ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂದರ್ಶನ: ನನಗೆ ಮತ ಹಾಕಿದರೆ ಮೋದಿಗೆ ಮತ – ಬಿಜೆಪಿಯ ಭಗವಂತ ಖೂಬಾ

ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಸಂದರ್ಶನ
Published 28 ಏಪ್ರಿಲ್ 2024, 5:00 IST
Last Updated 28 ಏಪ್ರಿಲ್ 2024, 5:00 IST
ಅಕ್ಷರ ಗಾತ್ರ

ಬೀದರ್‌ ಲೋಕಸಭಾ ಕ್ಷೇತ್ರದ ಹಾಲಿ ಸಂಸದರೂ, ಕೇಂದ್ರ ಸಚಿವ ಭಗವಂತ ಖೂಬಾ ಅವರು ಮೂರನೇ ಬಾರಿಗೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಹಾಗೂ ತಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ ಮತದಾರರು ‘ಹ್ಯಾಟ್ರಿಕ್‌’ ಗೆಲುವು ತಂದುಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆ ಪ್ರಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ‘ಪ್ರಜಾವಾಣಿ’ ಬೀದರ್‌ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್‌. ಶೆಂಬೆಳ್ಳಿ ಜೊತೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಂತಿದೆ.

* ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ. ಮತದಾರರು ಏನಂತಾರೆ?

ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನಗಳ ಮುಂಚಿತವಾಗಿಯೇ ಬಿಜೆಪಿ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳ ನಾಯಕರು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಎಲ್ಲ ಕಡೆ ಎರಡೆರಡು ಬೈಠಕ್‌ಗಳಾಗಿವೆ. ಎಲ್ಲ ಕಡೆ ಪ್ರವಾಸ ಮುಗಿದಿದೆ. ಜನರ ನಾಡಿ ಮಿಡಿತ ನೋಡಿದಾಗ ಖಂಡಿತ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವೆ. ಮುಂದೆ ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಪ್ರಚಾರ ಕೈಗೊಂಡು ಮತಗಳ ಅಂತರ ಹೆಚ್ಚಿಸಿಕೊಳ್ಳುವ ಪ್ರಯತ್ನ ನಾವೆಲ್ಲರೂ ಮಾಡಲಿದ್ದೇವೆ.

* ಹತ್ತು ವರ್ಷಗಳ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದೀರಿ? ಪುನಃ ಗೆದ್ದರೆ ಏನು ಮಾಡಬೇಕು ಅಂದುಕೊಂಡಿದ್ದೀರಿ?

ಮೂಲಭೂತ ಸೌಕರ್ಯಗಳು ಉತ್ತಮ ರೀತಿಯಲ್ಲಿ ಕಲ್ಪಿಸಿದ್ದೇನೆ. ಮುಂದೆ ಗೆದ್ದರೆ ಬೀದರ್‌ ಜಿಲ್ಲೆಗೆ ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ತರುವೆ. ಮತ್ತೊಂದು ಹಂತದಲ್ಲಿ ಬೀದರ್‌ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡುವೆ.

* ಕಾಂಗ್ರೆಸ್‌ನವರು ಅವರ ‘ಗ್ಯಾರಂಟಿ’ ಎಂದು ಹೇಳುತ್ತಿದ್ದಾರೆ. ನೀವು (ಬಿಜೆಪಿ) ಮೋದಿ ಗ್ಯಾರಂಟಿ ಎನ್ನುತ್ತಿದ್ದೀರಿ. ಮತದಾರರು ಯಾರ ‘ಗ್ಯಾರಂಟಿ’ ನಂಬಬೇಕು?

ಮೋದಿಯವರ ಮೇಲೆ ವಿಶ್ವಾಸ ಇದೆ. 12 ವರ್ಷ ಅವರು ಸಿ.ಎಂ. ಆಗಿ ಗುಜರಾತ್‌ ಅಭಿವೃದ್ಧಿ ಪಡಿಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಬದಲಾವಣೆ ತಂದಿದ್ದಾರೆ. ಅಭಿವೃದ್ಧಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ, ವರ್ಚಸ್ಸು ಹೆಚ್ಚಾಗಿದೆ. ಅದನ್ನೆಲ್ಲ ಸಾಮಾನ್ಯ ಜನ ಕೂಡ ಗಮನಿಸುತ್ತಿದ್ದಾರೆ. ಮೋದಿಯವರು ಇದ್ದರೆ ಮಾತ್ರ ದೇಶದ ಉಳಿವು, ನಮ್ಮ ಉಳಿವು ಇದೆ ಎಂಬ ಅಭಿಮಾನ ಜನರು ಇಟ್ಟುಕೊಂಡಿದ್ದಾರೆ.

* ಈ ಚುನಾವಣೆಯಲ್ಲಿ ಮೋದಿ ವರ್ಚಸ್ಸು ಎಷ್ಟು, ನಿಮ್ಮ ವೈಯಕ್ತಿಕ ವರ್ಚಸ್ಸು ಎಷ್ಟರಮಟ್ಟಿಗೆ ಕೆಲಸ ಮಾಡಲಿದೆ?

ಮೋದಿಯವರು ನಮ್ಮ ಅಗ್ರಗಣ್ಯ ನಾಯಕರು. ಅವರ ಹೆಸರಿನ ಮೇಲೆ ಅಭ್ಯರ್ಥಿಯಾಗಿ ನಾನು ಮತಗಳನ್ನು ಕೇಳುತ್ತಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಸಾಧನೆಗಳನ್ನು ಮಾಡಿ ನನ್ನ ವರ್ಚಸ್ಸು ಸಂಪಾದಿಸಿಕೊಂಡಿದ್ದೇನೆ. ಮೋದಿಯವರು ಪ್ರಧಾನಿ ಆಗುವವರಿದ್ದಾರೆ. ಹಾಗಾಗಿ ಅವರ ಹೆಸರ ಮೇಲೆ ಮತ ಕೇಳುತ್ತಿದ್ದೇವೆ. ಪ್ರತಿಯೊಂದು ಮತದಾರರ ಮತವೂ ಮೋದಿಯವರ ಖಾತೆಗೆ ಹೋಗುತ್ತದೆ.

* ಉದ್ಯೋಗ ಹುಡುಕಿಕೊಂಡು ಕ್ಷೇತ್ರದ ಯುವಕರು ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ವಲಸೆ ತಡೆಯಲು ಏನಾದರೂ ಯೋಜನೆಗಳಿವೆಯಾ?

ಬೀದರ್‌ ಜಿಲ್ಲೆಗೆ ₹13 ಸಾವಿರ ಕೋಟಿ ಹೂಡಿಕೆ ಆಗಿದೆ. ಸೋಲಾರ್‌ ಪಾರ್ಕ್‌ ಮಂಜೂರಾತಿ ಮಾಡಿಸಿದ್ದೇನೆ. ಅದಕ್ಕೆ ರಾಜ್ಯ ಸರ್ಕಾರ ಜಮೀನು ಕೊಡುತ್ತಿಲ್ಲ. ಜಮೀನು ಕೊಟ್ಟರೆ 10,500 ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದಕ್ಕಿಂತ ದೊಡ್ಡ ಕೈಗಾರಿಕೆ ಜಿಲ್ಲೆಗೆ ಬೇರೊಂದು ಬೇಕಿಲ್ಲ. ಇದರಿಂದ ಪರಿಸರ ಮಾಲಿನ್ಯವೂ ಆಗುವುದಿಲ್ಲ. ನೀರು ಬೇಕಿಲ್ಲ, ಕರೆಂಟ್‌ ಬೇಕಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಇದರ ಪರಿಕಲ್ಪನೆ ಇಲ್ಲ. ಅಭಿವೃದ್ಧಿಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ಆ ಕೆಲಸ ಮಾಡಿಲ್ಲ. ಅಹಂಕಾರದಿಂದ ಓಡಾಡುತ್ತಾರೆ.

* ಚುನಾವಣೆಯಲ್ಲಿ ನಿಮ್ಮ ಪ್ರಮುಖ ಪ್ರತಿಸ್ಪರ್ಧಿ ಈಶ್ವರ ಬಿ.ಖಂಡ್ರೆಯವರ ಮಗ ಸಾಗರ್‌ ಖಂಡ್ರೆ. ಇದನ್ನು ಹೇಗೆ ನೋಡುವಿರಿ?

ಜನ ಈಗಾಗಲೇ ನನ್ನ ಹತ್ತು ವರ್ಷಗಳ ಕೆಲಸ ನೋಡಿದ್ದಾರೆ. ಉತ್ತಮ ಅನುಭವ ಪಡೆದಿದ್ದೇನೆ. ಕೇಂದ್ರ ಸರ್ಕಾರದಲ್ಲಿ ಒಬ್ಬ ಪ್ರಭಾವಿ ನಾಯಕನಾಗಿ ಬೆಳೆದಿದ್ದಾನೆ. ಮತ್ತೊಮ್ಮೆ ಅವರಿಗೆ ಆಯ್ಕೆ ಮಾಡಿದರೆ ಮತ್ತೆ ಉನ್ನತ ಹುದ್ದೆ ಸಿಗುತ್ತದೆ. ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗುತ್ತದೆ ಎನ್ನುವುದು ಕ್ಷೇತ್ರದ ಮತದಾರರ ಮಾತಾಗಿದೆ. ಹೀಗಾಗಿ ಜನ ನನಗೆ ಮತ ಹಾಕಿ ಗೆಲ್ಲಿಸುತ್ತಾರೆ.

* ಮರಾಠ ಸಮುದಾಯದ ಮುಖಂಡ ಡಾ.ದಿನಕರ್‌ ಮೋರೆ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇದು ಎಷ್ಟರಮಟ್ಟಿಗೆ ಬಿಜೆಪಿ ಮೇಲೆ ಪ್ರಭಾವ ಬೀರಲಿದೆ?

ಮರಾಠ ಸಮಾಜದ ಮತದಾರರು ಯಾವಾಗಲೂ ರಾಷ್ಟ್ರ ಚಿಂತನೆಯ ಮತದಾರರು, ರಾಷ್ಟ್ರವಾದಿಗಳು. ಅದಕ್ಕೆ ಹಿನ್ನೆಲೆಯೂ ಇದೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದುತ್ವ, ದೇಶಕ್ಕಾಗಿ, ದೀನ ದಲಿತರು, ಬಡವರು, ಮಹಿಳೆಯರ ಏಳಿಗೆಗಾಗಿ ದುಡಿದ ಇತಿಹಾಸ ಇದೆ. ಆ ಇತಿಹಾಸದ ಹಿನ್ನೆಲೆಯಲ್ಲಿ ನೋಡಿದರೆ ಮರಾಠ ಸಮಾಜ ಮೋದಿಯವರ ಬೆನ್ನಿಗೆ ನಿಂತಿದೆ. ಹೀಗಾಗಿ ಇಲ್ಲಿ ಬಿಜೆಪಿ ಗೆಲ್ಲಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT