ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ನಿವೇಶನ ವಿನ್ಯಾಸ ತೆರವಿಗೆ ಬಿಡಿಎ ನಿರ್ಣಯ

ಕೊಳಾರ(ಕೆ), ಪ್ರತಾಪನಗರ ಕೆರೆ ಪ್ರದೇಶ
Last Updated 28 ಜೂನ್ 2021, 14:27 IST
ಅಕ್ಷರ ಗಾತ್ರ

ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಕೊಳಾರ(ಕೆ) ಮತ್ತು ಪ್ರತಾಪನಗರ ಕೆರೆಗಳಲ್ಲಿ ಅನಧಿಕೃತ ನಿವೇಶನ ರಚಿಸಿ ಸೃಷ್ಟಿಸಿರುವ ವಿನ್ಯಾಸಗಳನ್ನು ತೆರವುಗೊಳಿಸಲು ಪ್ರಾಧಿಕಾರ ನಿರ್ಣಯಿಸಿದೆ.

ಇಲ್ಲಿಯ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಬಾಬುವಾಲಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ನಗರದ ಮೋಹನ್ ಮಾರ್ಕೇಟ್, ನಗರಸಭೆ ವಿನ್ಯಾಸದಲ್ಲಿನ ನಂದಿ ಕಾಲೊನಿ ಹಾಗೂ ನಗರದ ಇತರ ಭಾಗಗಳಲ್ಲಿ ಕಟ್ಟಡ ಪರವಾನಗಿ ಪಡೆಯದೆ ಹಾಗೂ ಕಟ್ಟಡ ಪರವಾನಗಿ ಪಡೆದ ಅವಧಿ ಮುಗಿದರೂ ನವೀಕರಿಸಿದೆ, ಅನುಮೋದನೆ ಪಡೆದ ನಕಾಶೆಗೆ ವ್ಯತಿರಿಕ್ತವಾಗಿ ಅನಧಿಕೃತವಾಗಿ ನಿರ್ಮಿಸಿರುವ ಹಾಗೂ ನಿರ್ಮಿಸುತ್ತಿರುವ ವಾಣಿಜ್ಯ ಮಳಿಗೆಗಳ ತೆರವಿಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಪ್ರಾಧಿಕಾರದಿಂದ ವಿನ್ಯಾಸಗಳಿಗೆ ಅನುಮೋದನೆ ನೀಡುವಾಗ, ಉದ್ಯಾನ, ಬಯಲು ಜಾಗ, ಸಿ.ಎ ನಿವೇಶನಗಳನ್ನು ಸಮತಟ್ಟಾದ/ಒಂದೇ ಕಡೆ ಕಾಯ್ದಿರಿಸಿ ನಕಾಶೆಗೆ ಅನುಮೋದನೆ ನೀಡಲು ನಿರ್ಣಯಿಸಲಾಯಿತು.

ಪ್ರಾಧಿಕಾರ ವ್ಯಾಪ್ತಿಯಲ್ಲಿ ತಲೆ ಎತ್ತುತ್ತಿರುವ ಅನಧಿಕೃತ ವಿನ್ಯಾಸಗಳಿಗೆ ಕಡಿವಾಣ ಹಾಕಲು, ಪ್ರಾಧಿಕಾರದಿಂದ ಅನುಮೋದನೆಗೊಂಡ ವಿನ್ಯಾಸಗಳಲ್ಲಿನ ರಸ್ತೆ, ಉದ್ಯಾನ, ಸಿ.ಎ ನಿವೇಶನ ಅತಿಕ್ರಮಣ, ಪಾರ್ಕಿಂಗ್ ವ್ಯವಸ್ಥೆ, ಸೆಟ್ ಬ್ಯಾಕ್ ಅನುಮೋದನೆ ಪಡೆದ ನಕಾಶೆಗಿಂತ ಹೆಚ್ಚಿನ ಮಹಡಿ ಕಟ್ಟಿರುವ/ಕಟ್ಟುತ್ತಿರುವ ಕಟ್ಟಡಗಳನ್ನು ನಗರಸಭೆ ಸಹಯೋಗದೊಂದಿಗೆ ನಿಯಮಾನುಸಾರ ತೆರವುಗೊಳಿಸಲು ನಿರ್ಧರಿಸಲಾಯಿತು.

ನಗರದ ಐತಿಹಾಸಿಕ ಭೂ ಕಾಲುವೆ ಮಾರ್ಗ, ಬಫರ್ ಝೋನ್‍ನಲ್ಲಿ ಕಟ್ಟಿರುವ, ಕಟ್ಟುತ್ತಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು, ಬಫರ್ ಝೋನ್‍ನಲ್ಲಿ ಯಾವುದೇ ಕಟ್ಟಡ ಕಟ್ಟದಂತೆ ಸಂಬಂಧಪಟ್ಟ ಇಲಾಖೆ ಹಾಗೂ ನಗರಸಭೆಗೆ ನಿರ್ದೇಶನ ನೀಡಲಾಯಿತು.

ಹೊಸ ಖಾಸಗಿ ವಿನ್ಯಾಸ, ಭೂ ಬದಲಾವಣೆ ಪ್ರಕರಣ, ಪೂರ್ಣ ಪ್ರಮಾಣದ ಅಭಿವೃದ್ಧಿ ಹೊಂದದ ವಿನ್ಯಾಸಗಳ ಬಿಡುಗಡೆ, ಸಾರ್ವಜನಿಕ ನಿವೇಶನಗಳ ಉಪ ವಿಭಜನೆ ಹಾಗೂ ಒಗ್ಗೂಡಿಸುವಿಕೆ ಪ್ರಕರಣಗಳಿಗೆ ಅನುಮೋದನೆ ಕೊಡಲಾಯಿತು.

ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಪ್ರಾಧಿಕಾರದ ಸದಸ್ಯರಾದ ಕೆ.ಎಂ. ಸತೀಶ, ರಮೇಶ ಕೆ. ಪಾಟೀಲ, ಡಾ. ಮಹೇಶ ಪಾಟೀಲ, ರಾಜಕುಮಾರ ವಡ್ಡೆ, ಪ್ರಾಧಿಕಾರದ ಆಯುಕ್ತ ಅಭಯಕುಮಾರ, ಪೌರಾಯುಕ್ತ ರವೀಂದ್ರ ಅಂಗಡಿ, ನರೇಂದ್ರಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT