ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಭಗವಂತ ಖೂಬಾ ಅವರಿಂದ ಕಡು ಬಡವರಿಗೆ ದ್ರೋಹ: ಗೀತಾ ಚಿದ್ರಿ

Last Updated 8 ಆಗಸ್ಟ್ 2020, 15:47 IST
ಅಕ್ಷರ ಗಾತ್ರ

ಬೀದರ್: ಜನರಿಂದ ಆಯ್ಕೆಯಾಗಿ ಜನರಿಗೆ ಅದರಲ್ಲೂ ಕಡು ಬಡವರಿಗೆ ದೊಡ್ಡ ದ್ರೋಹ ಮಾಡುತ್ತಿರುವ ಸಂಸದ ಭಗವಂತ ಖೂಬಾ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟುವ ಕಾರ್ಯವನ್ನೂ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಆರೋಪಿಸಿದ್ದಾರೆ.

ಖುದ್ದು ತಾವೇ ಭಾಲ್ಕಿ ವಸತಿ ಯೋಜನೆ ವಿರುದ್ಧ ಸುಳ್ಳು ಆರೋಪ ಮಾಡಿ, ಅರ್ಹ ಫಲಾನುಭವಿಗಳಿಗೆ ಹಣ ದೊರಕುವುದನ್ನು ವಿಳಂಬ ಮಾಡಿಸಿ, ಈಗ ಪಿಡಿಒಗಳ ಮೇಲೆ ಕ್ರಮದ ಬೆದರಿಕೆ ಹಾಕುತ್ತಿರುವುದು ಖಂಡನೀಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾಲ್ಕಿ ತಾಲ್ಲೂಕಿನ ವಸತಿ ಯೋಜನೆ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ವಿಳಂಬವಾಗಲು, ಸ್ಥಗಿತವಾಗಲು ಖೂಬಾ ಅವರೇ ಕಾರಣ ಎಂದು ಆಪಾದಿಸಿದ್ದಾರೆ.

ಶಾಸಕ ಈಶ್ವರ ಖಂಡ್ರೆ ಅವರು ಹಿಂದಿನ ಸರ್ಕಾರದಲ್ಲಿ ಬಡ ವಸತಿ ರಹಿತರಿಗಾಗಿ ಸಾವಿರಾರು ಮನೆಗಳನ್ನು ಮಂಜೂರು ಮಾಡಿಸಿದ್ದರು. ಗುಡಿಸಲು ಮುಕ್ತ ತಾಲ್ಲೂಕಿನ ಸಂಕಲ್ಪ ಹೊಂದಿದ್ದರು. ಇದು ಸಾಕಾರವಾದರೆ ಖಂಡ್ರೆ ಅವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಹೊಟ್ಟೆಕಿಚ್ಚಿನಿಂದ ವಾಮಮಾರ್ಗದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನಗತ್ಯವಾಗಿ ಭಾಲ್ಕಿ ವಸತಿ ಯೋಜನೆಯಲ್ಲಿ ಮೂಗು ತೋರಿಸಿ ಸುಳ್ಳು ಆರೋಪ ಮಾಡಿ, ತಾವೇ ಸರ್ಕಾರದಿಂದ ತನಿಖೆಗೆ ಅರ್ಹರಲ್ಲದ ಅಧಿಕಾರಿಗಳನ್ನು ಕಳುಹಿಸಿ, ಅಕ್ರಮ ನಡೆದಿದೆ ಎಂದು ಸುಳ್ಳು ವದಂತಿ ಸೃಷ್ಟಿ ಮಾಡಿ, ಅರ್ಹ ಬಡ ಫಲಾನುಭವಿಗಳಿಗೆ ಎರಡು ವರ್ಷದಿಂದಲೂ ಅನಗತ್ಯವಾಗಿ ಕಿರುಕುಳ ನೀಡುತ್ತಿರುವವರು ಖೂಬಾ ಅಲ್ಲದೆ ಮತ್ತಾರೂ ಅಲ್ಲ ಎಂದು ಹೇಳಿದ್ದಾರೆ.

ಖಂಡ್ರೆ ಅವರ ವಿರುದ್ಧ ಸುಳ್ಳು ಆರೋಪ ಮಾಡುವುದರಲ್ಲೇ ಕಾಲಹರಣ ಮಾಡುವುದನ್ನು ಬಿಟ್ಟು ಜನಸೇವೆ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT