮಹತ್ವದ ಕಾರ್ಯ ನೆರವೇರಿಸಿದವರು ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ.

ಇದಾದ ಮೇಲೆ ಬೆಂಗಳೂರಿನಲ್ಲಿ ಇದಕ್ಕೂ ಎತ್ತರದ ಮೂರ್ತಿ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡು ಕಾರ್ಯಪ್ರವತ್ತರಾದ ಸಂದರ್ಭದಲ್ಲೇ ಲಿಂಗೈಕ್ಯರಾಗಿದ್ದಾರೆ. ಬಸವಕಲ್ಯಾಣದ ಬಸವ ಮಹಾಮನೆ ಹಾಗೂ ಮೂರ್ತಿ ನಿರ್ಮಿಸುವ ಮೊದಲು ಅವರು ಬೀದರ್‌ನಲ್ಲೇ ಬಸವಾಭಿಮಾನಿಗಳನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿದ್ದರು.

ಮಧ್ಯದಲ್ಲಿ ಬಸವಣ್ಣನವರ ವಚನಾಂಕಿತ ತಿದ್ದಿದರೆಂಬ ಕಾರಣಕ್ಕೆ ವಿರೋಧ ಹೆಚ್ಚಾಗಿ ಕೆಲ ವರ್ಷ ಬೀದರ್ ಜಿಲ್ಲೆಗೆ ಬರುವುದನ್ನೂ ಕಡಿಮೆ ಮಾಡಿದ್ದರು. 2006ರ ವೇಳೆಗೆ ಕಲ್ಯಾಣ ನಾಡಿನತ್ತ ಆಸಕ್ತಿ ಹೆಚ್ಚಿಸಿಕೊಂಡರು. ಮೊದಲು ಕೂಡಲಸಂಗಮದಲ್ಲಿ ನಂತರ ಧಾರವಾಡ, ಬೆಂಗಳೂರಿನಲ್ಲಿ ಬಸವ ಮಂಟಪ ನಿರ್ಮಿಸಿ, ಕೊನೆಯ ದಿನಗಳಲ್ಲಿ ಶರಣರ ಕಾರ್ಯಕ್ಷೇತ್ರವಾದ ಬಸವಕಲ್ಯಾಣಕ್ಕೆ ಕಾಲಿಟ್ಟರು. 15 ವರ್ಷದಿಂದ ಪ್ರತಿ ವರ್ಷ ನಾಲ್ಕೈದು ಸಲ ಇಲ್ಲಿಗೆ ಬಂದು ಹೋಗುತ್ತಿದ್ದರು.

ಬಸವಕಲ್ಯಾಣದಿಂದ ಸಸ್ತಾಪುರಕ್ಕೆ ಹೋಗುವ ಮಾರ್ಗದ ಪಕ್ಕದಲ್ಲಿ 13 ಎಕರೆ ಜಮೀನು ಖರೀದಿಸಿ ಬಸವಣ್ಣನವರ ಭವ್ಯ ಮೂರ್ತಿ, ಬಸವ ಮಹಾಮನೆ, ಶರಣ ಗ್ರಾಮ ನಿರ್ಮಿಸಿದರು. ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿತು.

12ನೇ ಶತಮಾನದಲ್ಲಿನ ಶರಣರ ಯಾವುದೇ ಕುರುಹುಗಳು ಇಲ್ಲಿ ಉಳಿದಿಲ್ಲ. ಯಾರೊಬ್ಬರೂ ಶರಣರ ಸ್ಮಾರಕಗಳ ಬಗೆಗೆ ಲಕ್ಷ ವಹಿಸಿದ ಕಾರಣ ಅವರೇ ಇಲ್ಲಿಗೆ ಬಂದು ಠಿಕಾಣಿ ಹೂಡಿ ವಿವಿಧ ಕಾರ್ಯಗಳನ್ನು ಆರಂಭಿಸಿದರು. ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಅವರು ಆಯೋಜಿಸುತ್ತಿದ್ದ ಕಲ್ಯಾಣ ಪರ್ವ ಮಹತ್ವದ ಸಮಾರಂಭಗಳಲ್ಲೊಂದು. ಕೂಡಲಸಂಗಮದಲ್ಲಿನ ಶರಣ ಮೇಳ ಹೊರತುಪಡಿಸಿದರೆ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಇದುವೇ ದೊಡ್ಡದು. ನಾಡಿನ ನಾನಾ ಭಾಗದ ಬಸವಾನುಯಾಯಿಗಳು ಇದರಲ್ಲಿ ಭಾಗವಹಿಸುತ್ತಿದ್ದರು.

2013ರಲ್ಲಿ ಇಲ್ಲಿನ ಬಸವಣ್ಣನವರ ಬೃಹತ್‌ ಮೂರ್ತಿಯ ಅನಾವರಣ ಕಾರ್ಯಕ್ರಮ ನಡೆದಿತ್ತು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮುಖ್ಯ ಅತಿಥಿಯಾಗಿದ್ದರು. ಅವರ ಇಲ್ಲಿನ ಮಹತ್ವದ ಯೋಜನೆಗೆ ಕೈಜೋಡಿಸಿದವರೆಂದರೆ, ಮಾತೆ ಗಂಗಾದೇವಿ, ಸಿದ್ದರಾಮೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ ಹಾಗೂ ಬಸವಪ್ರಭು ಸ್ವಾಮೀಜಿ.

ಈಗ ಬಸವಕಲ್ಯಾಣದಲ್ಲಿ ಸಭಾಂಗಣ ನಿರ್ಮಿಸಲಾಗಿದೆ. ದಾಸೋಹ ಹಾಗೂ ಭಕ್ತರ ವಸತಿಗಾಗಿ ಬೃಹತ್ ಕಟ್ಟಡ ಕಟ್ಟಲಾಗುತ್ತಿದೆ. 108 ಅಡಿಯ ಬಸವ ಮೂರ್ತಿ ಪ್ರಮುಖ ಯಾತ್ರಾ ಸ್ಥಳವಾಗಿ ರೂಪುಗೊಂಡಿದೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !