ಮಂಗಳವಾರ, ಜನವರಿ 31, 2023
19 °C

ಭಾಲ್ಕಿ: ಜನಪದ ನೃತ್ಯೋತ್ಸವ ಸಮಾರಂಭದಲ್ಲಿ ಡಾ.ಮಹೇಶ ಬಿರಾದಾರ ಬಣ್ಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಈ ಭಾಗದಲ್ಲಿ ಹಿರೇಮಠ ಸಂಸ್ಥಾನ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸದಾ ಪ್ರೋತ್ಸಾಹ ನೀಡುವ ಮೂಲಕ ಅವುಗಳನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ವೈದ್ಯ ಡಾ.ಮಹೇಶ ಬಿರಾದಾರ ಬಣ್ಣಿಸಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಸಾಂಸ್ಕೃತಿಕ ಸಚಿವಾಲಯ ನವ ದೆಹಲಿ, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್, ಡಾ.ಚನ್ನಬಸವ ಪಟ್ಟದ್ದೇವರು ಯುವಕ ಸಂಘ, ತಾಲ್ಲೂಕು ಜಾನಪದ ಪರಿಷತ್ತು, ಅಕ್ಕಮಹಾದೇವಿ ಮಹಿಳಾ ಮಂಡಳ ನಾವದಗೇರಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜನಪದ ನೃತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಸಾಹಿತ್ಯ ಪ್ರಾಚೀನ ಭಾರತದ ಸಂಸ್ಕೃತಿ, ಪರಂಪರೆ ಬಿಂಬಿಸುತ್ತದೆ. ಇದನ್ನು ನಮ್ಮ ಹಿರಿಯರು ಬಳವಳಿಯಾಗಿ ಕೊಟ್ಟಿದ್ದಾರೆ. ಜನಪದ ಸಾಹಿತ್ಯ ಆಧ್ಯಾತ್ಮಿಕತೆ, ಜೀವನದ ಮೌಲ್ಯ, ಬದುಕುವ ಕಲೆ, ನೈತಿಕತೆ, ಮಾನವೀಯತೆ ಕಲಿಸಿಕೊಡುತ್ತದೆ. ಹಾಗಾಗಿ ನಮ್ಮ ಕಲೆ, ಸಂಸ್ಕೃತಿ, ಪರಂಪರೆಯನ್ನು ಎಂದಿಗೂ ಬಿಟ್ಟು ಕೊಡಬಾರದು ಎಂದರು.

ಸಾನಿಧ್ಯ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ನಮ್ಮ ನೆಲದ ಸಂಸ್ಕೃತಿ, ಜನಪದ ಸಾಹಿತ್ಯದ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದರು.

ಎಚ್.ನರಸಿಂಹಯ್ಯ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಸುಭಾಷ ನೇಳಗೆ ಅವರನ್ನು ಸನ್ಮಾನಿಸಲಾಯಿತು. ಹಿರೇಮಠ ಸಂಸ್ಥಾನದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ಡಾ.ಚನ್ನಬಸವ ಪಟ್ಟದ್ದೇವರು ಯುವಕ ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ, ಔರಾದ್ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಡಾ.ಸಂಜೀವಕುಮಾರ ಜುಮ್ಮಾ, ತಾಲ್ಲೂಕು ಅಧ್ಯಕ್ಷ ವಸಂತರಾವ್ ಹುಣಸನಾಳೆ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಮುಗಟೆ, ರಮೇಶ ಮಾಶೆಟ್ಟೆ, ಶಿವಶರಣಪ್ಪ ಗಣೇಶಪುರ, ಬಸವರಾಜ ಮರೆ ಇದ್ದರು.

ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ತು ಜಿಲ್ಲಾ ಘಟಕದ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಶಿಕ್ಷಕ ಲಕ್ಷ್ಮಣ ಮೇತ್ರೆ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.