ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ನುಗ್ಗೆಕಾಯಿ ಸ್ಥಿರ; ಏರಿದ ಹಿರೇಕಾಯಿ, ಬೀಗುತ್ತಿರುವ ಬೀಟ್‌ರೂಟ್

ತರಕಾರಿ ಮಾರುಕಟ್ಟೆಯಲ್ಲಿ ಬೀಗುತ್ತಿರುವ ಬೀಟ್‌ರೂಟ್
Last Updated 22 ಜುಲೈ 2022, 20:30 IST
ಅಕ್ಷರ ಗಾತ್ರ

ಬೀದರ್: ತರಕಾರಿ ಮಾರುಕಟ್ಟೆಯಲ್ಲಿ ಬಹುತೇಕ ಸೊಪ್ಪುಗಳ ಬೆಲೆ ಸ್ಥಿರವಾಗಿದೆ. ಗ್ರಾಹಕರ ಅಚ್ಚುಮೆಚ್ಚಿನ ತರಕಾರಿಗಳ ಬೆಲೆಯೇ ಹೆಚ್ಚಾಗಿದೆ.

ಸಾಮಾನ್ಯವಾಗಿ ಪ್ರತಿ ಕೆ.ಜಿಗೆ ₹ 60ಗೆ ಮಾರಾಟವಾಗುತ್ತಿದ್ದ ಬೀಟ್‌ರೂಟ್‌ ಬೆಲೆ ದುಪ್ಪಟ್ಟಾಗಿದೆ. ನೆಲಗಡ್ಡೆಗಳ ಮಾರುಕಟ್ಟೆಯಲ್ಲಿ ನನ್ನನ್ನು ಬೀಟ್‌ ಮಾಡುವವರು ಯಾರೂ ಇಲ್ಲ ಎಂದು ಬೀಗುತ್ತಿದೆ. ಅಷ್ಟೇ ಅಲ್ಲ; ಮತ್ತಷ್ಟು ಕಂದಾಗಿ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ಬೆಲೆಯಲ್ಲಿ ಬೆಂಡೆಕಾಯಿ ಬೆಂಡಾಗಿಲ್ಲ. ನುಗ್ಗೆಕಾಯಿ ಇಳಿದಿಲ್. ತರಕಾರಿ ರಾಜ ಬದನೆಕಾಯಿ ಸಹ ಕಿರೀಟ ಗಟ್ಟಿ ಮಾಡಿಕೊಂಡು ಮಾರುಕಟ್ಟೆಯಲ್ಲಿ ಕಾರಬಾರು ನಡೆಸಿದೆ.

ಗಡ್ಡೆಗೆಣಸುಗಳ ಬೆಲೆಯ ಅಬ್ಬರದಲ್ಲಿ ತಣ್ಣಗಿರುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದ ಗಜ್ಜರಿ ಕೆಂಪಾಗಿದ್ದರೂ ಮೆತ್ತಗಾಗಿದೆ. ಮೈತುಂಬಿಕೊಂಡು ಹೆಚ್ಚು ವೈಯಾರ ಮಾಡುವುದು ಸರಿಯಲ್ಲವೆಂದು ಟೊಮೆಟೊ ಸಹ ತಣ್ಣಗಾಗಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಆಲೂಗಡ್ಡೆ, ಎಲೆಕೋಸು, ಬೀನ್ಸ್‌, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ಚವಳೆಕಾಯಿ, ಮೆಂತೆ ಸೊಪ್ಪು, ಹೂಕೋಸು, ಕರಿಬೇವು, ಕೊತಂಬರಿ ಬೆಲೆ ಸ್ಥಿರವಾಗಿದೆ. ಇನ್ನುಳಿದ ತರಕಾರಿಗಳ ಬೆಲೆಯೂ ಎರಡು ವಾರಗಳಿಂದ ₹ 60ರಿಂದ ₹ 80ರ ಆಸುಪಾಸಿನಲ್ಲೇ ಇದೆ.

ಬೀಟ್‌ರೂಟ್‌ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 6 ಸಾವಿರ, ಹಿರೇಕಾಯಿ ₹ 4 ಸಾವಿರ ಹೆಚ್ಚಾಗಿದೆ. ಬದನೆಕಾಯಿ, ಪಾಲಕ್‌ ₹ 3 ಸಾವಿರ, ಬೆಂಡೆಕಾಯಿ ₹ 2 ಸಾವಿರ ಏರಿಕೆಯಾಗಿದೆ. ಸಬ್ಬಸಗಿ, ಟೊಮೆಟೊ, ಗಜ್ಜರಿ ₹ 1 ಸಾವಿರ ಇಳಿದಿದೆ.

‘ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ಬರುವ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಬಹುಬೇಡಿಕೆಯ ತರಕಾರಿ ಕಡಿಮೆ ಪ್ರಮಾಣದಲ್ಲಿ ಬಂದಿದೆ. ಹೀಗಾಗಿ ಸಹಜವಾಗಿಯೇ ನಗರದಲ್ಲಿ ಕೆಲ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ, ಬೀಟ್‌ರೂಟ್‌, ಗಜ್ಜರಿ, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ತುಪ್ಪದ ಹಿರೇಕಾಯಿ ಬೀದರ್‌ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ.

ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ ಬಂದಿದೆ. ಜಿಲ್ಲೆಯ ಚಿಟಗುಪ್ಪ ಹಾಗೂ ಹುಮನಾಬಾದ್‌ ತಾಲ್ಲೂಕಿನಿಂದ ಕರಿಬೇವು, ಕೊತಂಬರಿ, ಬದನೆಕಾಯಿ, ಬೆಂಡೆಕಾಯಿ, ಎಲೆಕೋಸು, ಹಿರೇಕಾಯಿ, ಸೌತೆಕಾಯಿ ಹಾಗೂ ಅವರೆಕಾಯಿ ಬಂದಿದೆ.

****

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ
ಈರುಳ್ಳಿ 20-30, 20-30
ಮೆಣಸಿನಕಾಯಿ 50-60, 50-60
ಆಲೂಗಡ್ಡೆ 30-40, 30-40
ಎಲೆಕೋಸು 40-50, 40-50
ಬೆಳ್ಳುಳ್ಳಿ 30-40, 30-40
ಗಜ್ಜರಿ 60-80, 60-70
ಬೀನ್ಸ್‌ 100-120, 100-120
ಬದನೆಕಾಯಿ 40-50, 60-80
ಮೆಂತೆ ಸೊಪ್ಪು 60-80, 60-80
ಹೂಕೋಸು 70-80, 60-80
ಸಬ್ಬಸಗಿ 60-80, 60-70
ಬೀಟ್‌ರೂಟ್‌ 50-60, 100-120
ಕರಿಬೇವು 30-40, 30-40
ಕೊತಂಬರಿ 50-60, 50-60
ಟೊಮೆಟೊ 20-30, 10-20
ಪಾಲಕ್‌ 40-50, 60-80
ಬೆಂಡೆಕಾಯಿ 50-60, 60-80
ಹಿರೇಕಾಯಿ 60-80, 100-120
ನುಗ್ಗೆಕಾಯಿ 100-120,100-120
ಡೊಣ ಮೆಣಸಿನಕಾಯಿ 60-80,60-80
ಚವಳೆಕಾಯಿ 50-60,60-80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT