ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ’

ಔರಾದ್‍ನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾಗೆ ಕಾರ್ಯಕರ್ತರಿಂದ ಭವ್ಯ ಸ್ವಾಗತ
Last Updated 18 ಆಗಸ್ಟ್ 2021, 5:15 IST
ಅಕ್ಷರ ಗಾತ್ರ

ಔರಾದ್:‘ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಜಿಲ್ಲೆಯ ಅಭಿವೃದ್ಧಿ ವೇಗ ಹೆಚ್ಚಲಿದೆ. ಇಲ್ಲಿ ಆಗಬೇಕಾದ ಕೆಲಸದ ಕುರಿತು ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರದಿಂದ ಮಂಜೂರಾತಿ ಕೊಡಿಸುವುದು ನನ್ನ ಜವಾಬ್ದಾರಿ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಪಟ್ಟಣದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಕೇಂದ್ರದಲ್ಲಿ ನಾನು ಮಂತ್ರಿ ಹಾಗೂ ರಾಜ್ಯದಲ್ಲಿ ಪ್ರಭು ಚವಾಣ್ ಸಚಿವರಾಗಿದ್ದಾರೆ. ಹೀಗಾಗಿ ಇಬ್ಬರ ತವರು ಕ್ಷೇತ್ರ ಔರಾದ್ ಹಾಗೂ ಜಿಲ್ಲೆಯ ಅಭಿವೃದ್ಧಿ ಮಾಡಲು ಇದೊಂದು ಸದಾವಕಾಶ ದೊರೆತಿದೆ. ಈಗಾಗಲೇ ರಾಜ್ಯದಲ್ಲಿ ಕರೆ ತುಂಬಿಸುವ ಯೋಜನೆಗೆ ಕೇಂದ್ರದಿಂದ ಮಂಜುರಾತಿ ಸಿಕ್ಕಿದೆ. ಇದರಲ್ಲಿ ಔರಾದ್ ತಾಲ್ಲೂಕಿನ 26 ಕೆರೆಗಳು ಸೇರಿವೆ. ಈ ಯೋಜನೆ ಜಾರಿಯಾದರೆ ಶೇ 60ರಷ್ಟು ರೈತರ ಭೂಮಿ ನೀರಾವರಿಗೆ ಒಳಪಡಲಿದೆ’ ಎಂದು ತಿಳಿಸಿದರು.

‘ಇಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ 12 ಸಾವಿರ ಎಕರೆ ಜಮೀನು ಅಗತ್ಯವಿದೆ. ಆದರೆ 2,500 ಎಕರೆ ಮಾತ್ರ ತೋರಿಸಲಾಗಿದೆ. ಈ ವಿಷಯದಲ್ಲಿ ಸಚಿವ ಪ್ರಭು ಚವಾಣ್ ಅವರು ಮುತುವರ್ಜಿ ವಹಿಸಿ ಜಮೀನು ಒದಗಿಸಿಕೊಟ್ಟರೆ ಆದಷ್ಟು ಬೇಗ ಸೋಲಾರ್ ಪಾರ್ಕ್ ಆಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಮಾತನಾಡಿ, ‘ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ನಾನು ಸೇರಿ ಈ ತಾಲ್ಲೂಕು ಮತ್ತು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ. ಬೀದರ್- ಔರಾದ್ ಹೆದ್ದಾರಿ, ಬೀದರ್-ನಾಂದೇಡ್ ಹೊಸ ರೈಲು ಮಾರ್ಗ, ಸೋಲಾರ್ ಪಾರ್ಕ್ ಸ್ಥಾಪನೆ ಸೇರಿದಂತೆ ಕೆಲ ಮಹತ್ವದ ಕಾಮಗಾರಿ ಮಾಡುವ ಜವಾಬ್ದಾರಿ ಖೂಬಾ ಅವರ ಮೇಲಿದೆ’ ಎಂದು ಹೇಳಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ ಹಿರೇಮನಿ ಮಾತನಾಡಿ, ‘ಕಾಂಗ್ರೆಸ್‍ನವರು ಸಂಸತ್ತಿನಲ್ಲಿ ಹೊಸದಾಗಿ ಸಚಿವರಾದವರ ಪರಿಚಯ ಮಾಡಿಕೊಡಲು ಅವಕಾಶ ನೀಡಲಿಲ್ಲ. ಈ ಕಾರಣ ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲಾಗುತ್ತಿದೆ. ಇದಕ್ಕೆ ಜನರಿಂದ ಅಭೂತ ಪೂರ್ವ ಬೆಂಬಲ ಸಿಗುತ್ತಿದೆ’ ಎಂದು ತಿಳಿಸಿದರು.

ಬಿಜೆಪಿ ವಿಭಾಗೀಯ ಪ್ರಮುಖ ಈಶ್ವರಸಿಂಗ್ ಠಾಕೂರ್ ಮಾತನಾಡಿದರು. ಹಜ್ ಸಮಿತಿ ಅಧ್ಯಕ್ಷ ರೌಫೋದ್ದಿನ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಧುರೀಣ ಗಣಪತರಾವ ಖೂಬಾ, ವಿಜಯಕುಮಾರ ಪಾಟೀಲ, ಪ್ರಕಾಶ ಟೊಣ್ಣೆ, ಬಂಡೆಪ್ಪ ಕಂಟೆ, ವಸಂತ ವಕೀಲ, ಶರಣಪ್ಪ ಪಂಚಾಕ್ಷಿರೆ, ಜಗದೀಶ ಖೂಬಾ, ರಮೇಶ ದೇವಕತೆ, ಶ್ರೀಮಂತ ಪಾಟೀಲ ಹೆಡಗಾಪುರ, ಹರಹಂತ ಸಾವಳೆ, ಚನ್ನಬಸಪ್ಪ ಬಿರಾದಾರ, ಸುರೇಶ ಭೋಸ್ಲೆ, ರಮೇಶ ಬಿರಾದಾರ ಉಪಸ್ಥಿತರಿದ್ದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಸ್ವಾಗತಿಸಿದರು. ಖಂಡೋಬಾ ಕಂಗಟೆ ನಿರೂಪಿಸಿದರು.

ಭವ್ಯ ಸ್ವಾಗತ: ಕೇಂದ್ರ ಸಚಿವರಾಗಿ ಪ್ರಥಮ ಬಾರಿಗೆ ತವರು ತಾಲ್ಲೂಕಿಗೆ ಆಗಮಿಸಿದ ಭಗವಂತ ಖೂಬಾ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಖೂಬಾ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಜಯಘೋಷ ಕೂಗಿದರು. ಕನ್ನಡಾಂಬೆ ವೃತ್ತದಿಂದ ಅಮರೇಶ್ವರ ದೇವಸ್ಥಾನವರೆಗೆ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿದರು.

‘ಕೆಲಸ ಮಾಡದಿದ್ದರೆ ಜನರು ತಕ್ಕ ಪಾಠ ಕಲಿಸ್ತಾರೆ’

ಔರಾದ್: ‘ಈಗ ನಾವು ಇಬ್ಬರು ಮಂತ್ರಿಗಳು. ಕೆಲಸ ಆಗದಿದ್ದರೆ ಮುಂದಿನ ಚುನಾವಣೆಯಲ್ಲಿ ಮತದಾರ ನಮಗೆ ಪಾಠ ಕಲಿಸುತ್ತಾರೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೇಳಿದರು.

ಮಂಗಳವಾರ ಇಲ್ಲಿ ಆಯೋಜಿಸಿದ ಕೇಂದ್ರ ಸಚಿವ ಭಗವಂತ ಖೂಬಾ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ‘ಬೀದರ್-ಔರಾದ್ ಹೆದ್ದಾರಿ ಮಂಜೂರಾಗಿ ಒಂದು ವರ್ಷದ ಹಿಂದೆ ಭೂಮಿಪೂಜೆ ಆಗಿದೆ. ಆದರೂ ಕಾಮಗಾರಿ ಶುರುವಾಗಿಲ್ಲ. ಇದರಿಂದ ಜನರಲ್ಲಿ ನಿರಾಶೆ ಭಾವ ಮೂಡಿದೆ. ಹೀಗೆ ಆದರೆ ನಾನು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ’ ಎಂದರು.

ಚವಾಣ್ ಮಾತಿಗೆ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ ಭಗವಂತ ಖೂಬಾ ‘ನಿಮ್ಮ ಚುನಾವಣೆಯ ಆರು ತಿಂಗಳ ಮೊದಲು ಈ ರಸ್ತೆ ಕಾಮಗಾರಿ ಪೂರ್ಣಗೊಳಿಸುತ್ತೇವೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಕೆಲಸದ ವಿಷಯದಲ್ಲಿ ತಮ್ಮ ಜೊತೆ ಜೋಡೆತ್ತಿನ ರೀತಿಯಲ್ಲಿ ಕೆಲಸ ಮಾಡುತ್ತೇನೆ. ತಮ್ಮಿಂದಲೂ ನಾನು ಇದನ್ನೇ ನಿರೀಕ್ಷಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT