ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಡೆಂಗಿ ಹರಡದಂತೆ ಎಚ್ಚರವಹಿಸಿ

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಂಜುಕುಮಾರ ಪಾಟೀಲ ಸಲಹೆ
Last Updated 17 ಮೇ 2021, 3:11 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯಲ್ಲಿ ಡೆಂಗಿ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದೆ’ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಂಜುಕುಮಾರ ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಡೆಂಗಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡೆಂಗಿ ತಡೆಗಟ್ಟುವಿಕೆ ಮನೆ ಯಿಂದಲೇ ಪ್ರಾರಂಭ’ ಈ ಬಾರಿಯ ಘೋಷವಾಕ್ಯವಾಗಿದೆ. ಮುಂದೆ ಮಳೆಗಾಲ ಇರುವುದರಿಂದ ಡೆಂಗಿ ರೋಗವನ್ನು ನಿಯಂತ್ರಿಸುವುದು ಅತಿ ಅವಶ್ಯವಾಗಿದೆ. ಅಲ್ಲದೇ, ಕೋವಿಡ್ ಬಿಕ್ಕಟ್ಟು ಇರುವುದರಿಂದ ಡೆಂಗಿ ಜಾಗೃತಿ ಮೂಡಿಸಬೇಕಾಗಿದೆ’ ಎಂದರು.

‘ಸಾಮಾನ್ಯವಾಗಿ ವೈರಸ್ ಹೊಂದಿರುವ ಈಡೀಸ್ ಜಾತಿಯ ಹೆಣ್ಣು ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಡೆಂಗಿ ಪ್ರಕರಣಗಳು ಹೆಚ್ಚಾಗಿ ನಗರ-ಪಟ್ಟಣ ಪ್ರದೇಶಗಳಲ್ಲಿ ಕಂಡು ಬರುತ್ತಿವೆ. ಈಡೀಸ್ ಸೊಳ್ಳೆಗಳು ಮನೆಯ ಗೃಹ ಬಳಕೆಗಾಗಿ ಸಂಗ್ರಹಿಸಿಡುವ ನೀರಿನ ತಾಣಗಳಾದ ಡ್ರಮ್, ಬ್ಯಾರಲ್, ನೀರಿನ ತೊಟ್ಟಿಗಳು, ಏರಕೂಲರ್, ಅನುಪಯುಕ್ತ ಟೈಯರ್, ಒಡೆದ ಮಡಕೆಗಳು, ತೆಂಗಿನ ಚಿಪ್ಪಿನ ನೀರಿನಲ್ಲಿ ಸೊಳ್ಳೆಗಳು ಸಂತಾನ ಅಭಿವೃದ್ಧಿಪಡಿಸಿ ಹರಡುತ್ತವೆ’ ಎಂದು ಹೇಳಿದರು.

‘ಸೊಳ್ಳೆಗಳ ನಿರ್ಮೂಲನೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಹಾಯಕರನ್ನು ಪ್ರತಿ ತಿಂಗಳು ಮೊದಲನೇ ಶುಕ್ರವಾರ ಮತ್ತು ಮೂರನೇ ಶುಕ್ರವಾರದಂದು ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯವನ್ನು ನಿರಂತರವಾಗಿ ಕೈಕೊಳ್ಳಲಾಗುತ್ತಿದೆ’ ಎಂದು ಅವರು ಹೇಳಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ್ ಬಿರಾದಾರ ಮಾತನಾಡಿ, ‘ಜಿಲ್ಲಾ ಪಂಚಾಯಿತಿ ಅಧೀನ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ, ನಗರಸಭೆ, ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಡೆಂಗಿ ನಿಯಂತ್ರಣ ಅಭಿಯಾನ ನಡೆಯುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ದೀಪಾ ಖಂಡ್ರೆ, ಡಾ.ರಾಜಶೇಖರ ಪಾಟೀಲ, ಡಾ.ಸಂಗಾರಡ್ಡಿ, ಮೊಹ್ಮದ್‌ ಅಬ್ದುಲ್ ರಫಿ, ರಾಜಶೇಖರ ತಂಬಾಕೆ, ಕಮಲಾಕರ ಹಲಗೆ, ಬಾಬುರಾವ, ಶಿವಕಾಂತ ಮಿತ್ರ, ಲೈಕೋದ್ದಿನ್, ಸಂಗಶಟ್ಟಿ ಬಿರಾದಾರ, ಮಹೆಬೂಬಮಿಯ್ಯಾ, ಕಾಶಿನಾಥ ಹಾದಿ, ತಬ್ರೇಜ್, ಬಸವರಾಜ, ಮಹಮ್ಮದ್ ಸಮಿಯೋದ್ದಿನ್, ರಾಜು ಕುಲಕರ್ಣಿ, ಸಂಗಶೆಟ್ಟಿ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT